
ಹುಬ್ಬಳ್ಳಿ: ವಿದುಷಿ ಕೃಷ್ಣಾ ಹಾನಗಲ್ ಸ್ಮರಣಾರ್ಥ ನೀಡಲಾಗುವ ‘ಕೃಷ್ಣಾ ಹಾನಗಲ್ ರಾಷ್ಟ್ರೀಯ ಪುರಸ್ಕಾರ’ಕ್ಕೆ ಖ್ಯಾತ ಕೊಳಲು ವಾದಕ ಪ್ರವೀಣ ಗೋಡ್ಖಿಂಡಿ ಅವರನ್ನು ಆಯ್ಕೆ ಮಾಡಲಾಗಿದ್ದು, ಜ.14ರಂದು ಸಂಜೆ 5.15ಕ್ಕೆ ನಗರದ ಸವಾಯಿ ಗಂಧರ್ವ ಕಲಾಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಗಂಗೂಬಾಯಿ ಹಾನಗಲ್ ಸಂಗೀತ ವಿದ್ಯಾಲಯದ ಅಧ್ಯಕ್ಷೆ ವೈಷ್ಣವಿ ಹಾನಗಲ್ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಂಗೂಬಾಯಿ ಹಾನಗಲ್ ಸಂಗೀತ ವಿದ್ಯಾಲಯ ಮತ್ತು ಸಿಂಫೋನಿ ಇನ್‌ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ವತಿಯಿಂದ ಕಾರ್ಯಕ್ರಮ ನಡೆಯಲಿದ್ದು, ಪಂ.ಎಂ.ವೆಂಕಟೇಶಕುಮಾರ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ₹50 ಸಾವಿರ ನಗದು, ಫಲಕವನ್ನು ಒಳಗೊಂಡಿದೆ ಎಂದರು.
ಈ ಹಿಂದೆ ಪಂ. ಎಂ.ವೆಂಕಟೇಶಕುಮಾರ, ಅಶ್ವಿನಿ ಭಿಡೆ ದೇಶಪಾಂಡೆ, ಶಿವಾನಂದ ಪಾಟೀಲ, ರವೀಂದ್ರ ಯಾವಗಲ್, ಫಯಾಜ್ ಖಾನ್, ಸಂಜೀವ ಅಭ್ಯಂಕರ, ಜಯತೀರ್ಥ ಮೇವುಂಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ಹೇಳಿದರು.
ಕೋಮಲ್ ನಾಡಿಗೇರ ಅವರಿಂದ ಗಾಯನ, ಪ್ರವೀಣ ಗೋಡ್ಖಿಂಡಿ ಅವರಿಂದ ಕೊಳಲು ವಾದನ ನಡೆಯಲಿದೆ. ಹೇಮಂತ ಜೋಶಿ, ಬಸವರಾಜ ಹಿರೇಮಠ ತಬಲಾ, ಚಿದಂಬರ ಜೋಶಿ ಹಾರ್ಮೋನಿಯಂ ಸಾತ್ ನೀಡಲಿದ್ದಾರೆ ಎಂದರು.
ಗ್ರೇಟರ್ ಮುಂಬೈ ಕಾರ್ಪೊರೇಷನ್‌ನ ನಿವೃತ್ತ ಸಹಾಯಕ ಆಯುಕ್ತ ಉದಯ್‌ಕುಮಾರ್ ಶಿರೂರಕರ್, ಪ್ರಸೂತಿ ತಜ್ಞೆ ಸೌಭಾಗ್ಯಾ ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ವಿದ್ಯಾಲಯದ ಕಾರ್ಯದರ್ಶಿ ವಿನಯ ನಾಯಕ, ಸಂತೋಷ್ ಮೊಕಾಶಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.