ADVERTISEMENT

PM ವಿಶ್ವಕರ್ಮ ಯೋಜನೆ: 7,843 ಅರ್ಜಿ ಸಲ್ಲಿಕೆ; 2,797 ಅರ್ಜಿದಾರರಿಗೆ ಮಂಜೂರು

ಗೋವರ್ಧನ ಎಸ್‌.ಎನ್‌.
Published 4 ಡಿಸೆಂಬರ್ 2025, 4:32 IST
Last Updated 4 ಡಿಸೆಂಬರ್ 2025, 4:32 IST
ಕಲಘಟಗಿ ತಾಲ್ಲೂಕಿನ ದಾಸ್ತಿಕೊಪ್ಪದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಪಿ.ಎಂ. ವಿಶ್ವಕರ್ಮ ಯೋಜನೆಯಡಿ ಬಡಗಿ ಕೆಲಸದ ತರಬೇತಿ ನೀಡಲಾಯಿತು
ಕಲಘಟಗಿ ತಾಲ್ಲೂಕಿನ ದಾಸ್ತಿಕೊಪ್ಪದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಪಿ.ಎಂ. ವಿಶ್ವಕರ್ಮ ಯೋಜನೆಯಡಿ ಬಡಗಿ ಕೆಲಸದ ತರಬೇತಿ ನೀಡಲಾಯಿತು   

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಪಿ.ಎಂ. ವಿಶ್ವಕರ್ಮ ಯೋಜನೆ ಅಡಿ ಜಿಲ್ಲೆಯಲ್ಲಿ ತರಬೇತಿ ಪಡೆದು, ಬ್ಯಾಂಕ್‌ಗಳಲ್ಲಿ ಅರ್ಜಿ ಸಲ್ಲಿಸಿದ ಅರ್ಧಕ್ಕೂ ಹೆಚ್ಚು ಮಂದಿಗೆ ಸಾಲ ಸೌಲಭ್ಯ ದೊರೆತಿಲ್ಲ.

ಯೋಜನೆ ಜಾರಿಯಾದಾಗಿನಿಂದ ಕೌಶಲ ತರಬೇತಿಗೆ ಒಟ್ಟು 1,30,288 ಮಂದಿ ಅರ್ಜಿ ಸಲ್ಲಿಸಿದ್ದರು. ಗ್ರಾಮ ಪಂಚಾಯಿತಿ ಅಥವಾ ಸ್ಥಳೀಯ ಆಡಳಿತ ಹಂತ, ಜಿಲ್ಲಾ ಹಂತ ಹಾಗೂ ರಾಜ್ಯ ಹಂತದಲ್ಲಿ ಪರಿಶೀಲನೆ ನಡೆಸಿ, 13,298 ಮಂದಿಯನ್ನು ಮಾತ್ರ ಆಯ್ಕೆ ಮಾಡಿಕೊಂಡು ಕೌಶಲ ತರಬೇತಿ ನೀಡಲಾಗಿದೆ. 3,676 ಅರ್ಜಿಗಳ ಪರಿಶೀಲನೆ ಬಾಕಿ ಇದೆ.

ಈ ಪೈಕಿ 7,843 ಮಂದಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದರು. 2,797 ಮಂದಿಗೆ ಸಾಲ ಮಂಜೂರಾಗಿದ್ದು, 2,175 ಜನರ ಖಾತೆಗೆ ₹18.34 ಕೋಟಿ ಸಾಲದ ಮೊತ್ತವನ್ನು ಜಮಾ ಮಾಡಲಾಗಿದೆ. 482 ಅರ್ಜಿಗಳಿಗೆ ಸಾಲ ಮೂಂಜೂರು ಬಾಕಿ ಇದೆ ಎಂದು ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆ ಮತ್ತು ಜಿಲ್ಲೆಯ ಲೀಡ್‌ ಬ್ಯಾಂಕ್‌ ಅಂಕಿ–ಅಂಶ ತಿಳಿಸುತ್ತದೆ.

ADVERTISEMENT

‘ಯೋಜನೆಯಡಿ 18 ಕುಲಕಸುಬುಗಳಿಗೆ ತರಬೇತಿ ನೀಡಲಾಗುತ್ತದೆ. ಮೂರು ಹಂತಗಳಲ್ಲಿ ಪರಿಶೀಲನೆ ನಡೆಸಿ, ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಿದವರು ಆ ಕಸುಬನ್ನು ಮೊದಲಿನಿಂದ ಮಾಡದಿದ್ದರೆ ಈ ಹಂತಗಳಲ್ಲಿಯೇ ರದ್ದು ಮಾಡಲಾಗುತ್ತದೆ’ ಎಂದು ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

‘ಜಿಲ್ಲೆಯಲ್ಲಿ 1 ಲಕ್ಷ ಮಂದಿ ಟೈಲರಿಂಗ್ ತರಬೇತಿಗೆ ಅರ್ಜಿ ಸಲ್ಲಿಸಿದ್ದರು. ಇಂತಹ ಸಂದರ್ಭದಲ್ಲಿ ಎಲ್ಲರಿಗೂ ತರಬೇತಿ ಹಾಗೂ ಸಾಲ ಸೌಲಭ್ಯ ಒದಗಿಸುವುದು ಕಷ್ಟ ಸಾಧ್ಯ’ ಎಂದರು. 

ಅರ್ಹತೆ: ‘ಕುಲಕಸುಬಿನಲ್ಲಿ ಕೌಶಲ ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆ ಜಾರಿಯಾಗಿದೆ. ಹಾಗಾಗಿ, ಆಸಕ್ತರು ತಾವು ನಿರ್ವಹಿಸುತ್ತಿರುವ ಕಸುಬಿನ ತರಬೇತಿಗಷ್ಟೇ ಅರ್ಜಿ ಸಲ್ಲಿಸಬೇಕು. 5ರಿಂದ 7 ದಿನಗಳ ತರಬೇತಿ ಸಮಯದಲ್ಲಿ ದಿನಕ್ಕೆ  ₹500 ವೇತನ ನೀಡಲಾಗುತ್ತದೆ. ಕೇಂದ್ರ ಸರ್ಕಾರದಿಂದ ಗುರುತಿನ ಚೀಟಿ, ಪ್ರಮಾಣಪತ್ರ ನೀಡಲಾಗುತ್ತದೆ. ಮೊದಲ ಬಾರಿ ₹1 ಲಕ್ಷ ಸಾಲ ನೀಡಲಾಗುತ್ತದೆ. ಅದನ್ನು 18 ತಿಂಗಳಲ್ಲಿ ಮರುಪಾವತಿ ಮಾಡಿದರೆ ನಂತರ ₹2 ಲಕ್ಷ ಸಾಲ ದೊರೆಯಲಿದೆ’ ಎಂದರು.

ಸಾಲ ಸಿಗದಿರುವುದೇಕೆ?

‘ಪಿ.ಎಂ. ವಿಶ್ವಕರ್ಮ ಯೋಜನೆಯಡಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದವರು ನಿಜವಾಗಿ ಆ ಕಸುಬಿನಲ್ಲಿ ತೊಡಗಿದ್ದಾರೆಯೇ ಎಂದು ಬ್ಯಾಂಕ್‌ನವರು ಸ್ಥಳ ಪರಿಶೀಲನೆ ನಡೆಸುತ್ತಾರೆ. ಸುಳ್ಳು ಮಾಹಿತಿ ನೀಡಿದರೆ ಸಾಲ ನೀಡಲಾಗದು’ ಎಂದು ಧಾರವಾಡ ಲೀಡ್‌ ಬ್ಯಾಂಕ್ ವ್ಯವಸ್ಥಾಪಕ ಬಸವರಾಜ ಗಡಾದವರ ತಿಳಿಸಿದರು. ‘ಈ ಯೋಜನೆ ಮೂಲಕ ಶೇ 13ರ ಬಡ್ಡಿ ದರದಲ್ಲಿ ₹1 ಲಕ್ಷ ಸಾಲ ನೀಡಲಾಗುತ್ತದೆ. ಇದರ‌ಲ್ಲಿ ಶೇ 8ರಷ್ಟು ಬಡ್ಡಿಯನ್ನು ಕೇಂದ್ರ ಸರ್ಕಾರ ತುಂಬಿದರೆ ಉಳಿದ ಶೇ 5ರಷ್ಟನ್ನು ಅರ್ಜಿದಾರರು ಪಾವತಿಸಬೇಕು. ಸಾಲಕ್ಕೆ ಸಬ್ಸಿಡಿ ನೀಡಲಾಗುತ್ತದೆ ಎಂಬುದಾಗಿ ಕೆಲವರು ತಪ್ಪು ತಿಳಿಯುತ್ತಾರೆ. ಈ ಬಗ್ಗೆ ತಿಳಿಸಿದಾಗ ಸಾಲ ಬೇಡ ಎನ್ನುತ್ತಾರೆ. ಬ್ಯಾಂಕ್‌ ಖಾತೆ ಸಮಸ್ಯೆಯಿಂದಲೂ ಸಾಲ ಸಿಗದಿರಬಹುದು’ ಎಂದು ವಿವರಿಸಿದರು. 

18 ಕಸುಬುಗಳ ವಿವರ

ಬಡಗಿ ಅಥವಾ ಮರಗೆಲಸ ದೋಣಿ ತಯಾರಕೆ ಸಾಂಪ್ರದಾಯಿಕ ಶಸ್ತ್ರ ತಯಾರಿಕೆ ಕುಂಬಾರಿಕೆ ಸುತ್ತಿಗೆ ಹಾಗೂ ಇತರೆ ವಸ್ತುಗಳ ತಯಾರಿಕೆ ಬೀಗ ಹಾಗೂ ಕೀಲಿ ತಯಾರಿಕೆ ಅಕ್ಕಸಾಲಿಗರು ಕಮ್ಮಾರರು ಶಿಲ್ಪಿಗಳು ಮತ್ತು ಕಲ್ಲು ಒಡೆಯುವವರು ಸಾಂಪ್ರದಾಯಿಕ ಪಾದರಕ್ಷೆ ತಯಾರಿಕೆ ಕಲ್ಲು ಕುಟಿಗರು ಅಥವಾ ರಾಜ ಮೇಸ್ತ್ರಿಗಳು ಸಾಂಪ್ರದಾಯಿಕ ಬುಟ್ಟಿ ಚಾಪೆ ಪೊರಕೆ ತೆಂಗಿನನಾರಿನ ಹಗ್ಗ ತಯಾರಿಕೆ ಸಾಂಪ್ರದಾಯಿಕ ಗೊಂಬೆ ಮತ್ತು ಆಟಿಕೆ ತಯಾರಿಕೆ ಕ್ಷೌರಿಕರು ಹೂಮಾಲೆ ತಯಾರಕರು ಅಗಸರು ಅಥವಾ ಬಟ್ಟೆ ತೊಳೆಯುವವರು ಟೈಲರ್‌ಗಳು ಮೀನಿನ ಬಲೆ ತಯಾರಿಕೆ.

ಸರ್ಕಾರದ ಬಹುತೇಕ ಯೋಜನೆಗಳು ಜನರನ್ನು ಸಮಪರ್ಕವಾಗಿ ತಲುಪುವುದೇ ಇಲ್ಲ. ಜನರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಕ್ರಮ ವಹಿಸಬೇಕು
-ಮಹೇಶ ಪತ್ತಾರ, ಕಾರ್ಮಿಕ ಮುಖಂಡ
ನಮ್ಮಲ್ಲಿ ಮೊದಲ ಬ್ಯಾಚ್‌ನಲ್ಲಿ 20 ಮಂದಿ ಆನಂತರದ ಬ್ಯಾಚ್‌ನಲ್ಲಿ 8 ಮಂದಿಗೆ ಐದು ದಿನಗಳವರೆಗೆ ಬಡಗಿ ಕಸುಬಿನ ತರಬೇತಿ ನೀಡಲಾಗಿದೆ
-ಎನ್‌.ಎಸ್‌. ಪಾಟೀಲ ಪ್ರಾಚಾರ್ಯ, ಸರ್ಕಾರಿ ಐಟಿಐ ಕಾಲೇಜು ದಾಸ್ತಿಕೊಪ್ಪ ಕಲಘಟಗಿ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.