ADVERTISEMENT

ಆರದಿರಲಿ ‘ಬೆಳಕು’...

ಪಟಾಕಿ ಹೊಡೆಯುವ ಖುಷಿಯ ಜೊತೆಗೆ ಕಣ್ಣುಗಳು ಜೋಪಾನ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 16:33 IST
Last Updated 13 ನವೆಂಬರ್ 2020, 16:33 IST
ಡಾ. ದೀಪ್ತಿ ಜೋಶಿ
ಡಾ. ದೀಪ್ತಿ ಜೋಶಿ   

ದೀಪಾವಳಿ ಬೆಳಕಿನ ಹಬ್ಬ. ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ಸಾಗಬೇಕೆಂದು ಮನುಷ್ಯನಿಗೆ ಪ್ರೇರಣೆ ನೀಡುವ ಹಬ್ಬ. ದೀಪಾವಳಿ ಎಂದಾಕ್ಷಣ ಮನೆಯಂಗಳದಲ್ಲಿ, ಆಗಸದಂಗಳದಲ್ಲಿ ಬಣ್ಣಗಳ ಚಿತ್ತಾರ ಮೂಡಿಸಿ, ಢಂ–ಢಂ ಎಂಬ ಶಬ್ದದಿಂದ ಮನಸ್ಸಿಗೆ ಖುಷಿ ನೀಡುವ ಪಟಾಕಿಗಳೇ ಕಣ್ಣ ಮುಂದೆ ಬರುತ್ತವೆ. ಆದರೆ ಅದೇ ಪಟಾಕಿಗಳು ಹಲವರ ಬಾಳಿನ ‘ಬೆಳಕನ್ನೇ’ ಆರಿಸಿವೆ.

ಹೌದು, ಪಟಾಕಿ ಹೊಡೆಯುವಾಗ ಎಷ್ಟೇ ಜಾಗರೂಕತೆ ವಹಿಸಿದರೂ ಒಂದಿಲ್ಲೊಂದು ಕಡೆ ಅಪಾಯಗಳು ನಡೆದೇ ಇರುತ್ತವೆ. ಈ ಬಾರಿ ಪಟಾಕಿಗಳಿಗೆ ನಿಷೇಧ ಹೇರಿ, ಹಸಿರು ಪಟಾಕಿಗಳನ್ನು ಹೊಡೆಯಲು ಮಾತ್ರ ಸರ್ಕಾರ ಅನುಮತಿ ನೀಡಿದೆ. ಇವು ಅಷ್ಟಾಗಿ ಅಪಾಯಕಾರಿ ಅಲ್ಲವಾದರೂ ಎಚ್ಚರಿಕೆ ವಹಿಸುವುದು ಅತ್ಯಗತ್ಯ.

ಪಟಾಕಿಯಿಂದ ಉಂಟಾಗುವ ಅವಘಡದಲ್ಲಿ ಬಹುಬೇಗ ಹಾನಿಗೊಳಗಾಗುವ ಅಂಗಗಳಲ್ಲಿ ಕಣ್ಣು ಸಹ ಒಂದು. ಕಣ್ಣು ಮಾನವನ ಬಹುಮುಖ್ಯ ಹಾಗೂ ಸೂಕ್ಷ್ಮ ಅಂಗವಾಗಿರುವುದರಿಂದ ಹಾನಿಗೊಳಗಾದವರ ಬಾಳಿನ ಕೊನೆವರೆಗೂ ‘ಕತ್ತಲು’ ಆವರಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ, ಪಟಾಕಿ ಹೊಡೆಯುವ ಖುಷಿಯಲ್ಲಿ ಕಣ್ಣಿನ ರಕ್ಷಣೆ ಬಗ್ಗೆಯೂ ಲಕ್ಷ್ಯವಿರಬೇಕು ಎಂಬುದು ವೈದ್ಯರ ಮಾತು.

ADVERTISEMENT

‘ಪಟಾಕಿ ಹೊಡೆಯುವ ಸಂದರ್ಭದಲ್ಲಿ ಹೊಗೆಯಿಂದಾಗಿ ಕಣ್ಣಿನ ಅಲರ್ಜಿ ಇರುವವರಿಗೆ ಹೆಚ್ಚು ಸಮಸ್ಯೆ ಉಂಟಾಗುತ್ತದೆ. ಪಟಾಕಿ ಸಿಡಿದು ಕಣ್ಣಿಗೆ ಬಡಿದರೆ ಅಕ್ಷಿಪಟಲ ಕಿತ್ತುಹೋಗುವ ಸಾಧ್ಯತೆ ಇರುತ್ತದೆ. ಪಟಾಕಿಯಲ್ಲಿನ ರಾಸಾಯನಿಕದಿಂದಲೂ ಕಣ್ಣಿಗೆ ತೊಂದರೆಯಾಗುತ್ತದೆ. ಇದು ಶಾಶ್ವತ ಅಂಧತ್ವಕ್ಕೆ ಕಾರಣವಾಗುತ್ತದೆ. ಶಸ್ತ್ರಚಿಕಿತ್ಸೆ ಮಾಡಿದರೂ ಮೊದಲಿನಷ್ಟು ದೃಷ್ಟಿ ಇರುವುದಿಲ್ಲ.

ಹಾಗಾಗಿ ಮಕ್ಕಳು ಪಟಾಕಿ ಹೊಡೆಯುವಾಗ ಪೋಷಕರು ಜೊತೆಯಲ್ಲೇ ಇರಬೇಕು’ ಎಂದು ಹುಬ್ಬಳ್ಳಿಯ ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆಯ ಚಿಕ್ಕ ಮಕ್ಕಳು ಹಾಗೂ ಮೆಳ್ಳಗಣ್ಣಿನ ನೇತ್ರಶಾಸ್ತ್ರ ಚಿಕಿತ್ಸಿಕಿ ದೀಪ್ತಿ ಜೋಶಿ ತಿಳಿಸಿದರು.

‘ಪಟಾಕಿ ಸಿಡಿದು ಗಾಯಗೊಂಡವರಲ್ಲಿ 20 ವರ್ಷದೊಳಗಿನವರೇ ಹೆಚ್ಚು. ಪಟಾಕಿ ಹೊಡೆಯುವ ಮಕ್ಕಳಿಗಿಂತ ಹತ್ತಿರ ನಿಂತು ನೋಡುವ ಮಕ್ಕಳೇ ಹೆಚ್ಚು ಹಾನಿಗೀಡಾಗುತ್ತಾರೆ. ಉಬ್ಬು, ಕಣ್ಣಿನ ಸುತ್ತ ಗಾಯವಾದರೆ ಚಿಕಿತ್ಸೆ ಮೂಲಕ ಸರಿಮಾಡಬಹುದು. ಆದರೆ ಕಣ್ಣಿನೊಳಗೆ ಗಾಯವಾದರೆ ಚಿಕಿತ್ಸೆ ನೀಡಿದರೂ ಸಮಸ್ಯೆ ಜೀವನದ ಕೊನೆವರೆಗೆ ಉಳಿದುಬಿಡುತ್ತದೆ. ಮಕ್ಕಳ ಮೆದುಳು ಬೆಳವಣಿಗೆ ಹಂತದಲ್ಲಿರುವುದರಿಂದ ಒಂದು ಕಣ್ಣಿಗೆ ಗಾಯವಾದರೂ ಮತ್ತೊಂದು ಕಣ್ಣಿಗೆ ಸಮಸ್ಯೆ ಉಂಟಾಗುತ್ತದೆ. ಕಣ್ಣಿನ ಗುಡ್ಡೆಯನ್ನೇ ಬದಲಾಯಿಸಬೇಕಾದ ಪರಿಸ್ಥಿತಿ ಸಹ ಎದುರಾಗಬಹುದು’ ಎಂದು ಬೆಂಗಳೂರಿನ ನೇತ್ರತಜ್ಞೆ ಬಸವಶ್ರೀ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.