ಹುಬ್ಬಳ್ಳಿ: 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ 'ರಾಷ್ಟ್ರ ರಕ್ಷಣೆಗಾಗಿ ನಾಗರಿಕರು' ಎಂಬ ಧ್ಯೇಯದೊಂದಿಗೆ ಶುಕ್ರವಾರ ಬಿಜೆಪಿ ನೇತೃತ್ವದಲ್ಲಿ ಹುಬ್ಬಳ್ಳಿಯ ಮೂರುಸಾವಿರ ಮಠದ ಮೈದಾನದಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಬೃಹತ್ 'ತಿರಂಗಾ ಯಾತ್ರೆ' ಹಮ್ಮಿಕೊಳ್ಳಲಾಗಿತ್ತು.
ಶ್ರೀಮಠದ ಗುರುಸಿದ್ಧ ರಾಜೋಗೀಂದ್ರ ಸ್ವಾಮೀಜಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಯಾತ್ರೆಗೆ ಚಾಲನೆ ನೀಡದರು.
ದಾಜಿಬಾನಪೇಟೆ, ಕೊಪ್ಪಿಕರ್ ರಸ್ತೆ, ಚಿಟಗುಪ್ಪಿ ವೃತ್ತ, ಲ್ಯಾಮಿಂಗ್ಟನ್ ರಸ್ತೆ ಮಾರ್ಗವಾಗಿ ಸ್ಟೇಷನ್ ರಸ್ತೆಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ತಿರಂಗಾ ರ‌್ಯಾಲಿ ನಡೆಯಿತು. ನಿವೃತ್ತ ಸೈನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, 'ಪಹಲ್ಗಾಮ್ ದಾಳಿ ನಂತರ ಭಾರತ ಪಾಕಿಸ್ತಾನ ಉಗ್ರರಿಗೆ ಆಪರೇಷನ್ ಸಿಂಧೂರ ಮೂಲಕ ತಕ್ಕ ಪ್ರತಿಕ್ರಿಯೆ ನೀಡಿದೆ. ಸೈನಿಕರ ಧೈರ್ಯ, ದೃಢತೆ, ಆತ್ಮಸ್ಥೈರ್ಯ, ತ್ಯಾಗವನ್ನು ನಾವೆಲ್ಲ ಮೆಚ್ಚಬೇಕು. ದೇಶ ಸೈನಿಕರಿಗೆ ಅಭಿನಂದನೆ ಹಾಗೂ ನಿಮ್ಮೊಂದಿಗೆ ನಾವೆಲ್ಲ ಇದ್ದೇವೆ ಎಂಬ ಸಂದೇಶ ರವಾನಿಸಲು ತಿರಂಗ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು' ಎಂದರು.
'ಭಯೋತ್ಪಾದಕರ ಅಡಗುತಾಣ, ತರಬೇತಿ ಕೇಂದ್ರ ಗುರಿಯಾಗಿಸಿಕೊಂಡು, ಪಾಕಿಸ್ತಾನಕ್ಕೆ ಊಹಿಸಲಾಗದಷ್ಟು ಪೆಟ್ಟು ನೀಡಿದ್ದೇವೆ' ಎಂದು ಹೇಳಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮುಖಂಡರಾದ ಅಶೋಕ ಕಾಟವೆ, ರಂಗಾ ಬದ್ದಿ, ಬಸವರಾಜ ಕುಂದಗೋಳಮಠ, ದತ್ತಮೂರ್ತಿ ಕುಲಕರ್ಣಿ, ಸಂತೋಷ ಚವ್ಹಾಣ್, ವೀಣಾ ಬರದ್ವಾಡ, ದುರ್ಗಮ್ಮ ಬಿಜವಾಡ, ಚಂದ್ರಿಕಾ ಮೇಸ್ತ್ರಿ, ಸಿದ್ದು ಮೊಗಲಿಶೆಟ್ಟರ್, ರವಿ ನಾಯ್ಕ ಹಾಗೂ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.