ವಶಪಡಿಸಿಕೊಂಡಿರುವ ಪಿಒಪಿ ಗಣೇಶ ವಿಗ್ರಹಗಳು
ಧಾರವಾಡ: ತಾಲ್ಲೂಕಿನ ಗರಗ ಗ್ರಾಮದ ಸಂಗೊಳ್ಳಿ ರಾಯಣ್ಣ ಬಡಾವಣೆಯಲ್ಲಿ 109 ಹಾಗೂ ಶಿವಾಜಿ ಬಡಾವಣೆಯಲ್ಲಿ 75 ಒಟ್ಟು 184 ಪಿಒಪಿ ಗಣೇಶ ವಿಗ್ರಹಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ಧಾರೆ.
ಸಾರ್ವಜನಿಕರು ನೀಡಿದ ದೂರು ಆಧರಿಸಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಿಗ್ರಹಗಳನ್ನು ಜಪ್ತಿ ಮಾಡಿದ್ದಾರೆ. ವಿಗ್ರಹಗಳನ್ನು ಧಾರವಾಡದ ಕಲಾ ಭವನಕ್ಕೆ ತಂದಿದ್ದಾರೆ.
‘ಒಂದು ಕಡೆ 75, ಮತ್ತೊಂದು ಕಡೆ 109 ಮೂರ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ವಿನಾಯಕ ಕಾಳಪ್ಪ ಪತ್ತಾರ ಎಂಬವರು ಈ ಮೂರ್ತಿಗಳನ್ನು ಸಂಗ್ರಹಿಟ್ಟಿದ್ದರು. ಮಹಾರಾಷ್ಟ್ರದ ಕೊಲ್ಲಾಪುರದಿಂದ ವಿಗ್ರಹಗಳನ್ನು ತರಿಸಿದ್ದಾಗಿ ಅವರು ಹೇಳಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಸುದ್ದಿಗಾರರಿಗೆ ತಿಳಿಸಿದರು.
‘ಪಿಒಪಿ ವಿಗ್ರಹಗಳನ್ನು ಜಲಮೂಲಗಳಲ್ಲಿ ವಿಸರ್ಜನೆ ಮಾಡಿದರೆ ಜಲ ಮಲಿನವಾಗುತ್ತದೆ.
2016ರಲ್ಲಿ ಹೈಕೋರ್ಟ್ ಪಿಒಪಿ ವಿಗ್ರಹಗಳನ್ನು ನಿಷೇಧಿಸಿದೆ. ಗಡಿಯ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆಗೆ ವ್ಯವಸ್ಥೆ ಮಾಡಿ, ಪಿಒಪಿ ವಿಗ್ರಹಗಳನ್ನು ಜಿಲ್ಲೆಗೆ ತರದಂತೆ ನಿಗಾ ವಹಿಸಲಾಗುವುದು’ ಎಂದರು.
ಚೌತಿ–ಮಣ್ಣಿನ ವಿಗ್ರಹ ಬಳಸಲು ಮನವಿ
ಗೌರಿ–ಗಣೇಶ ಹಬ್ಬಕ್ಕೆ ಜನರು ಮಣ್ಣಿನ ಗಣಪತಿ ಮೂರ್ತಿಗಳನ್ನು ಬಳಸುವಂತೆ ದಿವ್ಯಪ್ರಭು ಮನವಿ ಮಾಡಿದರು.
ಗಣೇಶ ಚತುರ್ಥಿ ಸಮೀಪಿಸುತ್ತಿದೆ. ವಿವಿಧ ಇಲಾಖೆಗಳ ಸಮನ್ವಯ ಸಭೆ ನಡೆಸಲಾಗುವುದು. ನಿಗಾ ಇಡುವಂತೆ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮಮಟ್ಟದ ಕಾರ್ಯಪಡೆ ಸೂಚನೆ ನೀಡಲಾಗುವುದು.
ಪಿಒಪಿ ವಿಗ್ರಹ ಕಂಡುಬಂದರೆ ಸಾರ್ವಜನಿಕರು ದೂರು ನೀಡಬಹುದು. ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗುವುದು, ಕ್ರಮ ಜರುಗಿಸಲಾಗುವುದು. ಮಣ್ಣಿನ ವಿಗ್ರಹ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.
‘ಗರಗದಲ್ಲಿ ಪಿಒಪಿ ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡಿ, ಬಣ್ಣ ಲೇಪಿಸಿ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದರು. ಕಾರ್ಯಾಚರಣೆ ನಡೆಸಿ ವಿಗ್ರಹಗಳನ್ನು ವಶಕ್ಕೆ ಪಡೆಯಲಾಯಿತು’ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ಜಗದೀಶ್ ತಿಳಿಸಿದರು.
ಪರಿಸರ ಅಧಿಕಾರಿ ಜಗದೀಶ ಐ.ಎಚ್, ಪಿಡಿಒ ಶಶಿಧರ ಗಂಧದ, ಮಹಾನಗರಪಾಲಿಕೆ ಕಂದಾಯ ಅಧಿಕಾರಿ ಗಂಗಾಧರ ಮನಕಟ್ಟಿಮಠ, ಗರಗ ಪಿಎಸ್‌ಐ ಸಿದ್ರಾಮ ಉನ್ನದ, ಗ್ರಾಮ ಆಡಳಿತ ಅಧಿಕಾರಿ ಮಹೇಶ ನಾಗವ್ವನವರ, ಮಾಲಿನ್ಯ ನಿಯಂತ್ರಣ ಮಂಡಳಿಯ ಮುನಾಫ್ ಸೌದಾಗರ, ಶಶಿಧರ ಕೋಡಿಹಳ್ಳಿ, ವಿಠ್ಠಲ ದಂಡಿಗದಾಸರ ಕಾರ್ಯಾಚರಣೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.