ADVERTISEMENT

ತಪ್ಪು ಒಪ್ಪಿಕೊಳ್ಳದ ಕಾಂಗ್ರೆಸ್‌: ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2024, 15:26 IST
Last Updated 31 ಮಾರ್ಚ್ 2024, 15:26 IST
<div class="paragraphs"><p>ಪ್ರಲ್ಹಾದ ಜೋಶಿ</p></div>

ಪ್ರಲ್ಹಾದ ಜೋಶಿ

   

ಹುಬ್ಬಳ್ಳಿ: ‘ಕಾಂಗ್ರೆಸ್ಸಿಗರು ಎಂದಿಗೂ ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ದೇಶದಲ್ಲಿ 60 ವರ್ಷಗಳ ಅವರ ಆಡಳಿತ ವೈಖರಿ ನೋಡಿದರೆ ನಗು ಬರುತ್ತದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು.

ಆದಾಯ ತೆರಿಗೆ (ಐ.ಟಿ) ಇಲಾಖೆ ಕಾಂಗ್ರೆಸ್‌ಗೆ ಹೊಸದಾಗಿ ನೋಟಿಸ್ ನೀಡಿರುವ ಕುರಿತು ನಗರದಲ್ಲಿ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘₹2 ಸಾವಿರಕ್ಕಿಂತ ಹೆಚ್ಚು ನಗದು ರೂಪದಲ್ಲಿ ಪಡೆಯಲು ಅವಕಾಶ ಇಲ್ಲ. ಆದರೆ, ಕಾಂಗ್ರೆಸ್‌ನವರು ನಿಯಮ ಉಲ್ಲಂಘಿಸಿ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿದ್ದಾರೆ. ಹೀಗಾಗಿ ಐ.ಟಿ ಅಧಿಕಾರಿಗಳು ನೋಟಿಸ್‌ ಕೊಟ್ಟಿದ್ದಾರೆ. ಅದರ ಬದಲು ಪ್ರೀತಿಯಿಂದ ಸನ್ಮಾನ ಮಾಡಬೇಕಿತ್ತಾ’ ಎಂದು ಪ್ರಶ್ನಿಸಿದರು.

ADVERTISEMENT

‘ತೆರಿಗೆ ಮರುಮೌಲ್ಯಮಾಪನ ಕುರಿತು ಐ.ಟಿ ಅಧಿಕಾರಿಗಳು ಆರಂಭಿಸಿದ್ದ ಪ್ರಕ್ರಿಯೆ ವಿರುದ್ಧ ಕಾಂಗ್ರೆಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ದೆಹಲಿ ಹೈಕೋರ್ಟ್ ವಜಾ ಮಾಡಿದೆ. ಇದರಿಂದ ಪ್ರಕರಣದಲ್ಲಿ ಸತ್ಯ ಇದೆ ಎಂಬುದು ಗೊತ್ತಾಗುತ್ತದೆ. ಇದನ್ನು ಅರ್ಥ ಮಾಡಿಕೊಂಡು ಅವರು ತನಿಖೆಗೆ ಸಹಕರಿಸಬೇಕು. ನೋಟಿಸ್ ಕೊಟ್ಟಿದ್ದನ್ನೇ ದೊಡ್ಡ ವಿಷಯ ಮಾಡುವುದು ಸರಿಯಲ್ಲ’ ಎಂದರು.  

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಬಂಧನ ಖಂಡಿಸಿ ವಿಪಕ್ಷಗಳ ಒಕ್ಕೂಟ ‘ಇಂಡಿಯಾ’ ರ‍್ಯಾಲಿ ನಡೆಸಿದ್ದಕ್ಕೆ ಪ್ರತಿಕ್ರಿಯಿಸಿ, ‘ಬಂಧನಕ್ಕೂ ಮುನ್ನ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯವು ಒಂಬತ್ತು ಬಾರಿ ಸಮನ್ಸ್ ನೀಡಿತ್ತು. ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ‘ಇಂಡಿಯಾ’ ಒಕ್ಕೂಟಕ್ಕೆ ವಿಶ್ವಾಸ ಇದೆಯೊ, ಇಲ್ಲವೊ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ಪ್ರಕರಣದಲ್ಲಿ ನ್ಯಾಯಾಲಯದ ಮೇಲೆ ಒತ್ತಡ ತರಲಾಗುತ್ತಿದೆ ಎಂದು 600 ವಕೀಲರು ಪತ್ರ ಬರೆದಿದ್ದಾರೆ. ಇದೇ ಒತ್ತಡ ತಂತ್ರವನ್ನು ಮುಂದುವರಿಸುತ್ತೀರಾ?’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.