ADVERTISEMENT

ನಾಡಿಗೆ ಕೊಡುಗೆ ನೀಡುವ ಮನಸ್ಥಿತಿ ಬರಲಿ ; ರಾಜು ಕಾಗೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 5:11 IST
Last Updated 30 ಡಿಸೆಂಬರ್ 2025, 5:11 IST
ಎನ್‌ಡಬ್ಲುಕೆಆರ್‌ಟಿಸಿ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಹುಬ್ಬಳ್ಳಿಯ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು
ಎನ್‌ಡಬ್ಲುಕೆಆರ್‌ಟಿಸಿ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಹುಬ್ಬಳ್ಳಿಯ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು   

ಹುಬ್ಬಳ್ಳಿ: ‘ಸರ್ಕಾರಿ ಶಾಲೆಗಳ ಶಿಕ್ಷಕರೇ ತಮ್ಮ ಮಕ್ಕಳನ್ನು ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಓದಿಸುತ್ತಿದ್ದಾರೆ. ಇದು ನಿಲ್ಲಬೇಕು’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲುಕೆಆರ್‌ಟಿಸಿ) ಅಧ್ಯಕ್ಷ  ಭರಮಗೌಡ (ರಾಜು) ಕಾಗೆ ಹೇಳಿದರು.

ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಕನ್ನಡ ಕ್ರಿಯಾ ಸಮಿತಿ ವತಿಯಿಂದ ನಗರದ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದೇಶದ ಮಕ್ಕಳು ಶಿಕ್ಷಣವಂತರಾಗಬೇಕು. ಒಳ್ಳೆಯ ವ್ಯಕ್ತಿಯಾಗಿ, ಗೌರವದಿಂದ ಬಾಳಿ ನಾಡಿಗಾಗಿ ಕೊಡುಗೆ ನೀಡುವ ಮನಸ್ಥಿತಿಯನ್ನು ಶಿಕ್ಷಣವು ಮೂಡಿಸಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ADVERTISEMENT

‘ಕ‌ನ್ನಡ ನಾಡಿನ ಸಂಸ್ಕಾರ, ಸಂಸ್ಕೃತಿ ಮೆಚ್ಚುವಂತಹ ಸಂಗತಿ. ಸಂಸ್ಥೆಯ ಸಿಬ್ಬಂದಿಯ ಮಕ್ಕಳು ಮಾಡಿದ ಶೈಕ್ಷಣಿಕ ಸಾಧನೆ ಹೆಮ್ಮೆ ತರಿಸುತ್ತದೆ’ ಎಂದರು.

ಕನ್ನಡ ಕ್ರಿಯಾ ಸಮಿತಿ ವಲಯ ಅಧ್ಯಕ್ಷ ಜಿ.ಸಿ. ಕಮಲದಿನ್ನಿ ಮಾತನಾಡಿ, ‘ರಾಮ ಜಾಧವ ಸ್ಮರಣಾರ್ಥವಾಗಿ ಸಂಸ್ಥೆಯಿಂದ ಕೊಡಮಾಡುವ ಪ್ರಶಸ್ತಿಯ ಮೊತ್ತವ‌ನ್ನು ₹25 ಸಾವಿರದ ಬದಲಾಗಿ ₹1 ಲಕ್ಷಕ್ಕೆ ಹೆಚ್ಚಿಸಬೇಕು’ ಎಂದು ಮನವಿ ಮಾಡಿದರು. ಈ ನಿಟ್ಟಿನಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ಭರವಸೆ ನೀಡಿದರು.

ಕಳೆದ ಸಾಲಿನ ಎಸ್ಎಸ್ಎಲ್‌ಸಿ ಮತ್ತು ‍ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ಗ್ರಾಮಾಂತರ ಘಟಕದ ಸಿಬ್ಬಂದಿಯ ಮಕ್ಕಳನ್ನು ಪುರಸ್ಕರಿಸಲಾಯಿತು. 31 ಮಕ್ಕಳಿಗೆ ಒಟ್ಟಾರೆ ₹1.08 ಲಕ್ಷ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಎನ್‌ಡಬ್ಲುಕೆಆರ್‌ಟಿಸಿ ಉಪಾಧ್ಯಕ್ಷ ಸುನೀಲ ಹನುಮಣ್ಣವರ, ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌.ರಾಮನಗೌಡರ, ಮಂಜುನಾಥ ಕಟ್ಟಿಮನಿ, ದೀಪಕ ಜಾಧವ, ವೈ.ಎಂ. ಶಿವರೆಡ್ಡಿ, ಪಿ. ಮಹದೇವಸ್ವಾಮಿ, ರಾಜೇಂದ್ರ ಆರ್.ಎಂ., ಮೃತ್ಯುಂಜಯ ಮಟ್ಟಿ ಹಾಜರಿದ್ದರು.

‘ನಿಲ್ದಾಣಗಳಿಗೆ ಮಹನೀಯರ ಹೆಸರಿಡಿ’ ಗೋಕುಲ ರಸ್ತೆಯ ಕೇಂದ್ರ ಬಸ್ ನಿಲ್ದಾಣಕ್ಕೆ ವೀರ ಚಕ್ರವರ್ತಿ ಪುಲಿಕೇಶಿ ಬಸ್ ನಿಲ್ದಾಣ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣಕ್ಕೆ ಮಯೂರ ಬಸ್ ನಿಲ್ದಾಣ ನಗರ ಮತ್ತು ಉಪನಗರ ಸಾರಿಗೆ ಬಸ್ ನಿಲ್ದಾಣಕ್ಕೆ (ಹಳೇ ಬಸ್ ನಿಲ್ದಾಣ) ರಾಣಿ ಚನ್ನಮ್ಮ ಬಸ್ ನಿಲ್ದಾಣವೆಂದು ಹಾಗೂ ಸಿಬಿಟಿಗೆ ಹೊಯ್ಸಳ ಬಸ್ ನಿಲ್ದಾಣವೆಂದು ನಾಮಕರಣ ಮಾಡಬೇಕು ಎಂದು ವೀರ ಪುಲಿಕೇಶಿ ಕನ್ನಡ ಬಳಗವು ಇದೇ ವೇಳೆ ಅಧ್ಯಕ್ಷ ಭರಮಗೌಡ ಕಾಗೆ ಅವರಿಗೆ ಮನವಿ ಸಲ್ಲಿಸಿತು. ‘ಹಲವು ಬಸ್ ನಿಲ್ದಾಣಗಳಿರುವ ಕಾರಣ ಪ್ರಯಾಣಿಕರು ಟಿಕೆಟ್ ಪಡೆಯುವಾಗ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ನಿರ್ದಿಷ್ಟ ನಿಲ್ದಾಣ ಹೊರತಾಗಿ ಬೇರೆ ಕಡೆಗಳಲ್ಲಿ ಇಳಿದುಕೊಳ್ಳುತ್ತಿದ್ದಾರೆ. ಈ ಗೊಂದಲ ತಪ್ಪಿಸಲು ನಿಲ್ದಾಣಗಳಿಗೆ ಮರು ನಾಮಕರಣ ಅಗತ್ಯ’ ಎಂದು ಬಳಗದ ಅಧ್ಯಕ್ಷ ವೆಂಕಟೇಶ ಮರೇಗುದ್ದಿ ಮತ್ತು ಉಪಾಧ್ಯಕ್ಷ ಎಸ್.ಕೆ. ಆದಪ್ಪನವರ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.