ADVERTISEMENT

ಕೃಷಿ ವಿ.ವಿ: 21ರಿಂದ ಕೃಷಿ ಮೇಳ

529 ವಸ್ತುಪ್ರದರ್ಶನ ಮಳಿಗೆ, 6 ಗೋಷ್ಠಿ: ಕುಲಪತಿ ಪ್ರೊ. ಪಿ.ಎಲ್‌.ಪಾಟೀಲ ಮಾಹಿತಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 15:55 IST
Last Updated 14 ಸೆಪ್ಟೆಂಬರ್ 2024, 15:55 IST

ಧಾರವಾಡ: ‘ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಸೆ.21ರಿಂದ 24ರವರೆಗೆ ಕೃಷಿ ಮೇಳ ನಡೆಯಲಿದ್ದು, 529 ವಿವಿಧ ವಸ್ತು ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗುವುದು’ ಎಂದು ಕುಲಪತಿ ಪ್ರೊ. ಪಿ.ಎಲ್‌.ಪಾಟೀಲ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘150 ಹೈಟೆಕ್‌, 214 ಸಾಮಾನ್ಯ, 110 ಯಂತ್ರೋಪಕರಣ, 27 ಭಾರಿ ಯಂತ್ರೋಪಕರಣ ಹಾಗೂ 28 ಆಹಾರ ಮಳಿಗೆಗಳು ಈಗಾಗಲೇ ಬುಕ್‌ ಆಗಿವೆ. ಕೃಷಿ ಪರಿಕರ (ರಸಗೊಬ್ಬರ, ಕೀಟ–ಕಳೆನಾಶಕ..), ನರ್ಸರಿ, ಬೀಜ ಘಟಕ, ಜಾನುವಾರು ಪ್ರದರ್ಶನ, ಸಂಶೋಧನಾ ತಾಕು ಮೊದಲಾದ ಮಳಿಗೆಗಳು ಇರಲಿವೆ. ರೈತರಿಗೆ ಕೃಷಿ ತಂತ್ರಜ್ಞಾನಗಳನ್ನು ತಲುಪಿಸುವುದು ಮೇಳದ ಉದ್ದೇಶ’ ಎಂದರು.

‘ಪ್ರಾಯೋಗಿಕ ತಾಕುಗಳ ವೀಕ್ಷಣೆ, ತಜ್ಞರಿಂದ ಕೃಷಿ ಸಮಸ್ಯೆಗಳ ಕುರಿತು ವಿಚಾರ ವಿನಿಮಯ, ಫಲಪುಷ್ಪ ಪ್ರದರ್ಶನ, ಗಡ್ಡೆ– ಗೆಣಸು ಪ್ರದರ್ಶನ, ವಿಸ್ಮಯಕಾರಿ ಕೀಟ ಪ್ರಪಂಚ, ಸಾವಯವ ಕೃಷಿ ವಸ್ತು ಪ್ರದರ್ಶನ ಏರ್ಪಡಿಸಲಾಗುವುದು. ಬೀಜ, ಜೈವಿಕ ಗೊಬ್ಬರ ಮಾರಾಟ ನಡೆಯಲಿದೆ. ಪುಷ್ಪ ತ್ಯಾಜ್ಯ ಬಳಸಿ ಅಗರಬತ್ತಿ ತಯಾರಿಕೆ ಕುರಿತು ಬೆಳೆಗಾರರಿಗೆ ಮಾಹಿತಿ ನೀಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 22ರಂದು ಬೆಳಿಗ್ಗೆ 10.30ಕ್ಕೆ ಕೃಷಿ ಮೇಳವನ್ನು ಉದ್ಘಾಟಿಸುವರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಎಸ್‌.ಲಾಡ್‌ ಪಾಲ್ಗೊಳ್ಳುವರು. ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಕೃಷಿ ಪ್ರಕಟಣೆಗಳನ್ನು ಬಿಡುಗಡೆಗೊಳಿಸುವರು.

ಮೇಳದ ಅಧ್ಯಕ್ಷ ಪ್ರೊ. ಎಸ್‌.ಎಸ್‌.ಅಂಗಡಿ ಹಾಗೂ ಉಪಾಧ್ಯಕ್ಷ ಪ್ರೊ.ಬಿ.ಡಿ.ಬಿರಾದಾರ  ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.