ADVERTISEMENT

ಬಾಬಾ ಭಜನೆಯಲಿ ಭಕ್ತರು ಭಾವಪರವಶ

​ಪ್ರಜಾವಾಣಿ ವಾರ್ತೆ
Published 14 ಜುಲೈ 2019, 16:44 IST
Last Updated 14 ಜುಲೈ 2019, 16:44 IST
ಶಿರಡಿಯ ಫಾರಸ ಜೈನ್ (ಮಧ್ಯೆ ಇರುವವರು) ಹಾಗೂ ಸಂಗಡಿಗರು ಪ್ರಸ್ತುತಪಡಿಸಿದ ಸಾಯಿ ಭಜನೆ ಶ್ರೋತ್ರಗಳನ್ನು ಭಾವಪರವಶಗೊಳಿಸಿತು
ಶಿರಡಿಯ ಫಾರಸ ಜೈನ್ (ಮಧ್ಯೆ ಇರುವವರು) ಹಾಗೂ ಸಂಗಡಿಗರು ಪ್ರಸ್ತುತಪಡಿಸಿದ ಸಾಯಿ ಭಜನೆ ಶ್ರೋತ್ರಗಳನ್ನು ಭಾವಪರವಶಗೊಳಿಸಿತು   

ಹುಬ್ಬಳ್ಳಿ: ವೇದಿಕೆ ಮೇಲಿಂದ ಕೇಳಿ ಬರುತ್ತಿದ್ದ ಕಂಚಿನ ಕಂಠದ ಇಂಪಾದ ಭಜನೆಗೆ ಅಲ್ಲಿದ್ದವರೆಲ್ಲರೂ ಭಾವಪರವಶರಾಗಿದ್ದರು.ನಾಲ್ಕು ದಿಕ್ಕಿನಿಂದ ಅಂತರ್ಧ್ವನಿಸುತ್ತಿದ್ದ ಗೀತೆಗಳು ಎಲ್ಲರನ್ನೂ ಸಾಯಿಬಾಬಾ ಸ್ಮರಣೆಯಲ್ಲಿ ತೇಲಿಸುತ್ತಿದ್ದವು. ಎಲ್ಲರ ಬಾಯಲ್ಲೂ ಸಾಯಿಬಾಬಾ ಹೆಸರೇ ಧ್ವನಿಸುತ್ತಿದ್ದ ಆ ಸಭಾಂಗಣ, ಕೆಲ ಹೊತ್ತು ಬಾಬಾ ಸನ್ನಿಧಿಯಾಗಿ ಮಾರ್ಪಟ್ಟಿತ್ತು.

ಗುರು ಪೂರ್ಣಿಮಾ ಉತ್ಸವದ ಅಂಗವಾಗಿ ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್‌ನಲ್ಲಿ ಸಾಯಿಬಾಬಾ ಭಕ್ತರು ಭಾನುವಾರ ಆಯೋಜಿಸಿದ್ದ ‘ಸಾಯಿ ಭಜನಾ ಸಂಧ್ಯಾ’ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯವಿದು.

ಭವ್ಯ ವೇದಿಕೆ ಮೇಲೆ ಪ್ರತಿಷ್ಠಾಪಿಸಿದ್ದ ದೀಪಾಲಂಕೃತ ಸಾಯಿಬಾಬಾರ ಭಾವಚಿತ್ರದ ಎದುರು, ಭಜನೆಕಾರರಾದ ಶಿರಡಿಯ ಫಾರಸ ಜೈನ್ ಮತ್ತು ಸಂಗಡಿಗರು ಹಿಂದಿಯಲ್ಲಿ ಬಾಬಾ ಭಜನೆಗಳನ್ನು ಹಾಡುತ್ತಿದ್ದರೆ, ಶೋತ್ರುಗಳೆಲ್ಲರೂ ಕೈ ಮೇಲಕ್ಕೆತ್ತಿ ಚಪ್ಪಾಳೆ ತಟ್ಟುತ್ತಾ ದನಿಗೂಡಿಸುತ್ತಿದ್ದರು.

ADVERTISEMENT

ಫಾರಸ್ ಅವರ ಬತ್ತಳಿಕೆಯಿಂದ ಬರುತ್ತಿದ್ದ ಸಾಯಿಬಾಬಾರ ಜೀವನ, ಪವಾಡ, ಲೀಲೆಗಳನ್ನು ಕೊಂಡಾಡುವ ಭಜನೆ ಪದಗಳು ಭಕ್ತಿಪರವಶರಾಗಿ ಕುಣಿಯುವಂತೆ ಮಾಡಿದವು.ಪ್ರತಿ ಭಜನೆ ಮುಗಿದಾಗಲೂ ‘ಜೈ ಶ್ರೀ ಸಾಯಿ ಮಹಾರಾಜ್‌ಕೀ ಜೈ ಜೈ’ ಎಂಬ ಜಯಘೋಷ ನಾಲ್ಕು ದಿಕ್ಕಿನಲ್ಲೂ ಪ್ರತಿಧ್ವನಿಸುತ್ತಿತ್ತು.

ಕಾರ್ಯಕ್ರಮದ ಸಂಯೋಜಕರಾದ ಪ್ರಕಾಶ ಸಾಂಬ್ರಾಣಿ, ಕೋರ್ಟ್ ವೃತ್ತದಲ್ಲಿರುವ ಸಾಯಿಬಾಬಾ ಮಂದಿರದ ಕಮಿಟಿಯ ಮುಖ್ಯಸ್ಥ ಡಾ. ಟಿ.ಎಸ್. ಮೋಹನಕುಮಾರ್, ವಿಶ್ವನಾಥ್ ತಿರುಮಲೆ, ಸಂಜೀವ ಎಲ್. ಭಾಟಿಯಾ, ರಾಜಕುಮಾರ ಮಹಾಜನ, ಜಿತೇಂದ್ರ ಮಜೀಥಿಯಾ, ವಿ.ಎಸ್‌.ವಿ. ಪ್ರಸಾದ್, ಮೋಹನಕುಮಾರ್ ಇದ್ದರು. ರಾಜು ನಿರೂಪಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.