ADVERTISEMENT

ಜಲ ಜೀವನ್ ಮಿಷನ್‌ನಿಂದ ಸುಧಾರಿಸಿದ ನೀರಸಾಗರ ಜನರ ಬದುಕು: ಮೋದಿ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 16:12 IST
Last Updated 16 ಫೆಬ್ರುವರಿ 2023, 16:12 IST
ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಟ್ವೀಟ್‌ನ ಸ್ಕ್ರೀನ್‌ಶಾಟ್
ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಟ್ವೀಟ್‌ನ ಸ್ಕ್ರೀನ್‌ಶಾಟ್   

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕಲಘಟಗಿ ತಾಲ್ಲೂಕಿನ ನೀರಸಾಗರ ಗ್ರಾಮಸ್ಥರ ಬದುಕನ್ನು ಜಲಜೀವನ್‌ ಮಿಷನ್‌ ಉತ್ತಮಪಡಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾಡಿದ್ದ ಟ್ವೀಟ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ರೀಟ್ವೀಟ್‌ ಮಾಡಿ, ನೀರಸಾಗರ ಗ್ರಾಮಸ್ಥರ ಬದುಕು ಸುಧಾರಿಸಿರುವುದನ್ನು ಕಂಡು ಖುಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಲಜೀವನ್‌ ಮಿಷನ್‌ ಯೋಜನೆಯಿಂದ ಜನರ ಬದುಕಿನಲ್ಲಿ ಆಗಿರುವ ಬದಲಾವಣೆ ಕುರಿತು ಜೋಶಿ ಅವರು ಬುಧವಾರ ಟ್ವೀಟ್‌ ಮಾಡಿದ್ದರು. ಅದನ್ನು ಪ್ರಧಾನಿ ಮೋದಿ ಅವರು ಗುರುವಾರ ರೀಟ್ವೀಟ್‌ ಮಾಡಿದ್ದಾರೆ.

‘ಈ ಯೋಜನೆಯಿಂದಾಗಿ ನೀರಸಾಗರ ಗ್ರಾಮಸ್ಥರಿಗೆ ಸ್ವಚ್ಛ ನೀರು ದೊರಕುತ್ತಿದೆ. ಇದಲ್ಲದೇ, ರೋಗಗಳು ಹರಡುವುದನ್ನು ತಡೆಗಟ್ಟಿದೆ. ಇದರಿಂದಾಗಿ ಗ್ರಾಮಸ್ಥರು ಈ ಸ್ವಚ್ಛ ಹಾಗೂ ಆರೋಗ್ಯಯುತ ಬದುಕು ಬದುಕುತ್ತಿದ್ದಾರೆ’ ಎಂದು ಜೋಶಿ ಟ್ಟೀಟ್‌ ಮಾಡಿದ್ದರು.

ADVERTISEMENT

ಜಲ ಜೀವನ್ ಮಿಷನ್ ಯೋಜನೆ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುರೇಶ ಇಟ್ನಾಳ ಅವರು, ‘ಜಿಲ್ಲೆಯಲ್ಲಿರುವ 388 ಜನವಸತಿ ಪ್ರದೇಶಗಳ ಪೈಕಿ, 284 ಜನವಸತಿ ಪ್ರೇಶಗಳಲ್ಲಿ ಯೋಜನೆಯ ಕಾಮಗಾರಿಗಳು ಪೂರ್ಣಗೊಂಡಿವೆ. 104 ಜನವಸತಿ ಪ್ರದೇಶಗಳಲ್ಲಿನ ಕಾಮಗಾರಿಗಳು ಪ್ರಗತಿಯಲ್ಲಿವೆ. ಯೋಜನೆಗೆ ₹363 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇಲ್ಲಿಯವರೆಗೆ ₹259 ಕೋಟಿ ವೆಚ್ಚ ಮಾಡಲಾಗಿದೆ. ಯೋಜನೆಯಡಿ ಇಲ್ಲಿಯವರೆಗೆ 1.15 ಲಕ್ಷ ಕುಡಿಯುವ ನೀರಿನ ನಳ ಸಂಪರ್ಕಗಳನ್ನು ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.