
ಧಾರವಾಡ: ‘ಆನ್‍ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ, ಸಾರ್ವಜನಿಕರು ಜಾಗ್ರತರಾಗಿಬೇಕು. ಲಾಭದ ಆಸೆ ಮಾತುಗಳಿಗೆ ಮರುಳಾಗಬಾರದು, ಹೂಡಿಕೆ ಮಾಡುವಾಗ ಪ್ರತಿ ಹಂತದಲ್ಲಿಯೂ ಪರಿಶೀಲಿಸಬೇಕು’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.
ಸೆಬಿ (ಸೆಕ್ಯುರಿಟಿಸ್ ಅಂಡ್ ಎಕ್ಸ್‌ಚೇಂಜ್ ಬ್ಯುರೊ ಆಫ್ ಇಂಡಿಯಾ) ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಪ್ರಾದೇಶಿಕ ಹೂಡಿಕೆದಾರರ ಜಾಗೃತಿ ಮತ್ತು ಆನ್‌ಲೈನ್ ಆರ್ಥಿಕ ವಂಚನೆ, ಸೈಬರ್ ಕ್ರೈಂ ಜಾಗೃತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ನೌಕರರು ನಿಯಮಿತವಾಗಿ ಮತ್ತು ಸುರಕ್ಷಿತ ಕ್ಷೇತ್ರಗಳಲ್ಲಿ ಉಳಿತಾಯ ಮಾಡಬೇಕು. ಹೂಡಿಕೆದಾರ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಬೇಕು. ಸುರಕ್ಷಿತ ಹೂಡಿಕೆ ಕ್ರಮಗಳು, ಹೂಡಿಕೆ ನಿಯಮಗಳು ಮತ್ತು ವಂಚನೆಗಳಿಂದ ದೂರವಿರುವ ವಿಧಾನಗಳ ಬಗ್ಗೆ ಸರ್ಕಾರಿ ನೌಕರರು, ವಿವಿಧ ಇಲಾಖೆಗಳ ಯೋಜನಾ ಫಲಾನುಭವಿಗಳಿಗೆ ತಿಳಿವಳಿಕೆ ನೀಡಬೇಕು‘ ಎಂದು ಹೇಳಿದರು.
‘ಹೂಡಿಕೆಗೂ ಮೊದಲು ಸರಿಯಾದ ಮಾಹಿತಿ ಸಂಗ್ರಹಿಸಬೇಕು. ಸಂಶಯಾಸ್ಪದ ಯೋಜನೆಗಳಿಂದ ದೂರವಿರಬೇಕು. ಸೆಬಿ, ಸ್ಟಾಕ್ ಎಕ್ಸ್‌ಚೇಂಜ್, ಷೇರು, ಡಿಬೆಂಚರ್ ಬಗ್ಗೆ ಹೂಡಿಕೆ ಪೂರ್ವದಲ್ಲಿ ಮಾಹಿತಿ ಪಡೆಯಬೇಕು. ತೆರಿಗೆ ನಿಯಮಗಳನ್ನು ತಿಳಿದುಕೊಳ್ಳಬೇಕು. ಮೊಬೈಲ್ ಫೋನ್‌ಗಳಿಗೆ ಅನೇಕ ಲಿಂಕ್, ಇತ್ಯಾದಿ ಬರುತ್ತವೆ. ಅವೆಲ್ಲವನ್ನೂ ಡೌನ್‍ಲೋಡ್ ಮಾಡಬಾರದು. ವೈಯಕ್ತಿಕ ಮಾಹಿತಿ ಸೋರಿಕೆ ಸಾಧ್ಯತೆ ಇರುತ್ತದೆ, ಎಚ್ಚರಿಕೆ ವಹಿಸಬೇಕು’ ಎಂದರು.
ಸೆಬಿ ಅಧಿಕಾರಿಎಂ.ಆರ್.ವೆಂಕಟೇಶ ಬಾಬು ಅವರು ವರ್ಚುವಲ್ ಮೋಡ್‌ನಲ್ಲಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.