
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಸಂಘಟನೆಯವರು ಶುಕ್ರವಾರ ಆರೋಗ್ಯ ಹಕ್ಕಿನ ಜಾಥಾ ನಡೆಸಿದರು
ಧಾರವಾಡ: ರಾಜ್ಯದಲ್ಲಿ ಆರೋಗ್ಯ ಹಕ್ಕು ಕಾಯ್ದೆ ಜಾರಿಗೊಳಿಸಬೇಕು, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಮತ್ತು ಗುಣಮಟ್ಟದ ಔಷಧ ನೀಡಬೇಕು ಎಂದು ಆಗ್ರಹಿಸಿ ಡ್ರಗ್ ಆಕ್ಷನ್ ಫೋರಂ ಸೇರಿದಂತೆ ವಿವಿಧ ಸಂಘಟನೆಗಳವರು ಶುಕ್ರವಾರ ನಗರದಲ್ಲಿ ಜಾಥಾ ನಡೆಸಿದರು.
ಗಾಂಧೀ ಶಾಂತಿ ಪ್ರತಿಷ್ಠಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಆರೋಗ್ಯ ಹಕ್ಕಿನ ಜಾಥಾ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡು ‘ಜನರ ಆರೋಗ್ಯ ಮಾರಾಟಕಿಲ್ಲ’, ‘ಆರೋಗ್ಯ ಹಕ್ಕಿನ ಕಾಯ್ದೆ ಜಾರಿಯಾಗಲಿ’ ಭಿತ್ತಿ ಫಲಕಗಳನ್ನು ಪ್ರದರ್ಶಿಸಿದರು.
ಡ್ರಗ್ ಆಕ್ಷನ್ ಫೋರಂ ಅಧ್ಯಕ್ಷ ಡಾ. ಗೋಪಾಲ ದಾಬಡೆ ಮಾತನಾಡಿ, ‘ಔಷಧಗಳನ್ನು ಹೊರಗಡೆ ಖರೀದಿಸುವಂತೆ ಸರ್ಕಾರಿ ಆಸ್ಪತ್ರೆ ವೈದ್ಯರು ಚೀಟಿ ಬರೆದುಕೊಡಬಾರದು. ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಔಷಧಗಳು ಉಚಿತವಾಗಿ ಲಭ್ಯವಾಗಬೇಕು. ಕರ್ನಾಟಕದಲ್ಲಿ ಆರೋಗ್ಯ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಬೇಕು. ಆರೋಗ್ಯ ರಕ್ಷಣೆಯನ್ನು ಮೂಲಭೂತ ಹಕ್ಕನ್ನಾಗಿ ಮಾಡುವ ಕಾನೂನು ಬೇಕು’ ಎಂದು ಒತ್ತಾಯಿಸಿದರು.
‘ರಾಜ್ಯ ಸರ್ಕಾರವು ಏಳು ಜಿಲ್ಲಾ ಆಸ್ಪತ್ರೆಗಳನ್ನು ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಮಾದರಿಯಲ್ಲಿ ಖಾಸಗೀಕರಣ ಮಾಡಲು ಮುಂದಾಗಿರುವುದನ್ನು ಕೈಬಿಡಬೇಕು. ಇದರ ಬದಲು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಗೊಳಿಸಬೇಕು. ಖಾಸಗಿ ವಲಯದಲ್ಲಿ ಆಸ್ಪತ್ರೆಗಳ ಶುಲ್ಕವನ್ನು ನಿಯಂತ್ರಿಸಬೇಕು’ ಎಂದು ಆಗ್ರಹಿಸಿದರು.
ಡ್ರಗ್ ಆಕ್ಷನ್ ಫೋರಂ ಅಧ್ಯಕ್ಷ ಗೋಪಾಲ ದಾಬಡೆ, ಡಾ. ಸಂಜೀವ ಕುಲಕರ್ಣಿ, ಶಾರದಾ ದಾಬಡೆ, ಇಸಾಬೆಲ್ಲಾ ಝೇವಿಯರ್, ಎಚ್.ಜಿ.ದೇಸಾಯಿ, ಸುಂದರರಾಜ್, ಭವಾನಿ ಶಂಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.