ADVERTISEMENT

ಕಳಪೆ ಕಾಮಗಾರಿಗೆ ಗ್ರಾಮಸ್ಥರ ಆಕ್ರೋಶ

ರೈಲ್ವೇ ಗೇಟ್‌ 306ರಲ್ಲಿ ಬೃಹತ್ ತಡೆಗೋಡೆ ಕುಸಿತದಿಂದ ಸೃಷ್ಟಿಯಾದ ಆತಂಕ

ಇ.ಎಸ್.ಸುಧೀಂದ್ರ ಪ್ರಸಾದ್
Published 19 ಜುಲೈ 2019, 19:30 IST
Last Updated 19 ಜುಲೈ 2019, 19:30 IST
   

ಧಾರವಾಡ: ತಾಲ್ಲೂಕಿನ ಚಿಕ್ಕಮಲ್ಲಿಗವಾಡದಿಂದ ಮುಗದ ಹಾಗೂ ಮಂಡಿಹಾಳಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೇ ಅಂಡರ್‌ಪಾಸ್‌ನ ತಡೆಗೋಡೆ ಕುಸಿದಿದ್ದರಿಂದಾಗಿ ಒಂದೆಡೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದ್ದರೆ, ಮತ್ತೊಂದೆಡೆ ಕಳಪೆ ಕಾಮಗಾರಿಗೆ ಆಕ್ರೋಶವೂ ವ್ಯಕ್ತವಾಗಿದೆ.

ಮಾನವ ರಹಿತ ಲೆವಲ್ ಕ್ರಾಸಿಂಗ್‌ ಗೇಟ್ ಸಂಖ್ಯೆ 306ರ ಬಳಿ ಗ್ರಾಮಸ್ಥರ ಓಡಾಟಕ್ಕೆ ಅಂಡರ್‌ಪಾಸ್ ಕಾಮಗಾರಿ ಪ್ರಗತಿಯಲ್ಲಿದ್ದು ಎರಡು ವರ್ಷ ಕಳೆದಿದೆ. ಈವರೆಗೂ ಈ ಕಾಮಗಾರಿ ಪೂರ್ಣಗೊಂಡಿಲ್ಲ. ಸಂಪೂರ್ಣ ಕಾಂಕ್ರೀಟ್‌ನಿಂದ ನಿರ್ಮಿಸಿರುವ ಈ ಅಂಡರ್‌ಪಾಸ್‌ನ ತಡೆಗೋಡೆ, ಗುರುವಾರ ಸುರಿದ ಮಳೆಗೆ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.

‘ಆದರೆ ಇಲ್ಲಿ ಬಿದ್ದಿರುವ ಕಾಂಕ್ರೀಟ್ ತಡೆಗೋಡೆಯ ಬೃಹತ್‌ ತುಂಡುಗಳು ರೈಲ್ವೇ ಇಲಾಖೆಯ ಕಾಮಗಾರಿಗೆ ಕನ್ನಡಿ ಹಿಡಿದಂತಿದೆ. ಒಂದರಿಂದ ಎರಡು ಅಡಿ ಅಗಲದಷ್ಟಿರುವ ಬೃಹತ್ ತಡೆಗೋಡೆಯಲ್ಲಿ ಸಿಮೆಂಟ್‌ ಹಾಗೂ ಎಂ–ಸ್ಯಾಂಡ್ ಬಳಸಲಾಗಿದೆ. ಆದರೆ ಸ್ಟೀಲ್‌ ರಾಡ್‌ಗಳನ್ನು ಎಲ್ಲಿಯೂ ಹಾಕಿಲ್ಲ. ನಿರ್ಮಾಣ ಹಂತದಲ್ಲೇ ತಡೆಗೋಡೆಯ ಅಲ್ಲಲ್ಲಿ ಸೀಳು ಬಿಟ್ಟಿತ್ತು. ಇದನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತಾದರೂ, ಯಾರೂ ಅದಕ್ಕೆ ಸ್ಪಂದಿಸಲಿಲ್ಲ’ ಎಂದು ಗ್ರಾಮದ ಚನ್ನಪ್ಪ ತಿಳಿಸಿದರು.

ADVERTISEMENT

‘ಇಲ್ಲಿ ಹಳಿ ಮೇಲೆ ನಾವು ಆರಾಮವಾಗಿ ಸಾಗುತ್ತಿದ್ದೆವು. ಇಲ್ಲೊಂದು ಅಂಡರ್‌ಪಾಸ್ ಬೇಕು ಎಂದು ನಮ್ಮದೇನೂ ಬೇಡಿಕೆ ಇರಲಿಲ್ಲ. ಕೇಳದೇ ಮಾಡಿರುವುದು ನಮಗೆಲ್ಲರಿಗೂ ಸಂತೋಷವೇ. ಕೇಂದ್ರ ಸರ್ಕಾರ ಅದರಲ್ಲೂ ರೈಲ್ವೇ ಇಲಾಖೆ ಕೆಲಸ ಅಂದರೆ ಅಚ್ಚುಕಟ್ಟು ಎಂದು ನಾವು ಅಂದುಕೊಂಡು, ಕಾಮಗಾರಿ ವಿಳಂಬವಾದರೂ ಸಹಿಸಿಕೊಂಡಿದ್ದೆವು. ಆದರೆ ಇಲ್ಲಿ ಬಿದ್ದಿರುವ ಕಟ್ಟಡದ ಅವಶೇಷ ನೋಡಿದಮೇಲೆ ಇವರ ಕಾಮಗಾರಿಯ ಗುಣಮಟ್ಟದ ಅರಿವಾಗಿದೆ. ಹೀಗಾಗಿ ಇದು ತನಿಖೆ ಆಗಬೇಕು’ ಎಂದು ಚಿಕ್ಕಮಲಿಗವಾಡದ ಬಾಳಪ್ಪ ಕಡತಾಳ ಆಗ್ರಹಿಸಿದರು.

‘ತಡೆಗೋಡೆ ಕುಸಿಯುವ ಹೊತ್ತಿಗೆ ಇಲ್ಲಿ ಯಾರೂ ಇರಲಿಲ್ಲ. ಇದ್ದಿದ್ದರೆ ಖಂಡಿತವಾಗಿಯೂ ದೊಡ್ಡ ಅನಾಹುತವೇ ಆಗುತ್ತಿತ್ತು. ಅಂಡರ್‌ಪಾಸ್‌ ಕೆಳಗೆ ಕನಿಷ್ಠ ನಾಲ್ಕು ಅಡಿ ನೀರು ನಿಲ್ಲುತ್ತಿದೆ. ಇದರಲ್ಲಿ ಚಕ್ಕಡಿ ಹಾಗೂ ವಾಹನಗಳನ್ನು ತೆಗೆದುಕೊಂಡು ಹೋಗುವುದಾದರೂ ಹೇಗೆ. ರಸ್ತೆ ತುಂಬಾ ಹೂಳು ತುಂಬಿದೆ. ಉಳಿದ ಭಾಗವೂ ಕುಸಿಯುವ ಭೀತಿಯಲ್ಲೇ ಗ್ರಾಮಸ್ಥರು ನಿತ್ಯ ಸಂಚರಿಸಬೇಕಾಗಿದೆ. ಇದು ಕಳಪೆ ಕಾಮಗಾರಿ ಎಂಬುದನ್ನು ನಿಸ್ಸಂಶಯದಿಂದ ಹೇಳಬಹುದು' ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇಂಥ ಅಂಡರ್‌ಪಾಸ್ ಗೇಟ್ ಸಂಖ್ಯೆ 307ರಲ್ಲೂ ನಡೆಯುತ್ತಿದೆ. ಅಲ್ಲಿಯೂ ಇದೇ ಮಾದರಿಯಲ್ಲಿ ಕೆಲಸ ಮಾಡಲಾಗಿದೆ. ಹೀಗಾಗಿ ಅದು ಎಂದು ಕುಸಿಯುವುದೋ ಎಂಬ ಭೀತಿ ಆ ಗ್ರಾಮಸ್ಥರಲ್ಲೂ ಇದೆ. ರೈಲ್ವೇ ಇಲಾಖೆಯ ಈ ಕಾಮಗಾರಿ ಅನುಕೂಲಕ್ಕಿಂತ ಹೆಚ್ಚಾಗಿ ಅನಾನುಕೂಲವನ್ನೇ ಹೆಚ್ಚು ಸೃಷ್ಟಿಸಿದೆ. ಈ ಕುರಿತು ಕೂಲಂಕಶ ತನಿಖೆ ನಡೆಯಬೇಕು. ಲಕ್ಷಾಂತರ ರೂಪಾಯಿ ವ್ಯರ್ಥವಾಗಿರುವುದಕ್ಕೆ ಇಲಾಖೆ ಜನತೆಗೆ ಸ್ಪಷ್ಟನೆ ಕೊಡಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.