ADVERTISEMENT

ಮೋದಿ ನಾಯಕತ್ವದಲ್ಲಿ ಕ್ರಾಂತಿಕಾರಕ ಬದಲಾವಣೆ: ತೇಜಸ್ವಿನಿ ಗೌಡ

ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 9:33 IST
Last Updated 29 ಜೂನ್ 2022, 9:33 IST
ತೇಜಸ್ವಿನಿ ಗೌಡ
ತೇಜಸ್ವಿನಿ ಗೌಡ   

ಹುಬ್ಬಳ್ಳಿ: ‘ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಮನ್ನಣೆ ಸಿಗುತ್ತಿದೆ. ಜಿ7 ಶೃಂಗಸಭೆಯಲ್ಲಿ ಭಾರತದ ವಿಚಾರಧಾರೆಗೆ ಸಿಕ್ಕ ಪ್ರತಿಕ್ರಿಯೆ ಇದಕ್ಕೆ ಸಾಕ್ಷಿಯಾಗಿದೆ’ ಎಂದುವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೇನಾ ನೇಮಕಾತಿಗೆ ಸಂಬಂಧಿಸಿದ ಅಗ್ನಿಪಥ ಯೋಜನೆಯನ್ನು ಜಾರಿಗೆ ತರವುದರೊಂದಿಗೆ, ಸೇನೆಯಲ್ಲಿ ದೊಡ್ಡ ಪರಿವರ್ತನೆಗೆ ಸರ್ಕಾರ ಮುನ್ನುಡಿ ಬರೆದಿದೆ. ಸೇನೆಗೆ ಯುವ ಚೈತನ್ಯ ಹಾಗೂ ಶಕ್ತಿ ನೀಡುವ ಈ ಯೋಜನೆ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದೆ’ ಎಂದರು.

‘ಯುವಜನರು ಸೇನಾ ನೇಮಕಾತಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ, ವಿರೋಧಿಗಳಿಗೆ ಮುಖಭಂಗವನ್ನುಂಟು ಮಾಡಿದ್ದಾರೆ. ಅಗ್ನಿಪಥ ಕುರಿತು ಕಾಂಗ್ರೆಸ್ ಇನ್ನಾದರೂ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ಬಿಟ್ಟು, ತಮ್ಮ ಪಕ್ಷವನ್ನು ಬೂತ್‌ಮಟ್ಟದಲ್ಲಿ ಸಂಘಟಿಸಿಕೊಳ್ಳಲಿ‌‌. ಇಲ್ಲದಿದ್ದರೆ, ಅದೃಶ್ಯವಾಗಲಿದೆ’ ಎಂದು ಟೀಕಿಸಿದರು.

ADVERTISEMENT

‘ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇರುವುದು ನಿಜ. ಅದಕ್ಕಾಗಿ, ಅಗ್ನಿಪಥ ಯೋಜನೆಯನ್ನು ಜಾರಿಗೆ ತಂದಿಲ್ಲ. ಬದಲಿಗೆ, ದೇಶದ ರಕ್ಷಣಾ ವ್ಯವಸ್ಥೆಗೆ ಹೊಸ ರೂಪ ಕೊಟ್ಟು, ಆಧುನಿಕರಿಸಲು ಯೋಜನೆಯನ್ನು ಪರಿಚಯಿಸಲಾಗಿದೆ. ಯುವಜನರು ಬದುಕಿಗಾಗಿ ಟೀ, ವಡಾ ಪಾವ್ ಮಾರಾಟ ಮಾಡುವುದರಲ್ಲಿ ತಪ್ಪೇನಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ವಿಚಾರಧಾರೆಗಾಗಿ ಕೊಲ್ಲುವುದು ಖಂಡನೀಯ’

‘ಎಲ್ಲರಿಗೂ ಅವರದ್ದೇ ಆದ ವಿಚಾರಧಾರೆ ಇರುತ್ತದೆ. ಅದನ್ನು ಪರಸ್ಪರ ಗೌರವಿಸಬೇಕೇ ಹೊರತು, ವಿರುದ್ಧವಾದ ವಿಚಾರಧಾರೆ ಕಾರಣಕ್ಕಾಗಿ ಕೊಲ್ಲುವುದು ಖಂಡನೀಯ. ಉದಯಪುರದಲ್ಲಿ ಹಾಡಹಗಲೇ ಯುವಕನ ಶಿರಚ್ಛೇದ ಮಾಡಿ, ಪ್ರಧಾನಿಗೆ ಬೆದರಿಕೆ ಹಾಕಿರುವುದು ಅಕ್ಷಮ್ಯ. ಅಂತಹವರನ್ನು ಈ ನೆಲದ ಕಾನೂನು ಕಠಿಣ ಶಿಕ್ಷೆಗೆ ಗುರಿಪಡಿಸಲಿದೆ’ ಎಂದು ತೇಜಸ್ವಿನಿ ಗೌಡ ಹೇಳಿದರು.

‘ವಿಚಾರಧಾರೆ ಹಿನ್ನೆಲೆಯಲ್ಲೇ ಹುಬ್ಬಳ್ಳಿಯಲ್ಲಿ ಸಹ ಗಲಭೆ ನಡೆದಿತ್ತು. ಡಿ.ಜೆ. ಹಳ್ಳಿ ಮತ್ತು ಕೆ.ಜೆ. ಹಳ್ಳಿ ಘಟನೆಗಳ ಮುಂದುವರಿದ ಭಾಗವಾದ ಈ ಗಲಭೆ ಹಿಂದೆ ಟೂಲ್‌ಕಿಟ್ ಕೆಲಸ ಮಾಡಿತ್ತು. ಇಂತಹ ವಿದ್ರೋಹಿ ಶಕ್ತಿಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಭಾರತಕ್ಕಿದೆ’ ಎಂದರು.

‘ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಕಂಡುಬಂದಿರುವ ಲೋಪಗಳನ್ನು ಸರಿಪಡಿಸಲು ಸರ್ಕಾರ ಕ್ರಮ ಕೈಗೊಂಡಿದ್ದು, ಸದ್ಯ ಆ ವಿಷಯಕ್ಕೆ ತೆರೆಬಿದ್ದಿದೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಕೆಂಬ ಕೂಗಿಗೆ ಯಾವುದೇ ಕಾರಣಕ್ಕೂ ನಮ್ಮ ಬೆಂಬಲವಿಲ್ಲ. ನಾವು ಒಗ್ಗೂಡಿಸುವವರೇ ಹೊರತು ರಾಜ್ಯ ಒಡೆಯುವವರಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಕಪಟಕರ, ಮಾಧ್ಯಮ ವಿಭಾಗದ ಪ್ರಶಾಂತ್, ರವಿ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.