ADVERTISEMENT

ಕನ್ನಡ ಕಲಿಕಾ ಕೇಂದ್ರ ಆರಂಭಕ್ಕೆ ಕ್ರಮ: ಪುರುಷೋತ್ತಮ ಬಿಳಿಮಲೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 4:58 IST
Last Updated 10 ಜುಲೈ 2025, 4:58 IST
<div class="paragraphs"><p>ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರೊ. ಪುರುಷೋತ್ತಮ ಬಿಳಿಮಲೆ ಮಾತನಾಡಿದರು. ಮಣಿಕುಮಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್, ಜಿಲ್ಲಾಧಿಕಾರಿ ದಿವ್ಯಪ್ರಭು ಪಾಲ್ಗೊಂಡಿದ್ದರು</p></div>

ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರೊ. ಪುರುಷೋತ್ತಮ ಬಿಳಿಮಲೆ ಮಾತನಾಡಿದರು. ಮಣಿಕುಮಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್, ಜಿಲ್ಲಾಧಿಕಾರಿ ದಿವ್ಯಪ್ರಭು ಪಾಲ್ಗೊಂಡಿದ್ದರು

   

ಧಾರವಾಡ: ‘ಇಲ್ಲಿನ ಬ್ಯಾಂಕ್‌, ಅಂಚೆ ಕಚೇರಿ, ಕೈಗಾರಿಕೆಗಳಲ್ಲಿನ ಕನ್ನಡೇತರರು ಕನ್ನಡ ಕಲಿಕೆಗೆ ಆಸಕ್ತಿ ತೋರಿದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕನ್ನಡ ಕಲಿಕಾ ಕೇಂದ್ರ ತೆರೆಯಲಾಗುವುದು’ ಎಂದು ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ADVERTISEMENT

‘ಮೂರು ತಿಂಗಳ ಕನ್ನಡ ಕಲಿಕಾ ಕ್ರ್ಯಾಷ್‌ ಕೋರ್ಸ್‌ ಆರಂಭಿಸಲಾಗುವುದು. ವಾರದಲ್ಲಿ ಮೂರು ಗಂಟೆ ಕನ್ನಡ ಕಲಿಸಲಾಗುವುದು. ಇದರಿಂದ ಸಂವಹನ ಕನ್ನಡ ಬೆಳೆಸಬಹುದು. ಬೆಂಗಳೂರಿನಲ್ಲಿ 22 ಕಡೆ ಈ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ’ ಎಂದರು.

‘ಗಬ್ಬೂರು ಬೈಪಾಸ್‌ ಚೌಕದಲ್ಲಿ ಗೋಕಾಕ ಚಳವಳಿ ಸ್ಮಾರಕ ನಿರ್ಮಿಸಬೇಕು, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸ್ಥಳೀಯ ಮಹನೀಯರೊಬ್ಬರ ಹೆಸರಿಡಬೇಕು ಎಂಬ ಬೇಡಿಕೆಗಳು ಇವೆ. ಈ ಬಗ್ಗೆ ಜಿಲ್ಲಾಡಳಿತ ಪ್ರಸ್ತಾವ ಸಲ್ಲಿಸಿದರೆ ಪ್ರಾಧಿಕಾರದಿಂದಲೂ ಸರ್ಕಾರಕ್ಕೆ ಒತ್ತಡ ಹೇರಲಾಗುವುದು’ ಎಂದು ಹೇಳಿದರು.

‘ವಾಣಿಜ್ಯ ಸಂಸ್ಥೆಗಳು, ಅಂಗಡಿ, ಮಳಿಗೆಗಳ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಬಳಕೆ ಮಾಡಬೇಕು ಎಂಬ ಆದೇಶ ಸರಿಯಾಗಿ ಪಾಲನೆಯಾಗುತ್ತಿಲ್ಲ. ಕೆಎಂಸಿ–ಆರ್‌ಐನಲ್ಲೂ ಕನ್ನಡ ಬಳಕೆ ಸಮರ್ಪಕವಾಗಿಲ್ಲ. ಕೆಡಿಪಿ ಸಭೆಯಲ್ಲಿ ಕನ್ನಡ ಅನುಷ್ಠಾನ ಸರಿಯಾಗಿ ಆಗಬೇಕು. ಈ ನಿಟ್ಟಿನಲ್ಲಿ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.

‘ವಿವಿಧ ಟ್ರಸ್ಟ್‌ಗಳ ಸ್ಥಿತಿಗತಿ ವರದಿ ಪಡೆದು, ಅನುದಾನ ಬಿಡುಗಡೆ ಸರ್ಕಾರಕ್ಕೆ ಒತ್ತಡ ಹೇರುತ್ತೇವೆ’ ಎಂದು ಉತ್ತರಿಸಿದರು. 

ಸಭೆಗೆ ಜಿಲ್ಲಾ ಲೀಡ್‌ ಬ್ಯಾಂಕ್‌ ಅಧಿಕಾರಿಗಳು ಗೈರು ಹಾಜರಾಗಿದ್ದಾರೆ. ಈ ನಡೆಯನ್ನು ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಲಿದೆ
ಪ್ರೊ. ಪುರುಷೋತ್ತಮ ಬಿಳಿಮಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
‘ಸಾಹಿತ್ಯ ನಡಿಗೆ’ ಆಯೋಜನೆಗೆ ಸಲಹೆ 
‘ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿನ ರಸ್ತೆಗಳಿಗೆ ಸಾಹಿತಿಗಳು ಸಾಧಕರ ಹೆಸರಿಡಲು ಹಾಗೂ ಸಾಹಿತ್ಯ ನಡಿಗೆ ಕಾರ್ಯಕ್ರಮ (ಧಾರವಾಡದಲ್ಲಿನ ಸಾಹಿತಿಗಳ ತಾಣ ವೀಕ್ಷಣೆ) ಕಾರ್ಯಕ್ರಮ ಆಯೋಜಿಸಲು ಸಲಹೆ ನೀಡಲಾಗಿದೆ’ ಎಂದು ಪ್ರೊ. ಪುರುಷೋತ್ತಮ ಬಿಳಿಮಲೆ ತಿಳಿಸಿದರು. ‘ಕನ್ನಡದ ಹೋರಾಟದಲ್ಲಿ ಕನ್ನಡ ಸಂಘಟನೆಗಳ ಪದಾಧಿಕಾರಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳ ಪಟ್ಟಿಯನ್ನು ಪ್ರಾಧಿಕಾರಕ್ಕೆ ‌ಕಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಇಂಥ ಪ್ರಕರಣಗಳನ್ನು ವಾಪಸ್‌ ಪಡೆಯುವುದಾಗಿ ಉಪಮುಖ್ಯಮಂತ್ರಿ ಹೇಳಿದ್ದರು. ಪಟ್ಟಿಯನ್ನು ಸರ್ಕಾರಕ್ಕೆ ಕಳಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.