ADVERTISEMENT

ನವಲಗುಂದ: ಭಾರಿ ಮಳೆ; 8,965 ಹೆಕ್ಟೇರ್ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2024, 16:12 IST
Last Updated 12 ಅಕ್ಟೋಬರ್ 2024, 16:12 IST
ನವಲಗುಂದ ತಾಲ್ಲೂಕಿನಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಬೆಣ್ಣಿಹಳ್ಳ ಹಾಗೂ ತುಪ್ಪರಿಹಳ್ಳಗಳು ತುಂಬಿ ಜಮೀನಿನಲ್ಲಿ ನೀರು ಹರಿಯುತ್ತಿರುವುದು
ನವಲಗುಂದ ತಾಲ್ಲೂಕಿನಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಬೆಣ್ಣಿಹಳ್ಳ ಹಾಗೂ ತುಪ್ಪರಿಹಳ್ಳಗಳು ತುಂಬಿ ಜಮೀನಿನಲ್ಲಿ ನೀರು ಹರಿಯುತ್ತಿರುವುದು   

ನವಲಗುಂದ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿದ ಭಾರಿ ಮಳೆಗೆ ತಾಲ್ಲೂಕಿನಾದ್ಯಂತ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ.

ಪಟ್ಟಣದ ಅಂಬೇಡ್ಕರ್‌ನಗರ ಸೇರಿದಂತೆ ತಾಲ್ಲೂಕಿನ ಗುಮ್ಮಗೋಳ, ಶಿರಕೋಳ, ಮೊರಬ ಗ್ರಾಮಗಳಲ್ಲಿ ಬೆಣ್ಣಿಹಳ್ಳದ ಪ್ರವಾಹದ ನೀರು ಮನೆಗಳಿ ನುಗ್ಗಿದೆ. ತಿರ್ಲಾಪುರ ಗ್ರಾಮದಲ್ಲಿನ ಕೆರೆ ತುಂಬಿ, ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ಪರದಾಡಬೇಕಾಯಿತು.

ಮಳೆಯಿಂದಾಗಿ ಈರುಳ್ಳಿ, ಗೋವಿನಜೋಳ ಹಾಗೂ ಹತ್ತಿ ಬೆಳೆಗಳಿಗೆ ಹಾನಿಯಾಗಿದೆ. ತಾಲ್ಲೂಕಿನಾದ್ಯಂತ 8,965 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ತಾಲ್ಲೂಕು ಆಡಳಿತ ಮಾಹಿತಿ ನೀಡಿದೆ.

ADVERTISEMENT

ಅರೆಕುರಟ್ಟಿ ಗ್ರಾಮದಲ್ಲಿ 2 ಮನೆಗಳು  ಜಲಾವೃತಗೊಂಡಿವೆ. 131 ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಆಹಾರಧಾನ್ಯಗಳು ಹಾಳಾಗಿವೆ. 47 ಮನೆಗಳು ಭಾಗಶಃ ಕುಸಿದಿವೆ.

ತಾಲ್ಲೂಕಿನ ಶಿರಕೋಳ ಗ್ರಾಮದ ಸಮೀಪ ತುಪ್ಪರಿ ಹಳ್ಳ ದಾಟುವ ಸಂದರ್ಭದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿ ಮುಳ್ಳಿನ ಕಂಟಿಯಲ್ಲಿ ಸಿಲುಕಿಕೊಂಡಿದ್ದ ಇಬ್ಬರನ್ನು ಗ್ರಾಮಸ್ಥರ ಸಹಾಯದಿಂದ ರಕ್ಷಣೆ ಮಾಡಲಾಗಿದೆ.

ಭಾರಿ ಮಳೆಗೆ ತಾಲ್ಲೂಕು ಕೇಂದ್ರದಿಂದ ಪಡೆಸೂರ, ಹಾಲಕುಸುಗಲ್, ಶಾನವಾಡ, ತಿರ್ಲಾಪೂರ, ಮೊರಬ, ತಲೆಮೊರಬ, ಆಹೆಟ್ಟಿ ಶೀರೂರು ಹಾಗೂ ಗುಮ್ಮಗೋಳದಲ್ಲಿ ಸೇತುವೆಗಳು ಮುಳುಗಿದ್ದರಿಂದ ರಸ್ತೆ ಸಂಪರ್ಕ ಕಡೆತವಾಗಿದೆ.

ತಾಲ್ಲೂಕಿನ ಕಡದಳ್ಳಿ, ಗುಡಿಸಾಗರ, ನಾಗನೂರು, ಅರಹಟ್ಟಿ, ತಡಹಾಳ ಹಾಗೂ ಅಮರಗೋಳ ಗ್ರಾಮಗಳೂ ಬೆಣ್ಣಿಹಳ್ಳದ ಪ್ರವಾಹ ಭೀತಿಯಲ್ಲಿದ್ದು, ತಾಲ್ಲೂಕು ಆಡಳಿತ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. 

ನವಲಗುಂದದಲ್ಲಿ ಸುರಿದ ಮಳೆಯಿಂದಾಗಿ ಗೋವಿನಜೋಳದ ಬೆಳೆ ಜಲಾವೃತವಾಗಿದೆ
ನವಲಗುಂದ ತಾಲ್ಲೂಕಿನಲ್ಲಿ ಬೆಣ್ಣಿಹಳ್ಳದ ಪ್ರವಾಹದಿಂದ ಜಲಾವೃತವಾಗಿರುವ ಹತ್ತಿ ಬೆಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.