ADVERTISEMENT

ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ಕೊಡದಿದ್ದರೆ ಕಠಿಣ ಕ್ರಮ: ಸಚಿವ ಪಾಟೀಲ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 11:34 IST
Last Updated 28 ಜೂನ್ 2020, 11:34 IST
ಕೃಷಿ ಸಚಿವ ಬಿ.ಸಿ.ಪಾಟೀಲ
ಕೃಷಿ ಸಚಿವ ಬಿ.ಸಿ.ಪಾಟೀಲ   

ಹುಬ್ಬಳ್ಳಿ: ಖಾಸಗಿ ಆಸ್ಪತ್ರೆಗಳು ಕೇವಲ ಲಾಭದ ಉದ್ದೇಶ ಹೊಂದದೆ ತಮ್ಮ ಬದ್ಧತೆ ಪ್ರದರ್ಶಿಸಬೇಕು. ಕೊರೊನಾ ಸೋಂಕಿಗೆ ಒಳಗಾದವರಿಗೆ ಚಿಕಿತ್ಸೆ ಕೊಡಲು ಮುಂದೆ ಬರಬೇಕು; ಇಲ್ಲವಾದರೆ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಎಚ್ಚರಿಕೆ ನೀಡಿದರು.

ಭಾನುವಾರ ನಗರಕ್ಕೆ ಭೇಟಿ ನೀಡಿದ್ದ ಅವರು ಮಾಧ್ಯಮದವರ ಜೊತೆ ಮಾತನಾಡಿ ‘ಖಾಸಗಿ ಆಸ್ಪತ್ರೆಯವರು ವೈದ್ಯಕೀಯ ಕ್ಷೇತ್ರದ ತತ್ವಗಳನ್ನು ಅರಿತುಕೊಂಡು ಸಮಾಜಮುಖಿ ಕಾರ್ಯದಲ್ಲಿ ಭಾಗಿಯಾಗಬೇಕು. ಆಸ್ಪತ್ರೆಗಳು ಗಳಿಕೆಗೆ ಮಾತ್ರ ಎನ್ನುವಂತಾಗಬಾರದು’ ಎಂದರು.

‘ರಾಜ್ಯದಲ್ಲಿ ಲಾಕ್‌ಡೌನ್‌ ತೆರವಾಗಿದೆ ಹೊರತು; ಕೊರೊನಾ ಹೋಗಿಲ್ಲ. ಸೋಂಕು ಹರಡುವುದನ್ನು ನಿಯಂತ್ರಿಸಲು ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಜನ ಕೂಡ ಹೆಚ್ಚು ಪ್ರಜ್ಞಾವಂತಿಕೆಯಿಂದ ನಡೆದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್‌ ಧರಿಸಿ, ಅಂತರ ಕಾಯ್ದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಭಾನುವಾರ ಲಾಕ್‌ಡೌನ್ ಘೋಷಿಸಿದ್ದು ಉತ್ತಮ ನಿರ್ಧಾರ. ಸಂಪೂರ್ಣ ಲಾಕ್‌ಡೌನ್‌ ಆಗಬಾರದು ಎಂದರು.

ಡಿ.ಕೆ. ಶಿವಕುಮಾರ್ ಪ್ರತಿಜ್ಞಾವಿಧಿ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಪಾಟೀಲ ‘ಅವರದ್ದು ಕಾಂಗ್ರೆಸ್‌ ಪಕ್ಷ, ಏನಾದರೂ ಮಾಡಿಕೊಳ್ಳಲಿ. ಸರ್ಕಾರ ವಿಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ತೊಂದರೆಯಾಗದಂತೆ ಕಾರ್ಯಕ್ರಮ ಮಾಡಲಿ’ ಎಂದರು.

ಸೊಯಾಬಿನ್ ಕಳಪೆ ಬಿತ್ತನೆ ಬೀಜದಿಂದ ರೈತರಿಗೆ ಸಾಕಷ್ಟು ತೊಂದರೆಯಾಗಿದೆ. ಯಾವ ಕಂಪನಿಗಳ ಬೀಜಗಳೂ ಮೊಳಕೆ ಒಡೆದಿಲ್ಲ. ಆದ್ದರಿಂದ ರೈತರಿಗೆ ಪರಿಹಾರ ನೀಡಲು ಸೂಚಿಸಿದ್ದೇನೆ. ರಾಜ್ಯದಲ್ಲಿ ಎಲ್ಲಿಯೂ ರಸಗೊಬ್ಬರದ ಅಭಾವವಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.