ADVERTISEMENT

ಧಾರವಾಡ | ಗುಂಡಿಮಯ ರಸ್ತೆ: ಸಂಚಾರ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 5:43 IST
Last Updated 26 ಜೂನ್ 2025, 5:43 IST
ಧಾರವಾಡ ತಾಲ್ಲೂಕಿನ ಕೋಟೂರ ಮತ್ತು ತಡಕೋಡ ಸಂಪರ್ಕ ರಸ್ತೆಯ ದುಃಸ್ಥಿತಿ
ಧಾರವಾಡ ತಾಲ್ಲೂಕಿನ ಕೋಟೂರ ಮತ್ತು ತಡಕೋಡ ಸಂಪರ್ಕ ರಸ್ತೆಯ ದುಃಸ್ಥಿತಿ   

ಧಾರವಾಡ: ತಾಲ್ಲೂಕಿನ ಕೋಟೂರ, ದುಬ್ಬನಮರಡಿ, ಅಗಸನಹಳ್ಳಿ ಹಾಗೂ ತಡಕೋಡ ಸಂಪರ್ಕ ರಸ್ತೆ ಹದೆಗೆಟ್ಟಿದೆ. ಗುಂಡಿಮಯ ರಸ್ತೆಯಿಂದಾಗಿ ಸಾರ್ವಜನಿಕರು ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ. 

ರಸ್ತೆ ಹಾಳಾಗಿ ಹಲವು ತಿಂಗಳಾಗಿದೆ. ಕೆಲವೆಡೆ ಚಿಕ್ಕ ಮತ್ತು ಕೆಲವೆಡೆ ದೊಡ್ಡ ಗುಂಡಿಗಳಾಗಿ, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಜಲ್ಲಿಕಲ್ಲು, ಮಣ್ಣಿನ ಸುಮಾರು 5 ಕಿ.ಮೀ ಕಚ್ಚಾ ರಸ್ತೆಯನ್ನು ಕ್ರಮಿಸಲು 20 ರಿಂದ 30 ನಿಮಿಷ ಹಿಡಿಯತ್ತಿದೆ. 

ಕಾರು, ಟ್ರ್ಯಾಕ್ಟರ್, ಟಿಪ್ಪರ್, ಬೈಕ್, ಚಕ್ಕಡಿ ಸೇರಿದಂತೆ ಇತರ ವಾಹಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಈಚೆಗೆ ಸುರಿದ ಮಳೆಗೆ ರಸ್ತೆಯ ಡಾಂಬರು ಕಿತ್ತುಹೋಗಿದೆ. ಮಳೆಯಾದಾಗ ರಸ್ತೆಯ ಗುಂಡಿಗಳಲ್ಲಿ ನೀರು ನಿಲ್ಲುತ್ತದೆ. ಚಾಲಕರು, ವಾಹನ ಸವಾರರು ಅಪಾಯ ಭೀತಿಯಲ್ಲಿ ಸಂಚರಿಸುವಂತಾಗಿದೆ. 

ADVERTISEMENT

ಬೆಳವಡಿ, ಬುಡರಕಟ್ಟಿ, ಖಾನಾಪುರ, ತಡಕೋಡ, ದುಬ್ಬನಮರಡಿ, ಅಗಸನಹಳ್ಳಿ, ಗರಗ ಸಹಿತ ಈ ಭಾಗದ ವಿವಿಧ ಹಳ್ಳಿಗಳ ಜನರು ಬೇಲೂರು ಕೈಗಾರಿಕಾ ಪ್ರದೇಶದ ಕಂಪನಿಗಳಿಗೆ ಇದೇ ರಸ್ತೆ ಮಾರ್ಗವಾಗಿ ಸಂಚರಿಸುತ್ತಾರೆ. ಕೆಲವರು ರಾತ್ರಿ ವೇಳೆಯಲ್ಲಿ ಓಡಾಡುವಾಗ ರಸ್ತೆಯಲ್ಲಿ ಬಿದ್ದು ಗಾಯಗೊಂಡ ನಿದರ್ಶನಗಳು ಇವೆ. ಜಲ್ಲಿಕಲ್ಲಿನ ಈ ರಸ್ತೆಯಲ್ಲಿ ಎತ್ತಿನ ಚಕ್ಕಡಿಯಲ್ಲಿ ಸಾಗುವಾಗ ಎತ್ತುಗಳು ಪ್ರಯಾಸಪಡುತ್ತವೆ. 

‘ಈಚೆಗೆ ನಿರಂತರವಾಗಿ ಮಳೆ ಸುರಿದಿದೆ. ಗುಂಡಿಗಳಲ್ಲಿ ನೀರು ನಿಂತಿದೆ. ರಸ್ತೆ ಡಾಂಬರೀಕರಣಕ್ಕೆ ಒತ್ತಾಯಿಸಿದರೂ ಕ್ರಮ ವಹಿಸಿಲ್ಲ. ಪ್ರತಿ ಬಾರಿ ಗುಂಡಿಗಳಿಗೆ ಕಲ್ಲುಮಣ್ಣು ಹಾಕಿ ತೇಪೆ ಹೆಚ್ಚುವ ಕೆಲಸ ಮಾಡುತ್ತಾರೆ. ಮಳೆಗಾಲದಲ್ಲಿ ಮಳೆಗಾಲದಲ್ಲಿ ತೇಪೆ ಹಾಳಾಗುತ್ತದೆ' ಎಂದು ರೈತ ಬಸಪ್ಪ  ದೂರಿದರು. 

ಪ್ರತಿ ವರ್ಷವೂ ಮಳೆಗಾಲದ ಸಂದರ್ಭದಲ್ಲಿ ಹೆಚ್ಚಾಗುವ ಗುಂಡಿಗಳನ್ನು ತಾತ್ಕಾಲಿಕವಾಗಿ ಕಲ್ಲುಮಣ್ಣು ಹಾಕಿ ಮುಚ್ಚದೆ  ರಸ್ತೆ ಡಾಂಬರೀಕರಣಕ್ಕೆ ಕ್ರಮ ವಹಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಜನರು ಆಗ್ರಹಿಸುತ್ತಾರೆ. 

ಧಾರವಾಡ ತಾಲ್ಲೂಕಿನ ಕೋಟೂರ ಮತ್ತು ತಡಕೋಡ ಸಂಪರ್ಕ ರಸ್ತೆ ದುಃಸ್ಥಿತಿ
ರಸ್ತೆ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಅಭಿವೃದ್ಧಿಗೆ ಕ್ರಮವಹಿಸಬೇಕು
ಮಹಮ್ಮದ್‌ ಸಲೀಂ ನನ್ನೆಸಾಬನವರ ರೈತ ಕೋಟೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.