
ಹುಬ್ಬಳ್ಳಿ: ನಾವು ಬೆಳೆಯುವ ಹಾಗೂ ತಿನ್ನುವ ಆಹಾರವೆಲ್ಲ ಕಲುಷಿತಗೊಂಡು ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಇಂದಿನ ದಿನಗಳಲ್ಲಿ ಸಾಂಪ್ರದಾಯಿಕ, ಸಾವಯವ ಕೃಷಿ ಹಾಗೂ ಹೈನುಗಾರಿಕೆಯೇ ನಮ್ಮನ್ನು ಉಳಿಸಬಲ್ಲದು ಎನ್ನುವುದನ್ನು ಅರಿತ ವೈದ್ಯೆಯೊಬ್ಬರು ಹೈನುಗಾರಿಕೆಯತ್ತ ಹೊರಳಿ ನೆಮ್ಮದಿ ಹಾಗೂ ಆರೋಗ್ಯಯುತ ಬದುಕು ಕಂಡುಕೊಂಡಿದ್ದಾರೆ.
ಧಾರವಾಡದ ಅಮ್ಮಿನಬಾವಿ ಸಮೀಪದ ಕೌಲಗೇರಿಯ ಡಾ.ದಾಕ್ಷಾಯಿಣಿ ಚಿದಾನಂದ ರಾಮನಗೌಡರ ಅವರು ವೈದ್ಯೆ ವೃತ್ತಿಯನ್ನು ಬಿಟ್ಟು, ತಮ್ಮ 2–3 ಎಕರೆ ಕೃಷಿ ಭೂಮಿಯಲ್ಲಿ ಹುಲ್ಲು, ಹಣ್ಣು, ತರಕಾರಿ, ಪುಷ್ಟ ಕೃಷಿ ಜೊತೆಗೆ ಹೈನುಗಾರಿಕೆಯನ್ನೂ ಕೈಗೊಂಡಿದ್ದಾರೆ.
‘8 ವರ್ಷಗಳ ಹಿಂದೆ 2 ಹಸುಗಳಿಂದ ಹೈನುಗಾರಿಕೆ ಆರಂಭಿಸಿದ್ದು, ಸದ್ಯ ಮಲೆನಾಡು ಗಿಡ್ಡ, ಹಳ್ಳಿಕಾರ್, ಖಿಲಾರಿ, ಗಿರ್ ಸೇರಿದಂತೆ 7 ತಳಿಯ ಒಟ್ಟು ದೇಶೀ 46 ಹಸುಗಳಿವೆ. ದಿನಕ್ಕೆ 2 ಬಾರಿ ಹಾಲು ಹಿಂಡುತ್ತೇವೆ. ಹಿಂದೆ ದಿನಕ್ಕೆ 60 ರಿಂದ 80 ಲೀಟರ್ ಹಾಲು ಸಿಗುತ್ತಿತ್ತು. ಸದ್ಯ ಕೆಲವು ಹಸುಗಳು ಗರ್ಭ ಕಟ್ಟಿರುವುದಿಂದ ಸರಾಸರಿ 30 ರಿಂದ 40 ಲೀಟರ್ ಹಾಲು ಸಿಗುತ್ತದೆ. ಸುತ್ತಮುತ್ತಲಿನ ಜನ, ನಾಟಿ ಔಷಧಿಗಾಗಿ ಬಳಸುವವರು, ಬಾಣಂತಿ, ಮಕ್ಕಳಿರುವವರೇ ನಮ್ಮ ಗ್ರಾಹಕರು. ಲೀಟರ್‌ಗೆ ₹90 ರಿಂದ ₹100 ರಂತೆ ಹಾಲು ಮಾರಾಟ ಮಾಡುತ್ತೇವೆ’ ಎಂದು ಡಾ. ದಾಕ್ಷಾಯಿಣಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಹುತೇಕರು ಹಾಲಿನ ಕೆನೆಯಿಂದ ತುಪ್ಪ ಮಾಡುತ್ತಾರೆ, ಆದರೆ ನಾವು ನೇರವಾಗಿ ಹಾಲಿಗೆ ಹೆಪ್ಪು ಹಾಕಿ, ಕಡಗೋಲಿನಿಂದ ಕಡೆದು, ಮಜ್ಜಿಗೆ, ಬೆಣ್ಣೆ, ತುಪ್ಪ ಮಾಡುತ್ತೇವೆ. ಕೆ.ಜಿ ಬೆಣ್ಣೆಗೆ ₹2,400, ಕೆ.ಜಿ ತುಪ್ಪಕ್ಕೆ ₹2,580 ರಂತೆ ಮಾರಾಟ ಮಾಡುತ್ತೇವೆ. ಹೈನುಗಾರಿಕೆಯಿಂದ ತಿಂಗಳಿಗೆ ಅಂದಾಜು ₹80 ಸಾವಿರದಿಂದ ₹1 ಲಕ್ಷದ ವರೆಗೆ ಆದಾಯ ಪಡೆಯುತ್ತಿದ್ದೇವೆ’ ಎಂದು ಹೇಳಿದರು.
‘8 ಲಕ್ಷ ವೆಚ್ಚದಲ್ಲಿ 150 ಅಡಿ ಉದ್ದದ ಶೆಡ್ ನಿರ್ಮಿಸಿದ್ದು, ಅದರಲ್ಲಿ ಹಸುಗಳಿಗಾಗಿ 80 ಅಡಿ ಉದ್ದ ಹಾಗೂ 25 ಅಡಿ ಅಗಲದ ಶೆಡ್ ನಿರ್ಮಿಸಿದ್ದೇವೆ. ಹಸುಗಳಿಗೆ ಹುಲ್ಲು, ಜೋಳ, ಕಡಲೆಯ ತೌಡು, ಕಾಳು ಮುಂತಾದವುಗಳನ್ನು ಗುಣಮಟ್ಟದ ಆಹಾರವಾಗಿ ನೀಡುತ್ತೇವೆ. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡುತ್ತೇವೆ. ಸಗಣಿಯಿಂದ ಹಣತೆ, ಧೂಪ, ವಿಭೂತಿ, ಕುಳ್ಳು, ವರ್ಮಿ ಕಾಂಪೋಸ್ಟ್ ಅನ್ನೂ ತಯಾರಿಸಿ ಮಾರಾಟ ಮಾಡುತ್ತೇವೆ’ ಎಂದರು.
ಯುವಜನತೆ ಉತ್ತಮ ತರಬೇತಿ ಮಾಹಿತಿ ಪಡೆದು ಕೃಷಿಯತ್ತ ಬರಬೇಕು. ಭೂಮಿಯ ಆರೋಗ್ಯ ಕಾಪಾಡಿದ್ದಲ್ಲಿ ಮಾತ್ರ ನಾವೆಲ್ಲ ಆರೋಗ್ಯದಿಂದಿರಲು ಸಾಧ್ಯ. ಹಾಗಾಗಿ ರಾಸಾಯನಿಕ ಮುಕ್ತ ಕೃಷಿ ಇಂದಿನ ಅಗತ್ಯವಾಗಿದೆಡಾ. ದಾಕ್ಷಾಯಿಣಿ ಚಿದಾನಂದ ರಾಮನಗೌಡರ ಕೃಷಿ ಮಹಿಳೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.