ADVERTISEMENT

RTE: ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆಯಲು ನಿರಾಸಕ್ತಿ– ಕೇವಲ ಶೇ21 ಸೀಟು ಭರ್ತಿ

ಶ್ರೀಕಾಂತ ಕಲ್ಲಮ್ಮನವರ
Published 15 ಜುಲೈ 2025, 7:16 IST
Last Updated 15 ಜುಲೈ 2025, 7:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ಬಡಕುಟುಂಬಗಳ ಮಕ್ಕಳಿಗೆ ಅನುದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯಲು ಅವಕಾಶ ಕಲ್ಪಿಸುವ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ದಾಖಲಾಗುವ ಮಕ್ಕಳ ಸಂಖ್ಯೆ ಕುಸಿದಿದೆ.  ಶಾಲೆಗಳಲ್ಲಿ ಲಭ್ಯ ಇರುವ 11,454 ಸೀಟುಗಳ ಪೈಕಿ ಕೇವಲ 2,491 (ಶೇ 21.74) ಸೀಟುಗಳಿಗೆ ಮಾತ್ರ ವಿದ್ಯಾರ್ಥಿಗಳ ದಾಖಲಾತಿ ಆಗಿದೆ.

ಬಡಕುಟುಂಬಗಳ ಮಕ್ಕಳು, ಎಸ್‌ಸಿ–ಎಸ್‌ಟಿ ಹಾಗೂ ಒಬಿಸಿ ಕುಟುಂಬಗಳ ಮಕ್ಕಳಿಗೆ 14 ವರ್ಷದ ವರೆಗೆ  (ಎಲ್‌ಕೆಜಿ–1ನೇ ತರಗತಿಯಿಂದ 8ನೇ ತರಗತಿಯವರೆಗೆ) ಉಚಿತ ಶಿಕ್ಷಣ ನೀಡಬೇಕೆನ್ನುವ ಸದುದ್ದೇಶದಿಂದ 2010ರಲ್ಲಿ ಕೇಂದ್ರ ಸರ್ಕಾರವು ಆರ್‌.ಟಿ.ಇ ಜಾರಿಗೆ ತಂದಿತ್ತು.

ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು 2025–26ನೇ ಸಾಲಿಗಾಗಿ ಆರ್‌ಟಿಇ ಅಡಿ ಎಲ್‌ಕೆಜಿ ಅಥವಾ 1ನೇ ತರಗತಿಯಿಂದ 8ನೇ ತರಗತಿಯವರೆಗೆ ಪ್ರವೇಶ ಪಡೆಯುವ ಸಂಬಂಧ ಮೇ ತಿಂಗಳಲ್ಲಿ ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್‌ ಅರ್ಜಿ ಆಹ್ವಾನಿಸಿತ್ತು. ಆದ್ಯತೆಯ ಮೇರೆಗೆ 2 ಸುತ್ತಿನಲ್ಲಿ ಸೀಟುಗಳ ಹಂಚಿಕೆಯಾಗಿದೆ. 

ADVERTISEMENT

ಮೊದಲ ಸುತ್ತಿನಲ್ಲಿ 3,769 ಸೀಟುಗಳ ಹಂಚಿಕೆಯಾಗಿತ್ತು. 2,097 ವಿದ್ಯಾರ್ಥಿಗಳು ಪ್ರವೇಶ ಪಡೆದರು. ಎರಡನೇ ಸುತ್ತಿನಲ್ಲಿ 921 ಸೀಟುಗಳ ಹಂಚಿಕೆಯಾಯಿತು. 394 ವಿದ್ಯಾರ್ಥಿಗಳು ಪ್ರವೇಶ ಪಡೆದರು. ಒಟ್ಟು ಎರಡು ಸುತ್ತಿನಲ್ಲಿ 2,491 ವಿದ್ಯಾರ್ಥಿಗಳು ವಿವಿಧ ಶಾಲೆಗಳಲ್ಲಿ ಪ್ರವೇಶ ಪಡೆದರು.

ಪ್ರವೇಶ ವಿವರ: ರಾಜ್ಯದಲ್ಲಿ ಅತಿ ಹೆಚ್ಚು ಆರ್‌ಟಿಇ ಸೀಟುಗಳು ಬಾಗಲಕೋಟೆಯ ಶಾಲೆಗಳಲ್ಲಿ ಭರ್ತಿಯಾಗಿವೆ. ಒಟ್ಟು 776 ಸೀಟುಗಳ ಪೈಕಿ 368 ಸೀಟುಗಳು ಭರ್ತಿಯಾಗಿವೆ. ದಾವಣಗೆರೆಯಲ್ಲಿ 294 ಸೀಟು, ಧಾರವಾಡ–281,  ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲೆ–10, ಬೆಂಗಳೂರು ಗ್ರಾಮೀಣ ಜಿಲ್ಲೆ–43 ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆ–26 ಸೀಟುಗಳು ಭರ್ತಿಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.