ADVERTISEMENT

ಹುಬ್ಬಳ್ಳಿ– ಸಂತೋಷ ಮುರಗೋಡ ಕೊಲೆ: ಠಾಣೆ ಎದುರು ಶವ ಇಟ್ಟು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2022, 12:47 IST
Last Updated 13 ನವೆಂಬರ್ 2022, 12:47 IST
ಸಂತೋಷ ಮುರಗೋಡ
ಸಂತೋಷ ಮುರಗೋಡ   

ಹುಬ್ಬಳ್ಳಿ: ನಗರದ ಹಳೇ ಹುಬ್ಬಳ್ಳಿಯ ವೃತ್ತದ ಬಳಿ ಶನಿವಾರ ರಾತ್ರಿ ನಡೆದಿದ್ದ ಕಿರಾಣಿ ವ್ಯಾಪಾರಿ ಸಂತೋಷ ಮುರಗೋಡ ಕೊಲೆಗೆ ಸಂಬಂಧಿಸಿದಂತೆ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ, ಆತನ ಸಂಬಂಧಿಕರು ಹಾಗೂ ಸ್ಥಳೀಯರು ಭಾನುವಾರ ಕಸಬಾಪೇಟೆ ಪೊಲೀಸ್ ಠಾಣೆ ಎದುರು ಶವದೊಂದಿಗೆ ಪ್ರತಿಭಟನೆ ನಡೆಸಿದರು.

ಕಿಮ್ಸ್ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ಮುಗಿಯುತ್ತಿದ್ದಂತೆ, ಸಂಬಂಧಿಕರು ಮಧ್ಯಾಹ್ನದ ಹೊತ್ತಿಗೆ ಶವದೊಂದಿಗೆ ಠಾಣೆ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಆರೋಪಿ ಶಿವಾನಂದ ನಾಯ್ಕ ಹಿಂದೆಯೂ ಸಂತೋಷ ಅವರೊಂದಿಗೆ ಜಗಳವಾಡಿದ್ದ. ಈ ಬಗ್ಗೆ ಪೊಲೀಸರಿಗೆ ಮೊದಲೇ ದೂರು ನೀಡಿದ್ದರೂ ಆತನ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಇದರಿಂದಾಗಿ, ತಮ್ಮ ಸಂತೋಷ ಅವರನ್ನು ಕಳೆದುಕೊಳ್ಳಬೇಕಾಯಿತು. ಈ ಸಾವಿರ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT
ಆರೋಪಿ ಶಿವಾನಂದ ನಾಯ್ಕ

ಸ್ಥಳಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಬರುವವರೆ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಉದ್ರಿಕ್ತ ಸ್ಥಳೀಯರನ್ನು ತಡೆಯಲು ಪೊಲೀಸರು ಹರಸಾಹಸಪಟ್ಟರು. ಸ್ಥಳಕ್ಕೆ ಡಿಸಿಪಿ ಸಾಹಿಲ್ ಬಾಗ್ಲಾ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.