ಹುಬ್ಬಳ್ಳಿ: ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಗೆದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಡೆಸಿದ ಸಂಭ್ರಮೋತ್ಸವದಲ್ಲಿ ಅಮಾಯಕರು ಬಲಿಯಾಗಿದ್ದು, ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಶುಕ್ರವಾರ ನಗರದಲ್ಲಿ ಮಹಾನಗರ ಜಿಲ್ಲಾ ಬಿಜೆಪಿ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಅವರು, ಕಾಲ್ತುಳಿತ ಪ್ರಕರಣ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಜಿ. ಪರಮೇಶ್ವರ ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರು. ಅವರ ಭಾವಚಿತ್ರಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
‘ಆರ್‌ಸಿಬಿ ಗೆಲುವು ಸಾಧಿಸಿದ್ದು ಕನ್ನಡಿಗರ ಸಂಭ್ರಮ ಎಲ್ಲೇ ಮೀರಿಸಿತ್ತು. ಆದರೆ, ಅದರ ಸಂಭ್ರಮಚಾರಣೆ ನಾಡಿಗೆ ಸೂತಕದ ಛಾಯೆ ಆವರಿಸುವಂತೆ ಮಾಡಿತು. ನೆಚ್ಚಿನ ಆಟಗಾರರನ್ನು ನೋಡಲು ಬಂದವರು, ಕಾಲ್ತುಳಿತಕ್ಕೊಳಗಾಗಿ ಮೃತಪಟ್ಟರು. ಕಾರ್ಯಕ್ರಮ ಆಯೋಜಿಸುವುದು ಬೇಡ ಎಂದು ಪೊಲೀಸರು ಹೇಳಿದ್ದರೂ, ಸರ್ಕಾರ ಏಕಾಏಕಿಯಲ್ಲಿ ನಡೆಸಿತು. ವ್ಯವಸ್ಥೆ ಮಾಡಿಕೊಳ್ಳದೆ ಕಾರ್ಯಕ್ರಮ ನಡೆಸಿದ ಪರಿಣಾಮ ಕಾಲ್ತುಳಿತವಾಗಿದ್ದು, ಮುಖ್ಯಮಂತ್ರಿ ಹಾಗೂ ಸರ್ಕಾರವೇ ಇದಕ್ಕೆ ಕಾರಣವಾಗಿದೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆರೋಪಿಸಿದರು.
‘ಸರ್ಕಾರ ನೀಡಿದ್ದ ಐದು ಗ್ಯಾರಂಟಿಗಳ ಜೊತೆ, ಅಮಾಯಕರು ಬಲಿಯಾಗಿರುವ ಶಾಪದ ಗ್ಯಾರಂಟಿ, ಆರನೇ ಗ್ಯಾರಂಟಿಯಾಗಿ ತಟ್ಟಲಿದೆ. ಮಂಗಳೂರಿನಲ್ಲಿ ಹತ್ಯೆಯಾದ ವ್ಯಕ್ತಿಗೆ ಸರ್ಕಾರ ₹25 ಲಕ್ಷ ಪರಿಹಾರ ನೀಡಿದಂತೆ, ಇವರಿಗೂ ಅಷ್ಟೇ ಪರಿಹಾರ ನೀಡಬೇಕು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎನ್ನುವಂತೆ, ಪೊಲೀಸರನ್ನು ಅಮಾನತು ಮಾಡುವುದು ಸರಿಯಲ್ಲ. ಈ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉತ್ತರಿಸಬೇಕು’ ಎಂದು ಆಗ್ರಹಿಸಿದರು.
ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ಮುಖಂಡರಾದ ದತ್ತಮೂರ್ತಿ ಕುಲಕರ್ಣಿ, ಲಕ್ಷ್ಮಣ ಗಂಡಗಾಳೇಕರ, ರಾಜು ಕಾಳೆ, ರವಿ ನಾಯ್ಕ, ಪ್ರಕಾಶ ಕ್ಯಾರಕಟ್ಟಿ, ರಾಮನಗೌಡ್ರ ಶೆಟ್ಟನಗೌಡ್ರ, ಪ್ರವೀಣ ಪವಾರ, ತೋಟಪ್ಪ ನಿಡಗುಂದಿ, ಅಶೋಕ ವಾಲ್ಮೀಕಿ, ಪ್ರವೀಣ ಹುರಳಿ, ಸುನೀಲ ದಳವಿ, ಕಿಶನ್ ಬಿಲಾನ, ಶಿವಾನಂದ ಗಚ್ಚೇನವರ, ಅಕ್ಕಮ್ಮ ಹೆಗಡೆ, ಚೇತನ ಕಲಾಲ, ಇಂದಿರಾ ಚೌಹಾಣ, ಸುಮಾ ಶಿವನಗೌಡ, ಡಿ. ರಘು ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.