ADVERTISEMENT

ಕರ್ನಾಟಕ ಪ್ರವಾಹ | ಕಾಯಕ ನಂಬಿದ್ದರೂ ಕೈಲಾಸ ಕಾಣಲಾಗದ ಸ್ಥಿತಿ

ಹರ್ಷವರ್ಧನ ಶೀಲವಂತ
Published 20 ಆಗಸ್ಟ್ 2019, 10:47 IST
Last Updated 20 ಆಗಸ್ಟ್ 2019, 10:47 IST
ಚಂದು ಹರಿಣಶಿಕಾರ
ಚಂದು ಹರಿಣಶಿಕಾರ   

ಅಂದೇ ದುಡಿದು ಆ ಹೊತ್ತಿಗೆ ಉಣಬೇಕು. ದುಡಿಮೆ ದಕ್ಕದಿದ್ದರೆ ಅಂದಿಗೆ ಉಪವಾಸವೇ ಗತಿ. ಹಸಿವು ತಾಳದಿದ್ದರೆ ಸ್ವಾಭಿಮಾನ ಅಡವಿಟ್ಟು ಭಿಕ್ಷೆ ಬೇಡಬೇಕು.. ಕಾಯಕ ನಂಬಿದ್ದರೂ ಕೈಲಾಸ ಕಾಣಲಾಗದ ಸ್ಥಿತಿ.

ಉತ್ತರ ಕರ್ನಾಟಕದಲ್ಲಿ ಸತತ ಮಳೆ ಹಾಗೂ ನಂತರ ಪ್ರವಾಹದ ಅವಾಂತರ, ಹೀಗೆ ದುಡಿಮೆ ನಂಬಿ ಬದುಕಿರುವ ಅದೆಷ್ಟೋ ಕಡು ಬಡತನದ ಕುಟುಂಬಗಳನ್ನು ಅಕ್ಷರಶಃ ನಿರ್ಗತಿಕರನ್ನಾಗಿಸಿದೆ. ತಾತ್ಕಾಲಿಕ ಪುನರ್ವಸತಿ ಕೇಂದ್ರಗಳೇ ಅವರಿಗೆ ಶಾಶ್ವತ ಮನೆಯಾಗುವ ಲಕ್ಷಣಗಳಿವೆ!

ಪುನರ್ವಸತಿ ಕೇಂದ್ರದಲ್ಲಿರುವ ಯಾರನ್ನೇ ಮಾತನಾಡಿಸಿ ದರೂ ಗಂಟಲು ಕಟ್ಟಿ, ದುಃಖ ಉಮ್ಮಳಿಸಿ ಬರುವಂತಹ ಕಥೆಗಳನ್ನು ಹೇಳುತ್ತಾರೆ. ಕಪ್ಪೆ ಚಿಪ್ಪಿನಗಲದ ಕಣ್ಣುಗಳು ತುಂಬಿ ನಿಲ್ಲುತ್ತವೆ. ಜೀವದಾಯಿ ಮಳೆ ಯಾರದ್ದೋ ತಪ್ಪುಗಳಿಗೆ ಇನ್ನಾರಿಗೋ ಘೋರ ಶಿಕ್ಷೆಗೆ ಅಣಿಗೊಳಿಸಿ, ಸಾಣೆ ಹಿಡಿದಂತಿದೆ.

ADVERTISEMENT

ಇಂಥದ್ದೇ ಕರುಣಾಜನಕ ಕಥೆ ಧಾರವಾಡದ ಶ್ರೀ ಕ್ಷೇತ್ರ ಸೋಮೇಶ್ವರದ ಹಿಂಬದಿಯ ಸುಡುಗಾಡು ಸಿದ್ಧರ ಕಾಲೋನಿ ನಿವಾಸಿ 69ರ ಹರೆಯದ ಚಂದು ಹರಿಣಶಿಕಾರ ಅವರದ್ದು. 18 ಕೆ.ಜಿ ತೂಕದ ಸಾಣೆ ಹಿಡಿಯುವ ಯಂತ್ರವನ್ನು ಹೆಗಲ ಮೇಲೆ ಹೊತ್ತು ಊರೂರು ತಿರುಗುತ್ತಾ, ಚೂರಿ, ಈಳಿಗೆ ಕತ್ತರಿ, ಅಡಕೊತ್ತು ಸಾಣೆ ಹಿಡಿದುಕೊಡುವ ಚಂದು ಅವರಿಗೆ ಈ ಮಹಾಮಳೆ ಸರಿಯಾದ ಪೆಟ್ಟು ಕೊಟ್ಟುಬಿಟ್ಟಿದೆ. ಆದರೂ, ದುಡಿಮೆಯ ಬಗ್ಗೆ ಅವರಿಗಿರುವ ಸ್ವಾಭಿಮಾನ, ಬದುಕಿನ ಬಗ್ಗೆ ಇರುವ ವಿಶ್ವಾಸ, ದೇವರ ಮೇಲಿನ ನಂಬಿಕೆಯಿಂದ ಪ್ರಕೃತಿ ಮಾಡಿದ ಗಾಯವನ್ನು ವಾಸಿ ಮಾಡಿಕೊಳ್ಳುತ್ತಿದ್ದಾರೆ.

ಚಂದು ಸೈಕಲ್ ಮೇಲೆ ಸಾಣೆಯಂತ್ರ ಕಟ್ಟಿಕೊಂಡು ಇಡೀ ರಾಜ್ಯ ಸುತ್ತುತ್ತಾರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅವರಿಗೆ ಸಂಪಾದನೆ ಕೈತುಂಬ ಇದೆಯಂತೆ. ‘ಉತ್ತರ ಕರ್ನಾಟಕದಲ್ಲಿ ಚೌಕಾಸಿ ಭಾಳ; ದುಡ್ಡು ಗೋಳು’ ಅವರ ಅಭಿಪ್ರಾಯ. ದೇವರ ಬಗ್ಗೆ ಅಪಾರ ವಿಶ್ವಾಸವಿಟ್ಟು, ತನ್ನ ಬಡತನ ನೀಗುವುದು ಎಂಬ ಭರವಸೆಯಿಂದ 60 ವರ್ಷವಾದರೂ ಗಾಣದೆತ್ತಿನಂತೆ ದುಡಿಯುತ್ತಿದ್ದಾರೆ.

ಇತ್ತೀಚೆಗೆ ತಮ್ಮ ಹೆಂಡತಿ ಕಾಯಿಲೆ ಚಿಕಿತ್ಸೆಗಾಗಿ ಚಂದು 20 ಸಾವಿರ ರೂಪಾಯಿ ಸಾಲ ಮಾಡಿದ್ದಾರೆ. ಬಡ್ಡಿ ಬೆಳೆಯುತ್ತಿದೆ. ತೀರಿಸಬೇಕಾದ ತುರ್ತಿದೆ. ಪತ್ನಿ ಕೆಲ ತಿಂಗಳ ಕೆಳಗೆ ಚಿಕಿತ್ಸೆ ಫಲಿಸದೇ ತೀರಿಯೂ ಬಿಟ್ಟರು. ಇದ್ದೊಬ್ಬ ಮಗಳನ್ನು ಹುಬ್ಬಳ್ಳಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಈಗ ಈ ಮಹಾಮಳೆಗೆ ಪುಟ್ಟ ಗುಡಿಸಲಿನಂತಹ ಮನೆಯೂ ಬಿದ್ದು ಹೋಗಿದೆ. ಇದ್ದೊಂದು ಸೈಕಲ್ ಬೆಂಗಳೂರಿನ ಬೀದಿಯಲ್ಲಿ ಯಾರೋ ಕದ್ದೊಯ್ದಿದ್ದಾರೆ. ಸದ್ಯ ಇದ್ದಬದ್ದ ಸರಂಜಾಮುಗಳೊಂದಿಗೆ ಸುಡುಗಾಡು ಸಿದ್ಧರ ಕಾಲೊನಿ ಸರ್ಕಾರಿ ಶಾಲೆಯಲ್ಲಿರುವ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ದಿನ ಖರ್ಚಿಗೆ ಹೀಗೆ ಯಂತ್ರವನ್ನು ಹೆಗಲ ಮೇಲೆ ಹೊತ್ತು ಬೀದಿ ಬೀದಿ ಅಲೆಯುತ್ತಿದ್ದಾರೆ.

ಕಳೆದ 15 ದಿನಗಳ ಕೆಳಗೆ, ಅಂಕೋಲಕ್ಕೆ ಸಾಣೆ ಯಂತ್ರ ಸಮೇತ ಬಸ್ ಏರಿದ ಚಂದು, ಮಾವಿನಗುಳಿ ಬಳಿ ಪ್ರವಾಹಕ್ಕೆ ಸಿಲುಕಿದರು. ಬಸ್ ಎರಡು ದಿನ ಹಾಗೆಯೇ ನಿಂತಿತು. ಹೊಟ್ಟೆ ಹಸಿವು ತಾಳಲಾರದೇ ಬಸ್‍ನಲ್ಲೇ ಸಾಣೆ ಯಂತ್ರ ಬಿಟ್ಟು, ಮೂರು ಕಿಲೋ ಮೀಟರ್ ನಡೆದು ಪುಟ್ಟ ಗ್ರಾಮದ ಚಹಾ ಅಂಗಡಿ ತಲುಪಿದರು. ಸಿಕ್ಕಿದ್ದು ಕೇವಲ ನಾಲ್ಕು ಬರ್ಫಿ! ಮತ್ತೆ ವಾಪಸ್ ನಡೆದು ಬರೋವಷ್ಟರಲ್ಲಿ ಅಧಿಕಾರಿಗಳ ಸೂಚನೆ ಮೇರೆಗೆ ಬಸ್ ವಾಪಸ್ ಹೊರಟಿತ್ತು. ಮಳೆಯಲ್ಲಿ ತೋಯ್ದು ತೊಪ್ಪೆಯಾಗಿದ್ದ ಚಂದು ನಡುಗುತ್ತಲೇ ಕತ್ತಲಲ್ಲಿ ಬಸ್ ಹುಡುಕ ಹೊರಟರು! ಅಷ್ಟೊತ್ತಿಗೆ ಬಸ್ ಯಲ್ಲಾಪುರ ಡಿಪೊಗೆ ತೆರಳಿತ್ತು!

ಜೋಪಾನವಾಗಿಟ್ಟುಕೊಂಡ ಟಿಕೆಟ್ ತೋರಿಸಿ, ಮತ್ತೊಂದು ಬಸ್ ನಿರ್ವಾಹಕರಿಗೆ ಕೈ ಮುಗಿದು, ಅಂಗಲಾಚಿ ಯಲ್ಲಾಪುರಕ್ಕೆ ಬಂದದ್ದಾಯಿತು. ಕಸುಬಿಗೆ ಆಸರೆಯಾದ ಇದ್ದೊಂದು ಯಂತ್ರವೂ ಇಲ್ಲ; ಕೈಯಲ್ಲಿ ಕಿಲುಬು ಕಾಸೂ ಇಲ್ಲ ಎನ್ನುವಂತಹ ಸ್ಥಿತಿ. ಮಳೆ ಸುರಿಯುತ್ತಲೇ ಇತ್ತು. ದುಃಖ ಒತ್ತರಿಸಿ ಬಂದು, ಚಂದು ಅಳುತ್ತಲೇ ಬಸ್ ನಿಲ್ದಾಣದಲ್ಲಿ ಅರ್ಧ ಗಂಟೆ ಭಿಕ್ಷೆ ಬೇಡಿ 60 ರೂಪಾಯಿ ಸಂಗ್ರಹಿಸಿಕೊಂಡರು. ‘ಮಳ್ಯಾಗ ನನ್ನ ಕಣ್ಣೀರು ಯಾರಿಗೂ ಕಾಣಲೇ ಇಲ್ಲ ಸ್ವಾಮೇರಾ..’ ಅಂದ್ರು ಚಂದು.

ಬಸ್ ಆಗಲೇ ಮರಳಿ ಬಳ್ಳಾರಿಯತ್ತ ಹೊರಟಾಗಿತ್ತು. ಹಳೆಯ ಟಿಕೆಟ್ ತೋರಿಸಿ, ನಿಯಂತ್ರಣಾಧಿಕಾರಿ ಮುಂದೆ ಅಂಗಲಾಚಿ, ಮುಂದಿನ ನಿಲ್ದಾಣದಲ್ಲಿ ಬಸ್‍ನೊಳಗಿರುವ ಪುಟ್ಟ ಗಂಟು, ಸಾಣೆ ಯಂತ್ರ ಇಳಿಸಿ ಹೋಗುವಂತೆ ಚಂದು ಮನವಿ ಮಾಡಿದರಂತೆ. ಕೊಪ್ಪಳ ಬಸ್ ನಿಲ್ದಾಣದಲ್ಲಿ ಅಂತೂ ಇವರ ಸರಂಜಾಮು ಇಳಿಸಿಕೊಳ್ಳಲಾಯಿತು. ಎರಡು ದಿನಗಳ ಬಳಿಕ ಭಿಕ್ಷಾಟನೆಯ ಹಣದಲ್ಲೇ ಕೊಪ್ಪಳ ತಲುಪಿ, ಗಾಯದ ಮೇಲೆ ಬರೆ ಎಳೆದಂತೆ, ಇಳಿಸಿಕೊಂಡವರಿಗೆ ಕಷ್ಟದಲ್ಲೂ ತೆರಿಗೆ ತೆತ್ತು, ಹಾಗೆಯೇ ಮಳೆಯಲ್ಲಿ ನೆನೆಯುತ್ತ ಊರ ಕಡೆ ತಿರುಗಿ ನಡೆಯುತ್ತ.. ಸಾಣೆ ಹಿಡಿಯುತ್ತ ತುಸು ಹಣ ಕೂಡಿಸಿಕೊಂಡರಂತೆ.

ಎಂಟು ದಿನಗಳ ಇಷ್ಟೆಲ್ಲ ಪ್ರಹಸನದ ಬಳಿಕ, ಬಸವಳಿದು ಜ್ವರ ಪೀಡಿತರಾಗಿ ಧಾರವಾಡಕ್ಕೆ ಬಂದಳಿದಿರೆ ಇದ್ದೊಂದು ಗುಡಿಸಲು( ಮನೆ) ಬಿದ್ದು 8-10 ದಿನವಾಗಿತ್ತು. ಗೊತ್ತೂ ಇಲ್ಲ! ಯಾರೋ ಪುಣ್ಯಾತ್ಮರು ಪುನರ್ವಸತಿ ಕೇಂದ್ರಕ್ಕೆ ತಂದುಕೊಟ್ಟ ಹಾಸಿಗೆ ಮತ್ತು ಹೊದಿಕೆ ಹೊದ್ದು, ಜೊತೆ ಹಳೆ ಬಟ್ಟೆ ತೊಟ್ಟು ನಾಲ್ಕು ದಿನ ಚಂದು ಮಲಗಿದ್ದರು. ಈಗ ತುಸು ಗೆಲುವಾಗಿದೆ ಅಂತ ಮತ್ತೆ ಬೀದಿ ಬೀದಿಯನಲೆದು ತಮ್ಮ ಕೈ ಖರ್ಚಿಗೆ ಸಾಣೆ ಕಸುಬು ಮುಂದುವರೆಸಿದ್ದಾರೆ.

ಮಳೆಗೆ ಬಿದ್ದ ಬದುಕು ಮತ್ತು ಪುಟ್ಟ ಗುಡಿಸಲನ್ನು ಪುನಃ ಕಟ್ಟಿಕೊಳ್ಳಲು 10 ಸಾವಿರದಷ್ಟು ಖರ್ಚಿದೆ. ಸಾಣೆ ಯಂತ್ರ ಹೊತ್ತು ತಿರುಗಲು ಈಗ ವಯಸ್ಸು ಅಡ್ಡಿಯಾಗಿದೆ. ಸೈಕಲ್ ಒಂದರ ಅವಶ್ಯಕತೆ ಇದೆ. ವೃದ್ಧಾಪ್ಯ ಪಿಂಚಣಿ ಯಾರಾದರೂ ಕೊಡಿಸಬೇಕಿದೆ. ಸಾಲ ತೀರಿದರೆ, ಆಶ್ರಯ ಮನೆಗೆ ಅರ್ಜಿ ಹಾಕಿಕೊಳ್ಳುವ ಮನಸ್ಸಿದೆ. ಚಂದು ಅವರ ಮಾತುಗಳಲ್ಲಿ, ಬಡತನ ಬಾಗಿಸಿದೆ; ಮಳೆ ತಮ್ಮ ಬೆನ್ನೆಲುಬೇ ಮುರಿದಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.