ADVERTISEMENT

ಮತಬ್ಯಾಂಕ್ ಗಾಗಿ ಜಾತಿ ಸಮೀಕ್ಷೆ ಬಳಕೆ: ಕೇಂದ್ರ ಸಚಿವ ಜೋಶಿ ಆರೋಪ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 8:21 IST
Last Updated 13 ಏಪ್ರಿಲ್ 2025, 8:21 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: 'ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯು ಅವೈಜ್ಞಾನಿಕವಾಗಿದೆ ಎಂಬ ಆರೋಪವಿದೆ. ಇದನ್ನು ಜನರ ಕಲ್ಯಾಣಕ್ಕಾಗಿ ಅಲ್ಲದೆ, ಮತಬ್ಯಾಂಕ್ ಗಾಗಿ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸಮೀಕ್ಷೆಯ ವರದಿಯನ್ನು ಅಧ್ಯಯನ ಮಾಡಿ, ನಂತರ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸಮೀಕ್ಷೆ ವಿಚಾರದಲ್ಲಿ ಕಾಂಗ್ರೆಸ್ ನವರಲ್ಲೇ ಗೊಂದಲವಿದೆ. ಈ ಬಗ್ಗೆ ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಬೇಕು' ಎಂದರು.

'ಮಹಾತ್ಮ ಗಾಂಧಿ ಅವರು ಬೆಳಗಾವಿಗೆ ಭೇಟಿ ನೀಡಿದ್ದರ ಶತಮಾನೋತ್ಸವ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷವು ಸರ್ಕಾರದ ಹಣದಲ್ಲಿ ಮಾಡಿತು. ಇದು ನಕಲಿ ಗಾಂಧಿಗಳ ಸಮ್ಮೇಳನವಾಯಿತು. ಅಂಬೇಡ್ಕರ್ ಅವರು ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಭೇಟಿ ನೀಡಿದ್ದರ ಶತಮಾನೋತ್ಸವದ ಬಗ್ಗೆ ಕಾಂಗ್ರೆಸ್ ನವರಿಗೆ ಗೊತ್ತಿದ್ದರೂ ಕಾರ್ಯಕ್ರಮ ಆಯೋಜಿಸಿಲ್ಲ' ಎಂದರು.

ADVERTISEMENT

'ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಪಕ್ಷವು ಎಲ್ಲ ರೀತಿಯಲ್ಲೂ ಅನ್ಯಾಯ, ಅಪಮಾನ ಮಾಡಿತು. ಇದೀಗ ಪಕ್ಷದ ವರಿಷ್ಠರ ಸೂಚನೆಯಂತೆ ಈ ಕಾರ್ಯಕ್ರಮವನ್ನೂ ಆಯೋಜಿಸಿಲ್ಲ. ಇದು

ನಕಲಿ ಗಾಂಧಿಗಳ ಷಡ್ಯಂತ್ರ. ಅಂಬೇಡ್ಕರ್ ಇತಿಹಾಸ, ಹೋರಾಟ ಮರೆಮಾಚಲು ಯತ್ನಿಸಲಾಗುತ್ತಿದೆ. ಸರ್ಕಾರ ಮಾಡದ ಆಚರಣೆಯನ್ನು ಬಿಜೆಪಿ ಮಾಡಿದೆ' ಎಂದು ಹೇಳಿದರು.

'ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಹಾಗೂ ಇಂದಿರಾ ಗಾಂಧಿ ತಾವಾಗಿಯೇ ಭಾರತರತ್ನ ಪಡೆದರು. ಆದರೆ, ಅಂಬೇಡ್ಕರ್ ಗೆ ನೀಡಲಿಲ್ಲ. ಅಂಬೇಡ್ಕರ್ ಅವರು ನಿಪ್ಪಾಣಿಗೆ ಭೇಟಿ ನೀಡಿದ್ದರ ಶತಮಾನೋತ್ಸವ ಆಚರಣೆ ಕಾರ್ಯಕ್ರಮ ಮಾಡಲಾಗದಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಬೇಕು. ಇದ್ಯಾವುದೂ ಗೊತ್ತಿಲ್ಲದ ಸಚಿವ ಪ್ರಿಯಾಂಕ್ ಖರ್ಗೆ ಅಹಂಕಾರದಿಂದ, ಬಾಯಿಗೆ ಬಂದಂತೆ ಮಾತನಾಡುತ್ತಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.