ADVERTISEMENT

ಮನುಸ್ಮೃತಿ ದಹಿಸಿ ಆಕ್ರೋಶ; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 16:26 IST
Last Updated 25 ಡಿಸೆಂಬರ್ 2024, 16:26 IST
ಹುಬ್ಬಳ್ಳಿಯಲ್ಲಿ ಬುಧವಾರ ಸಮತಾ ಸೇನಾ ಹಾಗೂ ವಿವಿಧ ದಲಿತ ಸಂಘಟನೆಗಳ ಮಹಾಮಂಡಳದ ಸದಸ್ಯರು ಪ್ರತಿಭಟನೆ ನಡೆಸಿದರು
ಹುಬ್ಬಳ್ಳಿಯಲ್ಲಿ ಬುಧವಾರ ಸಮತಾ ಸೇನಾ ಹಾಗೂ ವಿವಿಧ ದಲಿತ ಸಂಘಟನೆಗಳ ಮಹಾಮಂಡಳದ ಸದಸ್ಯರು ಪ್ರತಿಭಟನೆ ನಡೆಸಿದರು   

ಹುಬ್ಬಳ್ಳಿ: ‘ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಸಂವಿಧಾನವೇ ಭಾರತದಲ್ಲಿ ವೇದ್ಯವಾಗಬೇಕೇ ಹೊರತು, ಅಸಮಾನತೆ, ಜಾತಿವಾದವನ್ನು ಪ್ರೇರೇಪಿಸುವ ಮನುಸ್ಮೃತಿಯಲ್ಲ’ ಎಂದು ಟೀಕಿಸಿ ಸಮತಾ ಸೇನಾ ಹಾಗೂ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾ ಮಂಡಳದ ಸದಸ್ಯರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ದುರ್ಗದಬೈಲ್‌ ವೃತ್ತದಲ್ಲಿ ಸಮಾವೇಶಗೊಂಡ ಸಂಘಟನೆಗಳ ಸದಸ್ಯರು ಮನುಸ್ಮೃತಿ ದಹನ ದಿನದ ಪ್ರಯುಕ್ತ ಮನುಸ್ಮೃತಿ ಗ್ರಂಥ ದಹಿಸಿದರು.

ಈ ವೇಳೆ ಮಾತನಾಡಿದ ಮುಖಂಡ ಗುರುನಾಥ ಉಳ್ಳಿಕಾಶಿ, ‘ಡಾ. ಬಿ.ಆರ್‌.ಅಂಬೇಡ್ಕರ್ ಸಂವಿಧಾನ ರಚಿಸುವ ಮೊದಲು ದಲಿತರ ಶೋಷಣೆಗೆ, ಮಹಿಳಾ ಶೋಷಣೆಗೆ, ಜಾತಿವಾದಕ್ಕೆ ಹಾಗೂ ಅಸಮಾನತೆಗೆ ಮನುವಾದಿಗಳ ಮನುಸ್ಮೃತಿ ಗ್ರಂಥ ಕಾರಣವಾಗಿತ್ತು. ಅದರಿಂದ ಕೆರಳಿದ ಶೋಷಿತ ವರ್ಗದವರು ಆ ಗ್ರಂಥ ದಹಿಸಿದ್ದರು. ಆ ದಿನದ ನೆನಪಗಾಗಿ ಇಂದು ಈ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ’ ಎಂದರು.

ADVERTISEMENT

‘ಇತ್ತೀಚೆಗೆ ಹಲವರು ತಮಗೆ ಗೌರವಿಸುವ ಸಂವಿಧಾನ ಬೇಕು, ಸಂವಿಧಾನ ಬದಲಿಸಲೆಂದೇ ಅಧಿಕಾರಕ್ಕೆ ಬಂದಿದ್ದೇವೆ ಎನ್ನುವಂಥ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯ, ರಾಷ್ಟ್ರದ ಹಲವೆಡೆ ದೇವಾಲಯದ ಪ್ರವೇಶಕ್ಕೆ ದಲಿತರಿಗೆ ಪ್ರವೇಶ ನಿರಾಕರಿಸುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಅಂಬೇಡ್ಕರ್‌ ಅವರ ಬಗ್ಗೆ ಹಗುರವಾಗಿ ಮಾತನಾಡಿ ಅವಮಾನಿಸಿದ್ದಾರೆ. ಇವೆಲ್ಲ ಮನುವಾದಿಗಳ ಮನಸ್ಥಿತಿಯಾಗಿದೆ’ ಎಂದು ಆರೋಪಿಸಿದರು.

ಪ್ರಭು ಪ್ರಭಾಕರ, ಫಕ್ಕಣ್ಣ ದೊಡ್ಡಮನಿ, ಇಂದುಮತಿ ಶಿರಗಾಂವಿ, ದೇವೆಂದ್ರಪ್ಪ ಇಟಗಿ, ಮಂಜು ಉಳ್ಳಿಕಾಶಿ, ಫಾರೂಖ್‌ ಶೇಖ, ಇಮ್ತಿಯಾಜ್‌ ಬಿಜಾಪುರ, ರಾಘು ಬಸವಂತಕರ, ರವಿ ಕದಂ, ಅಜ್ಮತ್ ಪಠಾಣ, ವಾಸೀಮ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.