ADVERTISEMENT

ಎಲ್ಲ ಧರ್ಮಗಳ ಸಾರ ಒಂದೇ: ಮೃತ್ಯುಂಜಯ ಶ್ರೀ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 3:57 IST
Last Updated 1 ಡಿಸೆಂಬರ್ 2025, 3:57 IST
ನವಲಗುಂದ ಸಮೀಪದ ದುಂದೂರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಸೀದಿಯನ್ನು ಅಭಿನವ ಮೃತ್ಯುಂಜಯ ಸ್ವಾಮೀಜಿ ಉದ್ಘಾಟಿಸಿದರು. ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಭಾಗವಹಿಸಿದ್ದರು
ನವಲಗುಂದ ಸಮೀಪದ ದುಂದೂರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಸೀದಿಯನ್ನು ಅಭಿನವ ಮೃತ್ಯುಂಜಯ ಸ್ವಾಮೀಜಿ ಉದ್ಘಾಟಿಸಿದರು. ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಭಾಗವಹಿಸಿದ್ದರು   

ನವಲಗುಂದ: ದೇವ ಒಬ್ಬ ನಾಮ ಹಲವು. ಆತನನ್ನು ಖುದಾ, ಭಗವಾನ, ಗಾಡ್‌ ಎಂಬ ವಿಭಿನ್ನ ಹೆಸರುಗಳಿಂದ ಕರೆಯುತ್ತೇವೆ. ದೇವರನ್ನು ಆರಾಧಿಸಲು ಬೇರೆ ಬೇರೆ ಮಾರ್ಗಗಳಿದ್ದರೂ  ಧರ್ಮದ ಸಾರ ಒಂದೇ ಆಗಿದೆ’ ಎಂದು ಮಣಕವಾಡ ಗ್ರಾಮದ ಅಭಿನವ ಮೃತ್ಯುಂಜಯ ಸ್ವಾಮೀಜಿ ನುಡಿದರು.

ಅವರು ಶುಕ್ರವಾರ ದುಂದೂರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಸೀದಿ  ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. 

ಸೂರ್ಯನ ಬೆಳಕಿಗೆ, ಉಸಿರಾಡುವ ಗಾಳಿಗೆ, ಪ್ರಾಣಿ ಪಕ್ಷಿಗಳಿಗಿಲ್ಲದ ಧರ್ಮ ಮನುಷ್ಯನಿಗ್ಯಾಕೆ? ಸಮಾಜದಲ್ಲಿ ಸೌಹಾರ್ದಯುತವಾಗಿ ಬಾಳುವುದೇ ಧರ್ಮ. ಹಣ್ಣು ತಿಂದು ಸಿಪ್ಪೆ ಎಸೆಯುವುದು ಧರ್ಮವಲ್ಲ, ಬದಲಾಗಿ ಎಸೆದಿರುವ ಸಿಪ್ಪೆಯನ್ನು ತೆಗೆದು ಸ್ವಚ್ಛಗೊಳಿಸುವುದು ಧರ್ಮ. ಇನ್ನೊಬ್ಬರ ಮನಸ್ಸಿಗೆ ನೋವು ಮಾಡದಿರುವುದೇ ನಿಜವಾದ ಧರ್ಮ ಎಂದು ಹೇಳಿದರು. 

ADVERTISEMENT

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ನವಲಗುಂದ ವಿಧಾನಸಭಾ ಕ್ಷೇತ್ರವು ಸರ್ವ ಧರ್ಮದ ಶಾಂತಿಯ ತೋಟದಂತಿದೆ.  ನಾವೆಲ್ಲರೂ ಒಂದೇ ಎಂಬ ಮನೋಭಾವ ಬೆಳೆಸಿಕೊಂಡರೆ ಸಮಾಜದ ಹಾಗೂ ದೇಶದ ಅಭಿವೃದ್ಧಿ ಸಾಧ್ಯ. ಹಲವು ಕಡೆ ತಿಳಿವಳಿಕೆಯ ಕೊರತೆಯಿಂದ ಧರ್ಮ- ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಕ್ಷುಲ್ಲಕ ಕಾರಣಕ್ಕೆ ಹಿಂದೂ ಮುಸಲ್ಮಾನರ ಸೌಹಾರ್ದತೆಗೆ ಧಕ್ಕೆ ಆಗಬಾರದು ಎಂದರು.

ಈಶ್ವರಗೌಡ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಶ್ರೀ ಮಾರುತೇಶ್ವರ ದೇವರಿಗೆ ಅಭಿಷೇಕ ಮತ್ತು ಎಲೆಪೂಜೆ ಕಾರ್ಯಕ್ರಮ ಜರುಗಿತು. ಪಕ್ರುಸಾಬ್ ನಾಲಬಂದ, ರೆಹಮಾನಸಾಬ ಕಳ್ಳಿಮನಿ, ಹಾಜಿ ಅಬ್ದುಲಖಾದರ ಸಲ್ಲೂಬಾಯಿ, ರಹಮಾನಸಾಬ ಕವಳಿಕಾಯಿ, ಮೇಲಗಿರಿಗೌಡ್ರ ಪಾಟೀಲ, ಶಿವಾನಂದ ಕರಿಗಾರ, ಶ್ರೀನಿವಾಸ ಬೂದಿಹಾಳ, ಶೇಖರಯ್ಯ ಹಿರೇಮಠ, ರಾಜು ಪಾಟೀಲ, ಶಿವಯೋಗಿ ಮಂಟೂರಶೆಟ್ಟರ, ಶಿವರಾಜ ಪಾಟೀಲ  ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.