
ಹುಬ್ಬಳ್ಳಿ: ಬಹುತೇಕ ಸಂಜೆಗತ್ತಲಲ್ಲಿ ಮಾತ್ರ ಜನರಿಂದ ತುಂಬಿರುತ್ತಿದ್ದ ನಗರದ ಸವಾಯಿ ಗಂಧರ್ವ ಸಭಾಂಗಣ, ಬುಧವಾರ ಬೆಳಿಗ್ಗೆಯೇ ಪುಟಾಣಿಗಳ ಕಲರವದಿಂದ ಗಿಜಿಗುಡುತ್ತಿತ್ತು. ಚಳಿಯನ್ನೂ ಲೆಕ್ಕಿಸದೆ ಮಕ್ಕಳು, ತಂಡೋಪತಂಡವಾಗಿ ಬಂದು, ಶಿಸ್ತಿನ ಸಿಪಾಯಿಗಳಂತೆ ಸಭಾಂಗಣದ ಆವರಣದಲ್ಲಿ ಸರತಿ ಸಾಲಲ್ಲಿ ನಿಂತಿದ್ದರು. ಪ್ರತಿ ಮಗುವಿನ ಮುಖದಲ್ಲೂ ಕುತೂಹಲವಿತ್ತು.
‘ಪ್ರಜಾವಾಣಿ’ ಹಮ್ಮಿಕೊಂಡಿದ್ದ ಹುಬ್ಬಳ್ಳಿ ವಲಯದ ‘ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್’ ಸ್ಪರ್ಧೆಯ ಆರಂಭಕ್ಕೂ ಮುನ್ನ ಕಂಡುಬಂದ ದೃಶ್ಯಗಳಿವು. ಸ್ಪರ್ಧೆಯಲ್ಲಿ ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ, ಬಳ್ಳಾರಿ, ಕೊಪ್ಪಳ, ಉಡುಪಿ, ವಿಜಯನಗರ, ಬಳ್ಳಾರಿ ಜಿಲ್ಲೆಯ 7 ರಿಂದ 10ನೇ ತರಗತಿಯ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕ್ವಿಜ್ ಮಾಸ್ಟರ್ ಮೇಘವಿ ಮಂಜುನಾಥ ಸ್ಪರ್ಧೆ ನಿರ್ವಹಿಸಿದರು.
‘ಏನು ಪ್ರಶ್ನೆ ಕೇಳಬಹುದು’ ಎನ್ನುವ ಕೌತುಕ ಮಕ್ಕಳಲ್ಲಿ ಇತ್ತು. ಕಣ್ಣಲ್ಲಿ ಮಿಂಚಿನಂತೆ ಫಳಫಳಿಸುತ್ತಿತ್ತು. ಶಾಲೆಗಳ ಸಮವಸ್ತ್ರ ಧರಿಸಿ, ತಂಡದೊಂದಿಗೆ ಸಭಾಂಗಣದಲ್ಲಿ ಕುಳಿತು ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ವಿಷಯಾಧಾರಿತ ಹಾಗೂ ಸಾಮಾನ್ಯ ಜ್ಞಾನದ ಪುಸ್ತಕಗಳನ್ನು ಹಿಡಿದು, ಕೊನೆಯ ತಯಾರಿ ನಡೆಸಿದರು. ಒಂದೆಡೆ ಪಾಲಕರು, ಶಿಕ್ಷಕರು ಮಕ್ಕಳಿಗೆ ಕೈಕುಲುಕಿ ಹುರಿದುಂಬಿಸಿದರೆ, ಭಯಮಿಶ್ರಿತ ಕಣ್ಣಲ್ಲೇ ಮಕ್ಕಳು ಉತ್ತರ ಪತ್ರಿಕೆ ಹಿಡಿದು, ಪ್ರಶ್ನೆಗಳ ಮೇಲೆ ಚಿತ್ತ ಹರಿಸಿದರು. ಪರದೆ ಮೇಲೆ ಪ್ರಶ್ನೆ ಮೂಡುವ ಮೊದಲೇ, ಉತ್ತರ ಬರೆಯಲು ಸಜ್ಜಾಗುತ್ತಿದ್ದರು. ಇನ್ನು ಕೆಲ ಮಕ್ಕಳು ಕ್ಷಣಹೊತ್ತು ಕಾಯದೇ, ಬರೆದುಬಿಡುತ್ತಿದ್ದರು.
ಸ್ಪರ್ಧೆಗೆ ಎಲ್ಲರಿಗೂ ಉಚಿತ ಪ್ರವೇಶವಿತ್ತು. ಸ್ಪರ್ಧೆ ನಡೆಯುವ ಸ್ಥಳದಲ್ಲೂ ಕೆಲವರು ಹೆಸರು ನೋಂದಾಯಿಸಿಕೊಂಡರು. ಪ್ರಾಥಮಿಕ ಹಂತದಲ್ಲಿ 20 ಅಂಕದ ಸಾಮಾನ್ಯ ಜ್ಞಾನದ ರಸಪ್ರಶ್ನೆಗಳನ್ನು ನೀಡಲಾಗಿತ್ತು. ವಿಜ್ಞಾನ, ಸಮಾಜ, ಸಂಶೋಧನೆ, ಇತಿಹಾಸ, ಪ್ರಶಸ್ತಿ ಪುರಸ್ಕೃತರು, ಪ್ರಚಲಿತ ವಿಷಯಗಳ ಮೇಲೆ ಪ್ರಶ್ನೆ ಕೇಳಲಾಗಿತ್ತು. ಅದರಲ್ಲಿ ಆಯ್ಕೆಯಾದ ಉಡುಪಿ ಜಿಲ್ಲೆ ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್‌ನ ಎರಡು ತಂಡಗಳು, ಧಾರವಾಡದ ಸರ್ಕಾರಿ ಆದರ್ಶ ವಿದ್ಯಾಲಯ, ಹುಬ್ಬಳ್ಳಿಯ ಚಿನ್ಮಯ ವಿದ್ಯಾಲಯ, ಉತ್ತರ ಕನ್ನಡ ಜಿಲ್ಲೆ ಕುಮಟಾದ ಸಿವಿಎಎಸ್‌ಕೆ ಪ್ರೌಢಶಾಲೆ, ಉತ್ತರ ಕನ್ನಡದ ಪಿಎಂಶ್ರೀ ಶಾಲೆಯ ತಂಡಗಳನ್ನು ಮುಖ್ಯ ಸ್ಪರ್ಧೆ ‘ಗ್ರ್ಯಾಂಡ್ ಫಿನಾಲೆ’ಗೆ ಆಯ್ಕೆ ಮಾಡಲಾಯಿತು.
ಗ್ರ್ಯಾಂಡ್ ಫಿನಾಲೆಯಲ್ಲಿ ಐದು ಸುತ್ತು ಸ್ಪರ್ಧೆ ನಡೆದಿದ್ದು, ಪ್ರತಿ ಸುತ್ತಿನಲ್ಲೂ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನದ ಜೊತೆಗೆ ಅವರಲ್ಲಿರುವ ಏಕಾಗ್ರತೆ, ಚಾಣಾಕ್ಷತನ, ಗ್ರಹಿಕೆ ಸಾಮರ್ಥ್ಯ ಓರೆಗೆ ಹಚ್ಚಲಾಗಿತ್ತು. ತಪ್ಪು ಉತ್ತರ ಹೇಳಿದರೆ ಅಂಕ ಕಳೆದುಕೊಳ್ಳುವ, ಮೊದಲ ಅವಕಾಶದಲ್ಲಿ ಸರಿ ಉತ್ತರ ನೀಡಿದರೆ ಹೆಚ್ಚು ಅಂಕ ಪಡೆಯುವ ಸುತ್ತಿನ ಸ್ಪರ್ಧೆ ಪ್ರೇಕ್ಷಕರಲ್ಲೂ ಕುತೂಹಲ ಮೂಡಿಸಿತ್ತು. ಸ್ಪರ್ಧಾ ಮಕ್ಕಳು ಉತ್ತರಿಸಲಾಗದ ಪ್ರಶ್ನೆಗಳನ್ನು ಪ್ರೇಕ್ಷಕರಿಗೆ ಕೇಳಿ, ಸರಿ ಉತ್ತರ ನೀಡಿದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ: ಕಾರ್ಯಕ್ರಮಕ್ಕೆ ಉದ್ಘಾಟಿಸಿದ ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಈಶ್ವರ ಉಳ್ಳಾಗಡ್ಡಿ ಮಾತನಾಡಿ, ‘ಪ್ರಜಾವಾಣಿ ದಿನಪತ್ರಿಕೆ ಆಯೋಜಿಸಿರುವ ಈ ಸ್ಪರ್ಧೆ ವಿಶೇಷವಾಗಿದೆ. ಉತ್ತರ ಕರ್ನಾಟಕ ವಿದ್ಯಾರ್ಥಿಗಳಿಗೆ ಇದು ಉತ್ತಮ ವೇದಿಕೆಯಾಗಿದ್ದು, ಪ್ರತಿಭಾ ಪ್ರದರ್ಶನಕ್ಕೆ ಸಹಕಾರಿ. ಪ್ರತಿದಿನ ಪಠ್ಯಕ್ರಮ ಅಧ್ಯಯನ ಮಾಡುವುದರ ಜೊತೆಗೆ ಇಂತಹ ಪಠ್ಯೇತರ ಚಟುವಟಕೆಗಳ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ವ್ಯಕ್ತಿತ್ವ ವಿಕಸನ, ಸರ್ವಾಂಗೀಣ ಅಭಿವೃದ್ದಿ ಸಾಧ್ಯ’ ಎಂದರು.
ಪ್ರಜಾವಾಣಿ ಹುಬ್ಬಳ್ಳಿ ಬ್ಯುರೊ ಮುಖ್ಯಸ್ಥ ರಾಹುಲ ಬೆಳಗಲಿ, ಜಾಹೀರಾತು ವಿಭಾಗದ ಉಪಪ್ರಧಾನ ವ್ಯವಸ್ಥಾಪಕ ದಿವಾಕರ್ ಭಟ್, ಪ್ರಸರಣ ವಿಭಾಗದ ಪ್ರತಿನಿಧಿ ಸೋಮನಗೌಡ ಉಪಸ್ಥಿತರಿದ್ದರು.
ರಸಪ್ರಶ್ನೆ ಸ್ಪರ್ಧೆಯನ್ನು ಆರ್ಕಿಡ್ಸ್ ಇಂಟರ್‌ನ್ಯಾಷನಲ್ ಸ್ಕೂಲ್ ಪ್ರಸ್ತುತಪಡಿಸಿದೆ. ಎಸ್‌ಬಿಐ–ಬ್ಯಾಂಕಿಂಗ್ ಪಾರ್ಟನರ್, ಮೊಗು ಮೊಗು–ರಿಫ್ರೆಶಮೆಂಟ್ ಪಾರ್ಟನರ್, ಭೀಮಾ–ಸ್ಪೆಷಲ್ ಪಾರ್ಟನರ್, ನಂದಿನಿ–ನ್ಯೂಟ್ರಿಷನ್ ಪಾರ್ಟನರ್, ಏಷ್ಯಾನೆಟ್ ಸುವರ್ಣ ನ್ಯೂಸ್–ಟಿವಿ ಪಾರ್ಟನರ್ ಜೊತೆಗೆ ಪೂರ್ವಿಕಾ, ವಿಐಪಿಎಸ್, ಸ್ಪ್ರಿಂಟ್, ಐಸಿಎಸ್ ಮಹೇಶ್ ಪಿಯು ಕಾಲೇಜು, ಸೂಪರ್ ಬ್ರೇನ್, ಮಾರ್ಗದರ್ಶಿ, ದಿ ಟೀಮ್ ಅಕಾಡೆಮಿ, ಐಬಿಎಂಆರ್, ಮಂಗಳೂರು ಪಿಯು ಕಾಲೇಜು ಮತ್ತು ಶಾರದಾ ವಿದ್ಯಾಮಂದಿರದ ಸಹಯೋಗವಿದೆ.
‘ರಸಪ್ರಶ್ನೆ ಸ್ಪರ್ಧೆಯಿಂದ ಆತ್ಮವಿಶ್ವಾಸ ಹೆಚ್ಚಳ’
‘ಅವಕಾಶಗಳು ಸಿಕ್ಕಾಗ ಸದ್ಬಳಕೆ ಮಾಡಿಕೊಂಡು ಎದುರಾಗುವ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು’ ಎಂದು ಶಹರ ತಹಶೀಲ್ದಾರ್ ಮಹೇಶ ಗಸ್ತೆ ಹೇಳಿದರು. ಅಂತಿಮ ಹಂತಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಚೆಕ್ ವಿತರಿಸಿ ಮಾತನಾಡಿದ ಅವರು ‘ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದರೆ ವ್ಯಕ್ತಿತ್ವ ವಿಕಸನ ಆಗಬೇಕು. ಓದಿನ ಜೊತೆಗೆ ಸಾಮಾನ್ಯ ಜ್ಞಾನವು ಇದ್ದರೆ ಎಂಥದ್ದೇ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಹುದು. ಅದಕ್ಕೆ ವಿದ್ಯಾರ್ಥಿ ಜೀವನದಲ್ಲಿ ಜ್ಞಾನ ಕೌಶಲ ಶಿಸ್ತು ಸಂಯಮ ಅಗತ್ಯ’ ಎಂದರು. 'ರಸಪ್ರಶ್ನೆ ಸ್ಪರ್ಧೆ ಮೂಲಕ ಮಕ್ಕಳಲ್ಲಿ ಅಡಗಿರುವ ಜ್ಞಾನ ಹೊರಗೆ ತರಬಹುದು. ಸಮಯ ಪ್ರಜ್ಞೆ ಏಕಾಗ್ರತೆ ಬೆಳೆಸಬಹುದು. ಸರಿ ಉತ್ತರ ನೀಡಿದಾಗ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಿ ತನ್ನಲ್ಲಿ ಜ್ಞಾನವಿದೆ ಎಂಬ ಅರಿವು ಮೂಡುತ್ತದೆ. ಪ್ರಜಾವಾಣಿ ಉತ್ತಮ ಕಾರ್ಯಕ್ರಮ ಆಯೋಜಿಸಿದೆ’ ಎಂದರು.
ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್‌ಗೆ ಜಯ
‘ಪ್ರಜಾವಾಣಿ– ರಸಪ್ರಶ್ನೆ ಚಾಂಪಿಯನ್‌ಶಿಪ್’ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆ ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್‌ನ ಸೃಜನ್ ನವೀನ್ ಯಾಪಲಪರ್ವಿ ಹಾಗೂ ತಕ್ಷಕ್ ಶೆಟ್ಟಿ 111 ಅಂಕ ಗಳಿಸಿ ಜಯ ಗಳಿಸಿದರು. ₹ 5 ಸಾವಿರ ಬಹುಮಾನ ಗಳಿಸಿದ ಅವರು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾದರು. ಮೊದಲ ರನ್ನರ್ ಅಪ್ ಆದ ಅದೇ ಶಾಲೆಯ ಸ್ಕಂದ ಜೆ. ಶೆಟ್ಟಿ ಹಾಗೂ ಓಜಸ್ ದಿನೇಶ್ (40 ಅಂಕ) ಅವರಿಗೆ ₹3 ಸಾವಿರ ಎರಡನೇ ರನ್ನರ್ ಅಪ್ ಆದ ಹುಬ್ಬಳ್ಳಿಯ ಚಿನ್ಮಯ ವಿದ್ಯಾಲಯದ ಕೌಸ್ತುಬ್ ಕುಲಕರ್ಣಿ ಹಾಗೂ ಸಾಕ್ಷಿ ಕುಲಕರ್ಣಿ (30 ಅಂಕ) ಅವರಿಗೆ ₹2 ಸಾವಿರ ನಗದು ಬಹುಮಾನ ವಿತರಿಸಲಾಯಿತು. ಧಾರವಾಡದ ಸರ್ಕಾರಿ ಆದರ್ಶ ವಿದ್ಯಾಲಯದ ಸಮರ್ಥ ಪತ್ತಾರ ಹಾಗೂ ಶ್ರೀಧರ ಸೂರ್ಯವಂಶಿ ಉತ್ತರ ಕನ್ನಡ ಜಿಲ್ಲೆ ಕುಮಟಾದ ಸಿವಿಎಸ್‌ಕೆ ಪ್ರೌಢಶಾಲೆಯ ಅಮೋಘ ಹೆಗ್ಡೆ ಹಾಗೂ ನಿತೇಶ ಪಟಗಾರ ಉತ್ತರ ಕನ್ನಡದ ಪಿಎಂಶ್ರೀ ಶಾಲೆಯ ಮನೋಜ್ ಎಂ.ಎಸ್. ಹಾಗೂ ತೇಜಸ್ ಜಿ.ಜಿ. ಅವರು ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾಗಿ ಎರಡನೇ ಹಂತದಲ್ಲಿ ಸ್ಪರ್ಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.