
ಅಳ್ನಾವರ: ವೇಗವಾಗಿ ಬೆಳೆಯುತ್ತಿರುವ ಪಟ್ಟಣದ ಜನರ ಮಹಾದಾಸೆ ಈಡೇರಿಸಲು ಹಾಗೂ ನಾಗರಿಕ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರ ಕಾಣುವ ಹಂಬಲ ಮತ್ತು ಹಣಕಾಸಿನ ಸೂಕ್ತ, ಸಮರ್ಥ ನಿರ್ವಹಣೆಗೆ ಆದ್ಯತೆ ನೀಡುವ ಮೂಲಕ ₹3.60 ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಗುತ್ತಿದೆ ಎಂದು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ಪ್ರಭಾರಿ ತಹಶೀಲ್ದಾರ್ ಡಿ.ಎಚ್. ಹೂಗಾರ ತಿಳಿಸಿದರು.
ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಗ್ರಹದಲ್ಲಿ ಬುಧವಾರ ನಡೆದ 2026-27ನೇ ಸಾಲಿನ ಆಯ-ವ್ಯಯ ಮಂಡನಾ ಸಭೆಯಲ್ಲಿ ಸಿದ್ದ ಪಡಿಸಿದ ಬಜೆಟ್ ಪ್ರತಿಯನ್ನು ಅವರು ಓದಿ, ಒಟ್ಟು ₹19.96 ಕೋಟಿ ಜಮೆ ನಿರೀಕ್ಷೆ ಇದ್ದು, ₹19.93 ಕೋಟಿ ಖರ್ಚು ಅಂದಾಜಿಸಲಾಗಿದೆ ಎಂದರು.
ಸ್ವಂತ ಆದಾಯದ ಮೂಲಗಳಾದ ಆಸ್ತಿ ತೆರಿಗೆ, ನೀರಿನ ಕಂದಾಯ, ಅಭಿವೃದ್ಧಿ ಶುಲ್ಕ, ಮಳಿಗೆ ಬಾಡಿಗೆಯಿಂದ ಹೆಚ್ಚಿನ ಆದಾಯ ನಿರೀಕ್ಷೆ ಇದೆ. ನೀರು ಸರಬರಾಜು ವ್ಯವಸ್ಥೆ ಸುಧಾರಣೆಗೆ ಕ್ರಮಕ್ಕಾಗಿ ಸ್ವಂತ ಮೂಲಗಳಿಂದ ಆದಾಯ ಸಂಗ್ರಹಿಸುವ ಗುರಿ ಇದೆ ಎಂದರು.
ರಾಜ್ಯ ಹಣಕಾಸು ಯೋಜನೆಯಡಿ ₹50 ಲಕ್ಷ, ಮುಕ್ತ ನಿಧಿ ಅನುದಾನ ₹2 ಕೋಟಿ, ಎಸ್‍ಎಫ್‍ಸಿ ಕುಡಿಯುವ ನೀರಿನ ಅನುದಾನ ₹50 ಲಕ್ಷ ಸೇರಿ ಒಟ್ಟು ₹7.40 ಕೋಟಿ ರಾಜಸ್ವ ಅನುದಾನ ಸರ್ಕಾರದಿಂದ ನಿರೀಕ್ಷಿಸಲಾಗಿದೆ. ಕೇಂದ್ರ ಹಣಕಾಸು ಆಯೋಗದಿಂದ 15 ಮತ್ತು 16 ನೇ ಹಣಕಾಸು ಯೋಜನೆಯಡಿ ಬರುವ ಅಂದಾಜು ₹1 ಕೋಟಿ
ಅನುದಾನವನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ವೆಚ್ಚದ ವಿವರ: ಕಚೇರಿ ವೆಚ್ಚ ₹76.5 ಲಕ್ಷ, ಹೊರಗುತ್ತಿಗೆ ನೀರು ಸರಬರಾಜು ಸಿಬ್ಬಂದಿ ವೇತನ ₹2.50 ಲಕ್ಷ, ಎಸ್‍ಡಬ್ಲೂಎಂ ಸೈಟನ್ ಹೊರಗುತ್ತಿಗೆ ಲೇಬರ ವೆಚ್ಚ
₹52 ಲಕ್ಷ, ಜಾಕವೆಲ್ ವಿದ್ಯುತ್ ನಿರ್ವಹಣೆಗೆ ₹120 ಲಕ್ಷ . ಹಳಿಯಾಳ ಜಾಕವೆಲ್ ಜಾಗೆ ಲೀಸ್ ಪಾವತಿಗೆ ₹2.50 ಲಕ್ಷ, ಬೀದಿ ದೀಪಗಳ ನಿರ್ವಹಣೆಗೆ ₹12 ಲಕ್ಷ, ನೀರು ಸರಬರಾಜು ಮತ್ತು ವಾರ್ಷಿಕ ನಿರ್ವಹಣೆಗೆ ₹135 ಲಕ್ಷ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದರು.
ಮೂಲ ಸೌಕರ್ಯಗಳು: ರಸ್ತೆ ನಿರ್ಮಾಣಕ್ಕೆ ₹45 ಲಕ್ಷ, ಚರಂಡಿ ನಿರ್ಮಾಣಕ್ಕೆ ₹50 ಲಕ್ಷ, ಮಳೆ ನೀರು ಚರಂಡಿ ರಸ್ತೆ ನಿರ್ಮಾಣಕ್ಕೆ ₹35 ಲಕ್ಷ, ಶೌಚಾಲಯ ಮತ್ತು ಪಟ್ಟಣದ ನೈರ್ಮಲೀಕರಣ ನಿರ್ವಹಣೆಗೆ ₹6 ಲಕ್ಷ. ಕಟ್ಟಡ ನಿರ್ಮಾಣಕ್ಕೆ ₹ 315 ಲಕ್ಷಗಳ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಜೊತೆಗೆ ಪಟ್ಟಣದ ಎಲ್ಲ ಕೆರೆಗಳ ಅಭಿವೃದ್ದಿ ಮತ್ತು ಪುನರಚೇತನಕ್ಕಾಗಿ ಅಮೃತ 2.0 ಯೋಜನೆಯಡಿ ₹3 ಕೋಟಿ ಅಂದಾಜು ಅನುದಾನ ನೀರಿಕ್ಷೆ ಇದೆ ಎಂದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಾಶ ಮುಗದಮು, ನಾಗರಾಜ ಗುರ್ಲಹುಸೂರು, ಅಕೌಂಟಂಟ ಸಾವಿತ್ರಿ ಹವಗಿ. ಎಂ.ಎಸ್. ಬೆಂತೂರ, ಪ್ರವೀಣ ದೊಡ್ಡಮನಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.