ಹುಬ್ಬಳ್ಳಿ: ನಗರದ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನೀಡಿರುವ ಅನುಮತಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್‌ಡಿಪಿಐ) ನಗರ ಬ್ಲಾಕ್ ಕಮಿಟಿ ಅಧ್ಯಕ್ಷ ಮಲ್ಲಿಕ್ ಜಾನ್ ಕಳಸ್ ಗುರುವಾರ ಪಾಲಿಕೆ ಆಯುಕ್ತರ ಕಚೇರಿಯ ಅಧಿಕಾರಿಗೆ ಮನವಿ ಸಲ್ಲಿಸಿದರು.
’ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರಿಗೆ ಪ್ರಾರ್ಥನೆ (ನಮಾಜ್) ಮಾಡಲು ಮತ್ತು ಜನವರಿ 26 ಹಾಗೂ ಆಗಸ್ಟ್ 15ರಂದು ರಾಷ್ಟ್ರಧ್ವಜಾರೋಹಣ ಮಾಡಲು ಮಾತ್ರ ಅವಕಾಶ ಇರುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಪಾಲಿಕೆ ಅಧಿಕಾರಿಗಳು ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡುತ್ತಿರುವುದು ಸಮುದಾಯದ ಜನರಿಗೆ ಅಸಮಾಧಾನ ಉಂಟು ಮಾಡಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ವಿವಾದಾತ್ಮಕ ಮೈದಾನದಲ್ಲಿ ಪದೇ ಪದೇ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡುತ್ತಿರುವುದು ಎರಡೂ ಸಮುದಾಯದ ಜನರಲ್ಲಿ ವೈಷಮ್ಯ ಉಂಟಾಗಲು ದಾರಿ ಮಾಡಿಕೊಟ್ಟಂತಾಗುತ್ತದೆ. ಅಧಿಕಾರಿಗಳು ಈದ್ಗಾ ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸಲು ನೀಡಿರುವ ಅನುಮತಿಯನ್ನು ತಕ್ಷಣ ರದ್ದುಪಡಿಸಿ, ಪಾಲಿಕೆಗೆ ಸಂಬಂಧಿಸಿದ ಬೇರೆ ಮೈದಾನದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕೊಡಬೇಕು’ ಎಂದು ಆಗ್ರಹಿಸಿದರು.
ಎಸ್‌ಡಿಪಿಐ ಪ್ರಮುಖರಾದ ಅಮನ ಖಾನ ಶಿವಳ್ಳಿ, ಆದಮ ಅತ್ತಾರ, ಹಮೀದ ಬಂಗಾಲಿ, ಬಶೀರ್ ಮುದುಗಲ್, ಎಜಾಜ್ ಶೇಖ್ ಹಾಗೂ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.