ಧಾರವಾಡ: ‘ಸ್ವಸ್ಥ ಸಮಾಜದ ಕುಟುಂಬ ವ್ಯವಸ್ಥೆ ಬಲಪಡಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಜಾತಿ ಭೇದ ತೊರೆದು ಬಾಹ್ಯಶಕ್ತಿಗಳಿಂದ ದೇಶ ರಕ್ಷಿಸಿ ಆತ್ಮನಿರ್ಭರವಾಗಿಸಬೇಕು’ ಎಂದು ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ರವಿಕುಮಾರ ಹೊಸಮನಿ ಹೇಳಿದರು.
ನಗರದ ಕೆಸಿಡಿ ಮೈದಾನದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಶತ ವರ್ಷಾಚರಣೆ, ವಿಜಯ ದಶಮಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸಂಘವು ಪಂಚ ಪರಿವರ್ತನಿ ಸಂಕಲ್ಪಗಳನ್ನು ಮಾಡಿದೆ. ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ, ಪರಿಸರ ಜಾಗೃತಿ, ಸ್ವದೇಶಿ ವಸ್ತು ಬಳಕೆ ಮತ್ತು ನಾಗರಿಕ ಸಂಹಿತೆಗಳು ಸಂಕಲ್ಪಗಳಾಗಿವೆ. ಭಾರತಾಂಬೆಯ ಸ್ಥಾನವನ್ನು ವಿಶ್ವಭೂಮಂಟಪದಲ್ಲಿ ಮಂಚೂಣಿಯಲ್ಲಿ ನಿಲ್ಲಿಸುವ ಸಂಕಲ್ಪದಿಂದ ಎಲ್ಲರಲ್ಲಿ ಏಕತೆ ಭಾವ ಮೂಡುತ್ತದೆ’ ಎಂದರು.
‘ಪ್ರಪಂಚಕ್ಕೆ ಯೋಗ, ಆಯುರ್ವೇದ, ಅಧ್ಯಾತ್ಮ, ಸಂಸ್ಕೃತ ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಶತಮಾನಗಳವರೆಗೆ ಪರಕೀಯರ ದಬ್ಬಾಳಿಕೆಗೆ ಒಳಪಟ್ಟಿದ್ದ ಭಾರತ ನಂತರ ಮೈಕೊಡವಿಕೊಂಡು ಅಸ್ವಿತ್ವ ಕಾಪಾಡಿಕೊಂಡ ಅಭೂತಪೂರ್ವ ಪರಂಪರೆ ನಮ್ಮದು. ಅದನ್ನು ಮುಂದುವರಿಸುವುದು ಎಲ್ಲರ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.
‘2028ರ ಹೊತ್ತಿಗೆ ಬಾಹ್ಯಾಕಾಶದಲ್ಲಿ ಭಾರತೀಯ ಬಾಹ್ಯಾಕಾಶ ಕೇಂದ್ರ ಸ್ಥಾಪಿಸುವ ಯೋಜನೆ ಸಿದ್ಧಗೊಳ್ಳುತ್ತಿದೆ. ಅದು ಸಾಕಾರಗೊಳ್ಳಲು ನಾಯಕರ ಇಚ್ಛಾಶಕ್ತಿ, ವಿಜ್ಞಾನಿಗಳ ಕಠಿಣ ಪರಿಶ್ರಮ ಮುಖ್ಯ’ ಎಂದರು.
ನಿವೃತ್ತ ಶಿಕ್ಷಕ ದುರ್ಗಣ್ಣ ಮಾತನಾಡಿ, ‘ಕೇಶವ ಬಲಿರಾಮ್ ಹೆಡಗೇವಾರ್ ಅವರು 1925ರಲ್ಲಿ ವಿಜಯದಶಮಿ ದಿನ ಆರ್‌ಎಸ್‌ಎಸ್ ಸ್ಥಾಪಿಸಿದರು. ಹೆಡಗೇವಾರ್ ಅವರು ವ್ಯಕ್ತಿ ಕೇಂದ್ರಿತ ಸಿದ್ಧಾಂತ ಪಾಲಿಸಲಿಲ್ಲ, ತತ್ವ ಕೇಂದ್ರಿತ ಸಿದ್ಧಾಂತ ಪಾಲಿಸಿದರು. ಹಿಂದೂಗಳ ಸಂಘಟನೆಗಾಗಿ ಶ್ರಮಿಸಿದರು’ ಎಂದು ತಿಳಿಸಿದರು.
‘ಏಕತೆಯಲ್ಲಿ ವಿವಿಧತೆ ಸಂಘದ ವೈಶಿಷ್ಟ್ಯ. ಸಂಘವು ಎಲ್ಲ ಪರಿಸ್ಥಿತಿಗಳನ್ನು ಎದುರಿಸಿದೆ. 100 ವರ್ಷಗಳಲ್ಲಿ ಹಿಂದೂ ಸಮಾಜದಲ್ಲಿ ಸ್ವಾಭಿಮಾನ ಮೂಡಿಸಿದೆ. ಸಂಘವು ಮುಸ್ಲಿಂ ಸಮುದಾಯದ ವಿರೋಧಿ ಅಲ್ಲ’ ಎಂದರು.
ರಾಮಕೃಷ್ಣ ವಿವೇಕ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ, ಬುದ್ಧಿಯೋಗಾನಂದ ಸರಸ್ವತಿ ಸ್ವಾಮೀಜಿ, ಆತ್ಮದೀಪಾನಂದ ಸ್ವಾಮೀಜಿ, ವಿಭಾಗ ಸಂಘಚಾಲಕ ಗೋವಿಂದಪ್ಪ ಗೌಡಪ್ಪಗೋಳ, ಜಿಲ್ಲಾ ಸಂಘಚಾಲಕ ವೇದವ್ಯಾಸ ದೇಶಪಾಂಡೆ ಇದ್ದರು.
ಪಂಥಸಂಚಲನ
ನಗರದ ಕೆ.ಇ. ಬೋರ್ಡ್ ವಿದ್ಯಾಲಯ ಆವರಣದಿಂದ ಕೆಸಿಡಿ ಮೈದಾನದವರೆಗೆ ಗಣ ವೇಷಧಾರಿ ಸ್ವಯಂ ಸೇವಕರು ಪಥ ಸಂಚಲನ ನಡೆಸಿದರು. ಮೂರು ಮಾರ್ಗಗಳಲ್ಲಿ ಸಾಗಿದರು. ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಪಾಲ್ಗೊಂಡಿದ್ದರು. ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.