ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ರಾಜ್ಯ ಅಲೆಮಾರಿ ಶಿಳ್ಳೇಕ್ಯಾತರ-ಕಿಳ್ಳೇಕ್ಯಾತರ ಅಭಿವೃದ್ಧಿ ಸಂಘದ ವತಿಯಿಂದ ಫೆಬ್ರುವರಿ 5 ರಂದು ನಗರದಲ್ಲಿ ರಾಜ್ಯಮಟ್ಟದ ಅಲೆಮಾರಿ ಶಿಳ್ಳೇಕ್ಯಾತ-ಕಿಳ್ಳೇಕ್ಯಾತರ ಸಮಾಜದ ಸ್ಥಿತಿಗತಿ ಮತ್ತು ತೊಗಲು ಗೊಂಬೆಯಾಟ ಉತ್ಸವ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉದ್ಘಾಟನೆ ನೆರವೇರಿಸುವರು. ಬಾಗಲಕೋಟೆಯ ಕಲ್ಲಿನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಚಾಮರಾಜನಗರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಂ.ಆರ್.ಗಂಗಾಧರ ಅವರು ‘ಗೊಂಬೆಯಾಟವಯ್ಯಾ‘ ಪತ್ರಿಕೆ ಬಿಡುಗಡೆಗೊಳಿಸುವರು ಎಂದು ಹೇಳಿದರು.
ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ವೀರಣ್ಣ ರಾಜೂರ ಅವರು ‘ನಾ ಕಂಡ ನಾಡೋಜ’ ಪುಸ್ತಕ ಬಿಡುಗಡೆಗೊಳಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಶಕ್ತ ಭಾಷಾ ನೀತಿ ತಜ್ಞರ ಸಮಿತಿ ಸದಸ್ಯ
ಸಣ್ಣವೀರಣ್ಣ ದೊಡ್ಡಮನಿ ಆಶಯ ಭಾಷಣ ಮಾಡುವರು. ನಿವೃತ್ತ ಪ್ರಾಧ್ಯಾಪಕ ಧನವಂತ ಹಾಜವಗೋಳ ಪುಸ್ತಕ ಹಾಗೂ ಪತ್ರಿಕೆ ಪರಿಚಯಿಸುವರು ಎಂದರು.
ಶಿಳ್ಳೇಕ್ಯಾತರ-ಕಿಳ್ಳೇಕ್ಯಾತರ ಸಮುದಾಯದ ಬಗ್ಗೆ ಸರ್ಕಾರದ ಆದೇಶ ಹಾಗೂ ಕಾನೂನು ಸಲಹೆ ಕುರಿತು ಲಕ್ಷ್ಮಣ ಬಕ್ಕಾಯಿ ಉಪನ್ಯಾಸ ನೀಡುವರು.ವಿಲಾಸ ಕುಮಾರ ಸಿಂಧೆ ಪಾಲ್ಗೊಳ್ಳುವರು. ಭೀಮವ್ವ ಶಿಳ್ಳೇಕ್ಯಾತರ, ನಾರಾಯಣಪ್ಪ ಶಿಳ್ಳೇಕ್ಯಾತರ, ಕೇಶವಪ್ಪ ಶಿಳ್ಳೇಕ್ಯಾತ ಅವರಿಗೆ ಸನ್ಮಾನಿಸಲಾಗುವುದು ಸಂಶೋಧಕ ಬಿ.ವಿ.ಶಿರೂರ ಸಮಾವೇಶದ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಮಧ್ಯಾಹ್ನ 12 ಗಂಟೆಗೆ ರಾಮಾಯಣ ಕಥಾ ಪ್ರಸಂಗ: ವಾಲಿ ಸುಗ್ರೀವರ ಕಾಳಗ, ಮಹಾಭಾರತ ಕಥಾ ಪ್ರಸಂಗ, ವೀರ ಅಭಿಮನ್ಯು ಕಾಳಗ, 3 ಗಂಟೆಗೆ ರಾಮಾಯಣ ಕಥಾ ಪ್ರಸಂಗ: ಲವ-ಕುಶರ ಕಾಳಗ, ರಾಮಾಯಣ ಕಥಾ ಪ್ರಸಂಗ; ಸೀತಾಪಹರಣ ತೊಗಲು ಗೊಂಬೆ ಪ್ರದರ್ಶನ ಜರುಗಲಿದೆ. ಸಮಾಜದ ಪರ್ಯಾಯ ಪದಗಳ ವಿಶ್ಲೇಷಣೆ ಮತ್ತು ಸರ್ಕಾರದ ದ್ವಂದ್ವ ನೀತಿ, ಸಮಾಜದ ಸಂಘಟನೆ ಸ್ಥಿತಿಗತಿ, ಸಮಾಜದ ಪರಂಪರೆ, ಒಳಾಡಳಿತ ವ್ಯವಸ್ಥೆ ಹಾಗೂ ಕುಲಶಾಸ್ತ್ರೀಯ ಸಮೀಕ್ಷೆ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾತನಾಡುವರು ಎಂದರು.
ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ. ಗದುಗಿನ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಸಮಾರೋಪ ಭಾಷಣ ಮಾಡುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ ಪಾಲ್ಗೊಳ್ಳುವರು. ಶಿಳ್ಳೇಕ್ಯಾತ-ಕಿಳ್ಳೇಕ್ಯಾತ ಸಮುದಾಯದವರ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಸರ್ಕಾರ ಬಜೆಟ್‍ನಲ್ಲಿ ಅನುದಾನ ಮೀಸಲಿಡಬೇಕು ಎಂದು ಶಂಕರ ಹಲಗತ್ತಿ ಒತ್ತಾಯಿಸಿದರು.
ಸಂಘದ ಉಪಾಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ, ವೀರಣ್ಣ ಒಡ್ಡೀನ, ಗುರು ಹಿರೇಮಠ, ಧನವಂತ ಹಾಜವಗೋಳ ಸುದ್ದಿಗೋಷ್ಠಿಯಲ್ಲಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.