ADVERTISEMENT

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 16:21 IST
Last Updated 13 ಜೂನ್ 2019, 16:21 IST
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನೇಕಾರರು ಗುರುವಾರ ಪ್ರತಿಭಟನೆ ನಡೆಸಿದರು
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನೇಕಾರರು ಗುರುವಾರ ಪ್ರತಿಭಟನೆ ನಡೆಸಿದರು   

ಹುಬ್ಬಳ್ಳಿ: ನೇಕಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಅಖಿಲ ಕರ್ನಾಟಕ ಕೈಮಗ್ಗ ನೇಕಾರರ ಸಂಘದ ಸದಸ್ಯರು ಗುರುವಾರ ವಿದ್ಯಾನಗರದಲ್ಲಿರುವ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿ ಮುಂದೆ ತೀವ್ರ ಪ್ರತಿಭಟನೆ ನಡೆಸಿದರು.

ಅಖಿಲ ಕರ್ನಾಟಕ ಕೈಮಗ್ಗ ನೇಕಾರರ ಸಂಘದ ಉಪಾಧ್ಯಕ್ಷ ಎನ್‌.ಜೆ. ಮಾಳವದೆ ಮಾತನಾಡಿ, ‘ಹಿಂದೆ 900ಕ್ಕೂ ಅಧಿಕ ಕುಟುಂಬಗಳು ಕೈಮಗ್ಗ ಅವಲಂಬಿಸಿದ್ದವು. ಈಗ, ಅರ್ಧಕ್ಕಿಂತ ಹೆಚ್ಚು ಮಗ್ಗಗಳು ಬಂದ್‌ ಆಗಿವೆ. ಬೆಡ್‌ಶೀಟ್‌, ಜಮ್ಖಾನೆ, ಟವೆಲ್‌ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಬೇರೆ ಖರೀದಿ ಮಾಡುವ ಮೂಲಕ ಉದ್ದೇಶಪೂರ್ವಕವಾಗಿ ಮಗ್ಗಗಳು ಬಂದ್‌ ಆಗುವಂತೆ ಮಾಡಲಾಗಿದೆ’ ಎಂದು ಆರೋಪಿಸಿದರು.

ನೇಕಾರರ ಬದುಕು ಪಾತಾಳಕ್ಕಿಳಿದಿದೆ. ಕೆಲವರು ಜೀವನ ನಡೆಸಲು ಹೋಟೆಲ್‌, ಬಾರ್‌ಗಳಲ್ಲಿ, ಬೇರೆಯವರ ಮನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ಕಳೆದ ಒಂದು ವರ್ಷದಿಂದ ನೇಕಾರರಿಗೆ ನೀಡುತ್ತಿರುವ ಪ್ರೋತ್ಸಾಹ ಧನ ಸ್ಥಗಿತಗೊಳಿಸಲಾಗಿದೆ. ಮಕ್ಕಳಿಗೆ ಶಿಷ್ಯವೇತನ ಸೌಲಭ್ಯ ಸಿಗುತ್ತಿಲ್ಲ. ನೇಕಾರರ ಆರೋಗ್ಯ, ಅವರ ಕಾಲೊನಿಗಳ ಸಮಸ್ಯೆ, ಅಭಿವೃದ್ಧಿ ಬಗ್ಗೆ ನಿಗಮ ಕಿಂಚಿತ್ತೂ ಗಮನ ಹರಿಸುತ್ತಿಲ್ಲ ಎಂದು ದೂರಿದರು.

‘ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ಅವರು, ನಿಗಮವನ್ನು ಉಳಿಸುವ ಬದಲಾಗಿ ಸಂಪೂರ್ಣವಾಗಿ ಬಂದ್‌ ಮಾಡಲು ಮುಂದಾಗಿದ್ದಾರೆ. ನೇಕಾರರಿಗೆ ಉದ್ಯೋಗ ಕಲ್ಪಿಸುವುದನ್ನು ಬಿಟ್ಟು ಅವರ ಜೀವನದ ಜೊತೆಗೆ ಆಟ ಆಡುತ್ತಿದ್ದಾರೆ. ಆದ್ದರಿಂದ, ಅವರನ್ನು ವರ್ಗಾವಣೆ ಮಾಡಬೇಕು’ ಎಂದು ಆಗ್ರಹಿಸಿದರು.

ರಾಜ್ಯ ನೇಕಾರರ ಸಂಘದ ಉಪಾಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ, ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ನಾಗಪ್ಪ ಬನ್ನಿಗಿಡದ, ಬಸವರಾಜ ಗಣಪಾ, ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಗಣಮುಖ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.