ADVERTISEMENT

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 11:52 IST
Last Updated 28 ಜನವರಿ 2021, 11:52 IST
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ, ಹರಿಹರದಲ್ಲಿ ನಡೆಯಲಿರುವ ಮಹಾ ಸಮಾಗಮದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿ ತಾಲ್ಲೂಕಿನ ಸಮುದಾಯದ ಮುಖಂಡರು ಗುರುವಾರ ತೆರಳಿದರು
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ, ಹರಿಹರದಲ್ಲಿ ನಡೆಯಲಿರುವ ಮಹಾ ಸಮಾಗಮದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿ ತಾಲ್ಲೂಕಿನ ಸಮುದಾಯದ ಮುಖಂಡರು ಗುರುವಾರ ತೆರಳಿದರು   

ಹುಬ್ಬಳ್ಳಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಆಗ್ರಹಿಸಿ, ಹರಿಹರದಲ್ಲಿ ನಡೆಯಲಿರುವ ಮಹಾ ಸಮಾಗಮದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿ ತಾಲ್ಲೂಕಿನ ಸಮುದಾಯದ ಮುಖಂಡರು ಗುರುವಾರ ತೆರಳಿದರು. ನಗರದ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಮುಖಂಡರು, ಚನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಮುಖಂಡ ನಾಗರಾಜ ಗೌರಿ, ‘ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಗೆ, ಹರಿಹರ ಪೀಠದ ವಚನಾನಂದ ಸ್ವಾಮೀಜಿ ಕೈ ಜೋಡಿಸಿರುವುದು ಹೋರಾಟದ ಶಕ್ತಿಯನ್ನು ಹೆಚ್ಚಿಸಿದೆ. ಹರಿಹರದಲ್ಲಿ ನಡೆಯಲಿರುವ ಮಹಾ ಸಮಾಗಮ ಕಾರ್ಯಕ್ರಮದ ಬಳಿಕ ಇಬ್ಬರೂ ಶ್ರೀಗಳ ಜತೆ ಬೆಂಗಳೂರಿಗೆ ಪಾದಯಾತ್ರೆ ನಡೆಸಲಾಗುವುದು’ ಎಂದರು.

‘ಪಂಚಮಸಾಲಿ ಸಮುದಾಯವು ಆರ್ಥಿಕವಾಗಿ ಹಿಂದುಳಿದಿದೆ. ಹಾಗಾಗಿ, ಸಮುದಾಯವು 2ಎ ಮೀಸಲಾತಿ ನೀಡುವಂತೆ ಹಲವು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದೆ. ನ್ಯಾಯಯುತವಾದ ಈ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಈಡೇರಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಚನ್ನಮ್ಮ ವೃತ್ತದಿಂದ ನಗರದ ಹೊರವಲಯದ ಗಬ್ಬೂರು ಕ್ರಾಸ್‌ವರೆಗೆ ಪಾದಯಾತ್ರೆ ನಡೆಸಿದ ಮುಖಂಡರು, ಅಲ್ಲಿಂದ ವಾಹನದಲ್ಲಿ ಹರಿಹರಕ್ಕೆ ಪ್ರಯಾಣ ಬೆಳೆಸಿದರು. ಮಾಜಿ ಸಚಿವ ಪಿ.ಸಿ. ಸಿದ್ಧನಗೌಡ್ರ, ರಾಣಿ ಚನ್ನಮ್ಮ ಬಳಗದ ಅಧ್ಯಕ್ಷೆ ದೀಪಾ ಗೌರಿ, ಕಲ್ಲಪ್ಪ ಯಲಿವಾಳ, ಸೋಮಲಿಂಗ ಯಲಿಗಾರ, ಕೊಟ್ರೇಶ ಎಸ್‌.ಕೆ., ಜಯದೇವ ದೊಡಮನಿ ಮುಂತಾದವು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.