ADVERTISEMENT

ಹುಬ್ಬಳ್ಳಿ | ಹೆಲಿಕಾಪ್ಟರ್‌ನಲ್ಲಿ ತೀರ್ಥಯಾತ್ರೆ; ₹8.42 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2023, 6:12 IST
Last Updated 5 ಜುಲೈ 2023, 6:12 IST
ಹೆಲಿಕಾಪ್ಟರ್‌ (ಸಾಂದರ್ಭಿಕ ಚಿತ್ರ)
ಹೆಲಿಕಾಪ್ಟರ್‌ (ಸಾಂದರ್ಭಿಕ ಚಿತ್ರ)   

ಹುಬ್ಬಳ್ಳಿ: ಹೆಲಿಕಾಪ್ಟರ್‌ನಲ್ಲಿ ತೀರ್ಥಕ್ಷೇತ್ರಕ್ಕೆ ಕರೆದೊಯ್ಯುವುದಾಗಿ ಜಾಹೀರಾತು ಕಂಪನಿ ಹೆಸರಲ್ಲಿ ವ್ಯಕ್ತಿಯೊಬ್ಬ ಧಾರವಾಡದ ದಂಪತಿಯನ್ನು ನಂಬಿಸಿ, ಅವರಿಂದ ₹8.42 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ಹೆಬ್ಬಳ್ಳಿ ರಸ್ತೆಯ ಮುಕುಂದ ಮತ್ತು ಭಾರತಿ ವಂಚನೆಗೊಳಗಾದ ದಂಪತಿ. ಇವರು ಕುಟುಂಬದವರ ಹಾಗೂ ಸ್ನೇಹಿತರ ಜೊತೆ ಯಮನೋತ್ರಿ, ಗಂಗೋತ್ರಿ, ಕೇದಾರ, ಬದರಿಗೆ ತೀರ್ಥಯಾತ್ರೆ ತೆರಳಲೆಂದು ಇನ್‌ಸ್ಟಾಗ್ರಾಮ್‌ನಲ್ಲಿನ ಪವನ್‌ ಹನ್ಸ್‌ ಟೂರ್‌ ಏಜೆನ್ಸಿ ಜಾಹೀರಾತು ನೋಡಿದ್ದಾರೆ. ಅದರಲ್ಲಿರುವ ಮೊಬೈಲ್‌ ನಂಬರ್‌ಗೆ ಸಂಪರ್ಕಿಸಿದಾಗ, ಹೆಲಿಕಾಪ್ಟರ್‌ನಲ್ಲಿ ತೀರ್ಥಕ್ಷೇತ್ರಕ್ಕೆ ಕರೆದೊಯ್ಯುವುದಾಗಿ ನಂಬಿಸಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎನ್‌ಸಿಬಿ ಅಧಿಕಾರಿ ಹೆಸರಲ್ಲಿ ವಂಚನೆ

ADVERTISEMENT

ಕೊರಿಯರ್‌ನಲ್ಲಿ ಡ್ರಗ್ಸ್‌ ಪಾರ್ಸೆಲ್ ಬಂದಿದೆ ಎಂದು ಕೇಶ್ವಾಪುರದ ಎಂಜಿನಿಯರ್‌ ಅಮಲಾ ಡೆನ್ನಿಸ್‌ ಅವರಿಗೆ ಮಾದಕ ವಸ್ತು ನಿಯಂತ್ರಣ ಕೇಂದ್ರದ ಅಧಿಕಾರಿ ಹೆಸರಲ್ಲಿ ದೂರವಾಣಿ ಮೂಲಕ ಸಂಪರ್ಕಿಸಿದ ವ್ಯಕ್ತಿ, ಅವರನ್ನು ಬೆದರಿಸಿ ₹1.74 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

‘ಪೆಡಕ್ಸ್‌ ಕೊರಿಯರ್‌ ಸರ್ವಿಸ್‌ನಲ್ಲಿ ನಿಮ್ಮ ಹೆಸರಿಗೆ ಡ್ರಗ್ಸ್‌ ಪಾರ್ಸೆಲ್‌ ಕಳುಹಿಸಿದ್ದಾರೆ. ಅಲ್ಲದೆ, ನಿಮ್ಮ ಹೆಸರಲ್ಲಿ ಖೊಟ್ಟಿ ದಾಖಲೆ ನೀಡಿ ಮೂರು ಬ್ಯಾಂಕ್‌ ಖಾತೆಯನ್ನು ಸಹ ತೆರೆಯಲಾಗಿದೆ. ನಾವು ಮುಂಬೈನ ಎನ್‌ಸಿಬಿ ಕೇಂದ್ರದಿಂದ ಕರೆ ಮಾಡುತ್ತಿದ್ದು, ಅವುಗಳನ್ನು ಪರಿಶೀಲನೆ ನಡೆಸಬೇಕಿದೆ’ ಎಂದು ಅಮಲಾ ಅವರನ್ನು ಬೆದರಿಸಿದ್ದಾನೆ. ನಂತರ ಪರಿಶೀಲನೆ ನಡೆಸುವ ನೆಪದಲ್ಲಿ ತನ್ನ ಖಾತೆಗೆ ಹಣವನ್ನು ಗೂಗಲ್‌ ಪೇ ಮಾಡಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳೆಸಾಲ ತೀರಿಸಲಾಗದೆ ರೈತ ಆತ್ಮಹತ್ಯೆ

ತಾಲ್ಲೂಕಿನ ಶಿರಗುಪ್ಪಿ ಗ್ರಾಮದ ರೈತ ಶಿವಪ್ಪ ಹನುಮಂತಪ್ಪ ಹಲಗಿ (65) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಐದು ಎಕರೆ ಜಮೀನಿನಲ್ಲಿ ಬೆಳೆ ಬೆಳೆಯಲು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ₹50 ಸಾವಿರ ಬೆಳೆಸಾಲ ಪಡೆದಿದ್ದರು. ಪರಿಚಯಸ್ಥರಿಂದಲೂ ಕೈಗಡ ಸಾಲ ಮಾಡಿ ಸಾಗುವಳಿ ಮಾಡಿದ್ದರು. ಬೆಳೆ ಹಾಗೂ ಮಳೆ ಕೈಕೊಟ್ಟಿದ್ದರಿಂದ ಸಾಲ ತೀರಿಸುವ ಬಗ್ಗೆ ಮಾನಸಿಕವಾಗಿ ನೊಂದು ಜೂನ್‌ 27ರಂದು ಮನೆಯ ಹಿತ್ತಲದಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ. ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.