ADVERTISEMENT

ಹುಬ್ಬಳ್ಳಿ | ಮದುವೆಯಾಗುವುದಾಗಿ ನಂಬಿಸಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ದೂರು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 2:54 IST
Last Updated 5 ಫೆಬ್ರುವರಿ 2026, 2:54 IST
<div class="paragraphs"><p>ಪೊಲೀಸ್</p></div>

ಪೊಲೀಸ್

   

ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: 17 ವರ್ಷದ ಬಾಲಕಿಗೆ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ದೌರ್ಜನ್ಯ ಎಸಗಿದ ಗೋವಾ ಮೂಲದ ಸದ್ದಾಂಹುಸೇನ್‌ ವಿರುದ್ಧ ಇಲ್ಲಿನ ನವನಗರ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

ADVERTISEMENT

ಆರೋಪಿ ಸದ್ದಾಂಹುಸೇನ್‌, ಬಾಲಕಿಯ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ. ಅವಳನ್ನು ಪರಿಚಯಿಸಿಕೊಂಡು ಸ್ನೇಹ ಬೆಳೆಸಿದ್ದ. ಅವಳು ಸ್ನಾನ ಮಾಡುತ್ತಿದ್ದ ವಿಡಿಯೊ ಮಾಡಿಕೊಂಡಿರುವುದಾಗಿಹೇಳಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವ ಬೆದರಿಕೆಯೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಜ.‌26ರಂದು ಫೋಟೊ ಒಂದನ್ನು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾನೆ ಎಂದು ಆರೋಪಿಸಿ ಬಾಲಕಿ ಪೋಷಕರು ದೂರು ನೀಡಿದ್ದಾರೆ.

ದೂರು, ಪ್ರತಿದೂರು: ತಾವು ಕೆಲಸ ಮಾಡುತ್ತಿರುವ ವ್ಯಕ್ತಿಯ ಬಳಿಯಿರುವ ಸೌಂಡ್‌ ಸಿಸ್ಟಮ್ ಮಾತ್ರ ಭರ್ಜರಿ ಶಬ್ದ ಮಾಡುತ್ತದೆ ಎನ್ನುವ ವಿಷಯಕ್ಕೆ ಸಂಬಂಧಿಸಿ ಸ್ನೇಹಿತರಿಬ್ಬರು ಪರಸ್ಪರ ಜಗಳ ಮಾಡಿ, ಹಲ್ಲೆ ಮಾಡಿಕೊಂಡ ಘಟನೆ ಜನ್ನತ್ ನಗರದಲ್ಲಿ ನಡೆದಿದ್ದು, ಕೇಶ್ವಾಪುರ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿವೆ.

ಸ್ಥಳೀಯ ನಿವಾಸಿಗಳಾದ ವೇಣುಗೋಪಾಲ ಮತ್ತು ವಸಂತ ಗಲಾಟೆ ಮಾಡಿಕೊಂಡ ಆರೋಪಿಯಾಗಿದ್ದಾರೆ. ಈ ಹಿಂದೆ ಇವರಿಬ್ಬರು ಪ್ರಕಾಶ ಸೌಂಡ್‌ ಸಿಸ್ಟಮ್‌ನಲ್ಲಿ ಕೆಲಸ ಮಾಡುತ್ತಿದ್ದರು. ವಸಂತ ಕೆಲಸ ಬಿಟ್ಟು ಬೇರೆಡೆಗೆ ಸೇರಿಕೊಂಡಿದ್ದ. ಜ. 2ರಂದು ಇಬ್ಬರು ಭೇಟಿಯಾಗಿ, ತಾವು ಕೆಲಸ ಮಾಡುತ್ತಿರುವಲ್ಲಿಸೌಂಡ್‌ ಸಿಸ್ಟಮ್ ಭಾರಿ ಇದೆ ಎನ್ನುತ್ತ ಜಗಳವಾಡಿಕೊಂಡು ಹಲ್ಲೆ ಮಾಡಿಕೊಂಡಿದ್ದಾರೆ ಎಂದು ದೂರು, ಪ್ರತಿದೂರಿನಲ್ಲಿ ತಿಳಿಸಲಾಗಿದೆ.

ಕಳವು:

ಉಣಕಲ್‌ನ ಪ್ಯಾಟಿಸಾಲ ಓಣಿಯ ಮಹಾಂತೇಶ ಹೂಗಾರ ಅವರ ಮನೆ ಬಾಗಿಲಿನ ಬೀಗ ಮುರಿದು, ಆಲ್ಮೇರಾದಲ್ಲಿ ಇದ್ದ ₹2.45 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲ್ಯಾಪ್‌ಟಾಪ್‌ ಕಳವು:

ತಾಲ್ಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದ ಸರ್ವಿಸ್‌ ರಸ್ತೆಯ ಸಾಯಿಗಣೇಶ ಹೋಟೆಲ್‌ ಸಮೀಪ ನಿಲ್ಲಿಸಿಟ್ಟಿದ್ದ ಕಾರಿನ ಹಿಂಬದಿಯ ಬಾಗಿಲು ತೆರೆದು, ಲ್ಯಾಪ್‌ಟಾಪ್‌, ಎರಡು ಮೊಬೈಲ್‌ ಫೋನ್‌ ಹಾಗೂ ಇತರೆ ವಸ್ತುಗಳನ್ನು ಕಳವು ಮಾಡಲಾಗಿದೆ.

ಪುಣೆಯ ದಿಗ್ವಿಜಯ ಬೆಳಂಬೆ ಅವರು ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.