ADVERTISEMENT

ರಷ್ಯಾ–ಉಕ್ರೇನ್ ಸಂಘರ್ಷ: ಪೋಷಕರ ಸಂಪರ್ಕಕ್ಕೆ ಸಿಗದ ಹುಬ್ಬಳ್ಳಿಯ ನಾಜಿಲ್ಲಾ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2022, 15:19 IST
Last Updated 26 ಫೆಬ್ರುವರಿ 2022, 15:19 IST
ನಾಜಿಲ್ಲಾ ಬಾಬಾಜಾನ್ ಗಾಜಿಪುರ್
ನಾಜಿಲ್ಲಾ ಬಾಬಾಜಾನ್ ಗಾಜಿಪುರ್   

ಹುಬ್ಬಳ್ಳಿ: ಉಕ್ರೇನ್‌ನ ಖಾರ್ಕಿವ್‌ನ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್‌ ಮೊದಲ ವರ್ಷ ಓದುತ್ತಿರುವ ಹುಬ್ಬಳ್ಳಿಯ ನಾಜಿಲ್ಲಾ ಬಾಬಾಜಾನ್ ಗಾಜಿಪುರ್ ಶನಿವಾರ ಬೆಳಿಗ್ಗೆಯಿಂದ ಪೋಷಕರ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದು ಕುಟುಂಬದವರ ಆತಂಕಕ್ಕೆ ಕಾರಣವಾಗಿದೆ.

ನಾಜಿಲ್ಲಾ ಇದೇ ತಿಂಗಳು 9ರಂದು ಉಕ್ರೇನ್‌ ತೆರಳಿದ್ದರು. ತರಗತಿಗಳು ಆರಂಭವಾಗಿ ನಾಲ್ಕು ದಿನಗಳು ಕಳೆಯುವಷ್ಟರಲ್ಲಿ ಅಲ್ಲಿ ಪರಿಸ್ಥಿತಿ ಹದಗೆಟ್ಟಿತ್ತು.

ಮಾಧ್ಯಮದವರ ಜೊತೆ ಮಾತನಾಡಿದ ನಾಜಿಲ್ಲಾ ತಾಯಿ ನೂರ್‌ಜಹಾನ್‌ ‘ಶುಕ್ರವಾರ ರಾತ್ರಿ ಮಾತನಾಡಿದ್ದೇ ಕೊನೆ. ಶನಿವಾರ ಬೆಳಿಗ್ಗೆಯಿಂದ ಪ್ರಯತ್ನಿಸುತ್ತಿದ್ದರೂ ಫೋನ್‌ ಕರೆಗೆ ಸಿಗುತ್ತಿಲ್ಲ. ನಾನು ಆರಾಮವಾಗಿದ್ದೇನೆ ಎಂದು ವಿಡಿಯೊ ಕಾಲ್‌ ಮಾಡಿ ಹೇಳಿದ್ದಳು. ಆದರೆ ಆಕೆಯ ಮುಖದಲ್ಲಿ ಭಯ ಕಾಣುತ್ತಿತ್ತು’ ಎಂದರು.

ADVERTISEMENT

‘ಖಾರ್ಕೀವ್‌ನಲ್ಲಿ ಆಹಾರ ಮತ್ತು ನೀರಿನ ಸಮಸ್ಯೆ ಉಂಟಾದಂತೆ ಕಾಣಿಸುತ್ತದೆ. ಹಾಸ್ಟೆಲ್‌ನಲ್ಲಿ ಊಟದ ಕೊಠಡಿ ಪ್ರತ್ಯೇಕ ಜಾಗದಲ್ಲಿದ್ದು, ವಿದ್ಯಾರ್ಥಿಗಳನ್ನು ಬೇಸ್‌ಮೆಂಟ್‌ನಲ್ಲಿ ಇರಿಸಲಾಗಿದೆ. ಅದೇ ಕ್ಯಾಂಪಸ್‌ನಲ್ಲಿ 700 ಜನ ಭಾರತೀಯರು ಇದ್ದಾರೆ. ಇದರಲ್ಲಿ ಕರ್ನಾಟಕದವರು 150ಕ್ಕೂ ಹೆಚ್ಚು ಜನ ಇದ್ದಾರೆ ಎಂದು ಮಗಳು ತಿಳಿಸಿದ್ದಳು’ ಎಂದರು.

ಸಾವು–ಬದುಕಿನ ನಡುವೆ ಮಗಳು ಹೋರಾಡುತ್ತಿದ್ದಾರೆ. ಭಾರತ ಸರ್ಕಾರದ ಮೇಲೆ ನನಗೆ ಸಂಪೂರ್ಣವಾಗಿ ನಂಬಿಕೆಯಿದ್ದು, ಶೀಘ್ರದಲ್ಲಿಯೇ ತಾಯ್ನಾಡಿಗೆ ವಾಪಸ್‌ ಕರೆ ತರುವ ವಿಶ್ವಾಸವಿದೆ ಎಂದರು.

ನಾಜಿಲ್ಲಾ ಮೂಲತಃ ಉತ್ತರ ಕನ್ನಡ ಜಿಲ್ಲೆ ಮುಂಡಗೋಡದವರು. ಅವರ ಪೋಷಕರು ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.