
ಹುಬ್ಬಳ್ಳಿ: ‘ಮೊಬೈಲ್ ಬಳಕೆಯಿಂದ ದೇಶದಲ್ಲಿ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಪೋಷಕರು ಈ ಬಗ್ಗೆ ಗಮನ ಹರಿಸಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಎಂ.ಎಂ. ಜೋಶಿ ನೇತ್ರ ಸಂಸ್ಥೆ ವತಿಯಿಂದ ನಗರದ ಡೆನಿಸನ್ಸ್ ಹೋಟೆಲ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ‘ಐ ಫೆಸ್ಟ್’ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
‘ಮೊಬೈಲ್‌ನಿಂದ ಅನುಕೂಲಗಳ ಜತೆಗೆ ಅನನುಕೂಗಳು ಹೆಚ್ಚಿವೆ. ಮೊಬೈಲ್ ಹೆಚ್ಚು ಬಳಕೆಯಿಂದ ನೇತ್ರ ಸಮಸ್ಯೆ ಕಾಡುತ್ತದೆ. ಹಲವು ದೇಶಗಳಲ್ಲಿ 10ರಿಂದ 12 ವರ್ಷಗಳವರೆಗೆ ಮಕ್ಕಳಿಗೆ ಮೊಬೈಲ್ ಕೊಡದಂತೆ ಕ್ರಮ ಕೈಗೊಂಡಿವೆ. ಮಕ್ಕಳ ಕಣ್ಣಿನ ಆರೋಗ್ಯದ ಕುರಿತು ಪೋಷಕರು ಕಾಳಜಿ ವಹಿಸಬೇಕು. ಅವರು ಮೊಬೈಲ್ ಬಿಟ್ಟು ಕ್ರೀಡೆಯಲ್ಲಿ ತೊಡಗುವಂತೆ ಮಾಡಬೇಕು’ ಎಂದರು.
‘ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯಿಂದ 2024–25ನೇ ಸಾಲಿನಲ್ಲಿ ದೇಶದ ಜನರ ಆರೋಗ್ಯ ಖರ್ಚಿನಲ್ಲಿ ₹1.52 ಲಕ್ಷ ಕೋಟಿ ಉಳಿದಿದೆ. ಇದು ವಿಶ್ವದ ಅತಿ ದೊಡ್ಡ ಆರೋಗ್ಯ ಯೋಜನೆಯಾಗಿದ್ದು, ಕೋಟ್ಯಂತರ ಜನರು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ’ ಎಂದು ಹೇಳಿದರು.
‘ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ 44.94 ಲಕ್ಷ ಜನರು ಈ ಯೋಜನೆಯ ಪ್ರಯೋಜನ ಪಡೆದಿದ್ದು, ಅವರ ₹2,100 ಕೋಟಿ ಹಣ ಉಳಿತಾಯವಾಗಿದೆ. ಈ ಹಿಂದೆ ಶೇ 2ರಿಂದ3ರಷ್ಟು ಜನರು ಮಾತ್ರ ಆರೋಗ್ಯ ವಿಮೆ ಯೋಜನೆಯ ಪ್ರಯೋಜನ ಪಡೆಯುತ್ತಿದ್ದರು. ಆಯುಷ್ಮಾನ್ ಭಾರತ್ ಯೋಜನೆ ಜಾರಿಗ ಬಂದ ನಂತರ ಅತಿ ಹೆಚ್ಚಿನ ಜನರಿಗೆ ಪ್ರಯೋಜನವಾಗುತ್ತಿದೆ’ ಎಂದು ತಿಳಿಸಿದರು.
‘ವೈದ್ಯಕೀಯ ಕ್ಷೇತ್ರದಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಿದ ಫಲವಾಗಿ ದೇಶವು ಮೆಡಿಕಲ್ ಟೂರಿಸಂ ಹಬ್ ಆಗಿ ಬೆಳೆಯುತ್ತಿದೆ. ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಬೇರೆ ದೇಶಗಳಿಂದ ದೇಶಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. 2024-25ನೇ ಸಾಲಿನಲ್ಲಿ ವಿದೇಶಗಳಿಂದ 5.4 ಲಕ್ಷ ಜನರು ದೇಶಕ್ಕೆ ಭೇಟಿ ನೀಡಿದ್ದಾರೆ’ ಎಂದರು.
‘ದೃಷ್ಟಿ ನೀಡುವ ಶಕ್ತಿ ಇರುವುದು ನೇತ್ರತಜ್ಞರಿಗೆ ಮಾತ್ರ. ದೈಹಿಕ, ಮಾನಸಿಕ, ಸಾಮಾಜಿಕ ಸ್ವಾಸ್ಥ್ಯ ಮುಖ್ಯ. ಕಾಯಿಲೆ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಮುಂಜಾಗ್ರತೆ ವಹಿಸುವುದು ಮುಖ್ಯ. ಅದಕ್ಕಾಗಿ ಕೇಂದ್ರ ಸರ್ಕಾರವು ಫಿಟ್ ಇಂಡಿಯಾ, ಖೇಲೊ ಇಂಡಿಯಾ ಯೋಜನೆಗಳನ್ನು ಜಾರಿಗೆ ತಂದಿದೆ’ ಎಂದು ಹೇಳಿದರು.
‘ಸದ್ಯ ದೇಶ ಜಗತ್ತಿನ ನಾಲ್ಕನೇ ಅತಿ ದೊಡ್ಡ ಆರ್ಥಿಕತೆ ಹೊಂದಿದ್ದು, ಶೀಘ್ರದಲ್ಲೇ ಮೂರನೇ ಸ್ಥಾನಕ್ಕೇರಲಿದೆ. ಆಗ ನಾವು ಒಂದು, ಎರಡನೇ ಸ್ಥಾನದಲ್ಲಿರುವ ರಾಷ್ಟ್ರಗಳ ಜತೆಗೆ ಸ್ಪರ್ಧೆ ಮಾಡಬೇಕಾಗುತ್ತದೆ. ಅದಕ್ಕೆ ಆರೋಗ್ಯಯುತ ಮಾನವ ಸಂಪನ್ಮೂಲ, ಕೌಶಲ ಹೊಂದಿದ ಯುವಶಕ್ತಿ ಅಗತ್ಯ’ ಎಂದರು.
ಭಾರತೀಯ ನೇತ್ರವಿಜ್ಞಾನ ಸೊಸೈಟಿ ಅಧ್ಯಕ್ಷ ಪಾರ್ಥ ಬಿಸ್ವಾಸ್ ಮಾತನಾಡಿ, ‘ಮುಂದಿನ ಒಂದೆರಡು ದಶಕಗಳಲ್ಲಿ ಶೇ 50ರಷ್ಟು ಯುವಜನರು ಕಣ್ಣಿನ ಸಮಸ್ಯೆಗೆ ಒಳಗಾಗುತ್ತಾರೆ. ಈ ಸಮಸ್ಯೆ ನಿವಾರಣೆಗೆ ನೇತ್ರತಜ್ಞರು ಸರ್ಕಾರದೊಂದಿಗೆ ಕೈಜೋಡಿಸಲು ಸಿದ್ಧರಿದ್ಧಾರೆ’ ಎಂದು ಹೇಳಿದರು.
‘ದೇಶದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದೆ. ಮಧುಮೇಹದಿಂದ ಅಂಧತ್ವ ಉಂಟಾಗುವ ಸಾಧ್ಯತೆ ಇದೆ. ಮಧುಮೇಹಿಗಳು ಆರು ತಿಂಗಳಿಗೊಮ್ಮೆ ನೇತ್ರ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದರು.
ಎರಡು ದಿನ ನಡೆದ ಸಮ್ಮೇಳನದಲ್ಲಿ ತಜ್ಞರಿಂದ ಕ್ಲಿಷ್ಟಕರ ನೇತ್ರ ಶಸ್ತ್ರಚಿಕಿತ್ಸೆಯ ಪ್ರಾತ್ಯಕ್ಷಿಕೆ, ಉಪನ್ಯಾಸ, ಸಂವಾದ ಕಾರ್ಯಕ್ರಮಗಳು ನಡೆದವು. 750ಕ್ಕೂ ಹೆಚ್ಚು ಮಂದಿ ವರ್ಚುಯಲ್ ಮೂಲಕ ಪಾಲ್ಗೊಂಡಿದ್ದರು..
ಎಂ.ಎಂ.ಜೋಶಿ, ಡಾ.ಎ.ಎಸ್.ಗುರುಪ್ರಸಾದ್, ಡಾ.ಕೆ.ವಿ.ಸತ್ಯಮೂರ್ತಿ, ಕೃಷ್ಣ ಪ್ರಸಾದ್, ಕೆ.ಬಿ.ಶಿವರಾಮ್, ವಿಜಯಲಕ್ಷ್ಮಿ ಕೋರಿ, ವಿಜಯ ಸತ್ಯನಾಥ, ಡಾ.ಶಿವಯೋಗಿ ಕುಸುಗಲ್ ಇದ್ದರು.
2050ರ ವೇಳೆಗೆ ಪ್ರತಿ ಇಬ್ಬರು ಮಕ್ಕಳ ಪೈಕಿ ಒಬ್ಬರು ದೂರದೃಷ್ಟಿ ದೋಷಕ್ಕೆ ಒಳಗಾಗುವ ಸಾಧ್ಯತೆ ಇದೆ. ಇದಕ್ಕೆ ಪರಿಹಾರ ಕ್ರಮಗಳ ಕುರಿತು ಕೇಂದ್ರ ಸರ್ಕಾರಕ್ಕೆ ವರದಿ ನೀಡಲಾಗಿದೆಪಾರ್ಥ ಬಿಸ್ವಾಸ ಅಧ್ಯಕ್ಷ ಭಾರತೀಯ ನೇತ್ರವಿಜ್ಞಾನ ಸೊಸೈಟಿ
ನಮ್ಮ ಸಂಸ್ಥೆಯಿಂದ ಕಳೆದ ವರ್ಷ 59 ಲಕ್ಷ ಜನರಿಗೆ ನೇತ್ರ ತಪಾಸಣೆ ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗವನ್ನು ಅಂಧತ್ವ ಮುಕ್ತ ಮಾಡಲು ಶ್ರಮಿಸಲಾಗುತ್ತಿದೆಡಾ.ಶ್ರೀನಿವಾಸ ಜೋಶಿ ನಿರ್ದೇಶಕ ಎಂ.ಎಂ.ಜೋಶಿ ನೇತ್ರ ಸಂಸ್ಥೆ
ಪ್ರಶಸ್ತಿ ಪ್ರದಾನ
ಡಾ.ಗಿರೀಶ ಶಿವ ರಾವ್ ಅವರಿಗೆ ‘ಪದ್ಮಶ್ರೀ ಡಾ. ಎಂ.ಎಂ.ಜೋಶಿ ಒರೇಷನ್ ಪ್ರಶಸ್ತಿ’ ಡಾ. ಬ್ರಿಜ್ ಡಾ. ಸಂಜಯಕುಮಾರ ಮಿಶ್ರಾ ಅವರಿಗೆ ‘ಪದ್ಮಶ್ರೀ ಎಂ.ಎಂ. ಜೋಶಿ ನಯನಶ್ರೀ ಉತ್ಕೃಷ್ಟ ಸೇವಾ ಪ್ರಶಸ್ತಿ’ ಡಾ.ಪಾರ್ಥ ಬಿಸ್ವಾಸ್ ಅವರಿಗೆ ‘ಪದ್ಮಶ್ರೀ ಡಾ.ಎಂ.ಎಂ.ಜೋಶಿ ಮಾದರೀಯ ಸೇವಾ ಪ್ರಶಸ್ತಿ’ ಡಾ.ಅನಿಲ್‌ಕುಲಕರ್ಣಿ ಅವರಿಗೆ ‘ಪದ್ಮಶ್ರೀ ಡಾ.ಎಂ.ಎಂ.ಜೋಶಿ ಜೀವಮಾನ ಸಾಧನೆ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.