ADVERTISEMENT

ಸರ್ವವರ್ಣಾತ್ಮಿಕೆ: ಹುಬ್ಬಳ್ಳಿಯಲ್ಲಿ ಮಹಿಳಾ ಸಮೂಹ ಚಿತ್ರಕಲಾ ಪ್ರದರ್ಶನ

ಕೃಷ್ಣಿ ಶಿರೂರ
Published 7 ಮಾರ್ಚ್ 2022, 3:22 IST
Last Updated 7 ಮಾರ್ಚ್ 2022, 3:22 IST
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಡಾ.ಎಂ.ವಿ.ಮಿಣಜಗಿ ಆರ್ಟ್‌ ಗ್ಯಾಲರಿ ಸಮಿತಿ ಹುಬ್ಬಳ್ಳಿಯ ಕೃಷ್ಣ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಮಹಿಳಾ ಸಮೂಹ ಚಿತ್ರಕಲಾ ಪ್ರದರ್ಶನವನ್ನು ಹಿರಿಯ ಕಲಾವಿದರಾದ ವಿ.ಟಿ.ಕಾಳೆ, ಗಾಯತ್ರಿ ದೇಸಾಯಿ, ಆರ್‌.ಬಿ.ಗರಗ ವೀಕ್ಷಿಸಿದರು
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಡಾ.ಎಂ.ವಿ.ಮಿಣಜಗಿ ಆರ್ಟ್‌ ಗ್ಯಾಲರಿ ಸಮಿತಿ ಹುಬ್ಬಳ್ಳಿಯ ಕೃಷ್ಣ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಮಹಿಳಾ ಸಮೂಹ ಚಿತ್ರಕಲಾ ಪ್ರದರ್ಶನವನ್ನು ಹಿರಿಯ ಕಲಾವಿದರಾದ ವಿ.ಟಿ.ಕಾಳೆ, ಗಾಯತ್ರಿ ದೇಸಾಯಿ, ಆರ್‌.ಬಿ.ಗರಗ ವೀಕ್ಷಿಸಿದರು   

ಹುಬ್ಬಳ್ಳಿ: ಅಲ್ಲಿ ವೃತ್ತಿಪರ ಹಿರಿ–ಕಿರಿಯ ಕಲಾವಿದೆಯರಿದ್ದರು. ಹವ್ಯಾಸಿ ಕಲಾವಿದೆಯರೂ ಇದ್ದರು. ತಮ್ಮ ಮನದಾಳದಿಂದ ಎದ್ದ ಭಾವನೆಗಳಿಗೆ ಬಣ್ಣ ಬಳಿದು ಗೋಡೆಗಳಲ್ಲಿ ತೂಗು ಬಿಟ್ಟಿದ್ದರು. ಒಂದಕ್ಕಿಂತ ಒಂದು ಭಿನ್ನ ಕಲಾಕೃತಿಗಳು ಹಿರಿ–ಕಿರಿಯ ಕಲಾವಿದರ ಕೈಗಳಲ್ಲಿ ಅರಳಿ, ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಅನಾವರಣಗೊಂಡವು.

ಹುಬ್ಬಳ್ಳಿಯ ಕುಂಚಬ್ರಹ್ಮ ಡಾ.ಎಂ.ವಿ. ಮಿಣಜಗಿ ಆರ್ಟ್‌ ಗ್ಯಾಲರಿ ಸಮಿತಿ ಮಹಿಳಾ ದಿನಾಚರಣೆ ಅಂಗವಾಗಿ ಇಲ್ಲಿನ ಕೃಷ್ಣ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಎರಡು ದಿನಗಳ ಮಹಿಳಾ ಸಮೂಹ ಚಿತ್ರಕಲಾ ಪ್ರದರ್ಶನ ’ಸರ್ವವರ್ಣಾತ್ಮಿಕೆ‘ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಸಮಾಜದಲ್ಲಿ ಗೋಮುಖ ತೊಟ್ಟ ವ್ಯಾಗ್ರರಿದ್ದಾರೆ. ಅಂಥವರಿಂದ ನಮ್ಮ ಬಾಲೆ, ಬಾಲಕಿ, ಯುವತಿ, ಮಹಿಳೆಯರು ಎಚ್ಚರದಿಂದಿರಿ ಎಂಬ ಸಂದೇಶ ಸಾರುವ ಗೋಮುಖ ವ್ಯಾಗ್ರ ಕಲಾಕೃತಿಯನ್ನು ದಾವಣಗೆರೆಯ ಕಲಾವಿದೆ ಹೇಮಲತಾ ಎನ್‌.ಎಸ್‌. ಪ್ರಸ್ತುತಪಡಿಸಿದ್ದರು. ಹೆಣ್ಣು ಮಗುವಿಗೆ ಪುರುಷನ ಆಸರೆ ಎಷ್ಟು ಅಗತ್ಯ ಎಂಬುದನ್ನು ಕಲಾವಿದೆ ಕವಿತಾ ಎಂ. ಕಲಾಕೃತಿಯಾಗಿಸಿದ್ದಾರೆ. ಬೀನಾ ಭೋಸಲೆ ತಮ್ಮ ಕಲಾಕೃತಿಯಲ್ಲಿ ಗ್ಲಾಮರಸ್‌ಗೆ ಒತ್ತು ಕೊಟ್ಟಿದ್ದಾರೆ. ಮಹಿಳೆ ತನ್ನೊಳಗೆ ಎಷ್ಟೇ ನೋವಿದ್ದರೂ ಅದನ್ನು ಮುಚ್ಚಿಡಲು ಮುಖವಾಡಕ್ಕೆ ಮೊರೆ ಹೋಗುತ್ತಾಳೆ ಎಂಬುದನ್ನು ಪೂಜಾ ಹೂಗಾರ ತಮ್ಮ ಕಲಾಕೃತಿಯಲ್ಲಿ ಅಭಿವ್ಯಕ್ತಪಡಿಸಿದ್ದಾರೆ. ಇವರಲ್ಲದೆ ರಾಜ್ಯದ ವಿವಿಧೆಡೆಗಳಿಂದ ಕಲಾವಿದೆಯರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ.

ADVERTISEMENT

ಸೃಷ್ಟಿ ಕಲಾಕೃತಿ

ತುಮಕೂರಿನ ಪವಿತ್ರ ಯು, ನೂರ್‌ ಆಯಿಷಾ, ಹುಬ್ಬಳ್ಳಿಯ ಶಕುಂತಲಾ ವೆರ್ಣೇಕರ, ಮನುಶ್ರೀ ಬಿರನೂರು, ಸೌಮ್ಯ ಕೋಟೆಮನೆ, ಉಮಾ ಅಂಗಡಿ, ಸುಜಾತಾ ಪವಾರ, ಸುಮಂಗಲಾ ಭಟ್‌, ವೀಣಾ ಪೋಳ, ತಾರಾ ಪಡುಕೋಣೆ, ಶಾರದಾ ಬಿರನೂರ, ಧಾರವಾಡದ ಅರ್ಮಾ ಖಾನ್, ಸೌಜನ್ಯ ಕರಡೋಣಿ, ಜಯಲಕ್ಷ್ಮಿ ಗದುಗಿನ, ಸವಿತಾ ಬೆಣಗಿ, ಡಾ.ಸಾಧನಾ ಚೌಗುಲಾ, ಡಾ.ಸುಮಾ ಆರ್.ಎಸ್‌, ಸವಿತಾ ಪಾಟೀಲ್,ವಿಜಯಲಕ್ಷ್ಮಿ ತಳವಾರ, ಗೋಕಾಕನ ನೇತ್ರಾವತಿ ಬೆಳಗಲಿ, ಮಲ್ಲಮ್ಮ ದಳವಾಯಿ, ಶಿಗ್ಗಾವಿಯ ಮಂಜುಳಾ ಕೆ.ವಿ, ಇಳಕಲ್‌ನ ನಫೀಸಾ ಬೇಗಂ, ಹಸರಗುಂಡಗಿಯ ಲಕ್ಷ್ಮೀಬಾಯಿ, ಶಿವಮೊಗ್ಗದ ಮಾನಸಾ ಗರಗ ಅವರ ಕಲಾಕೃತಿಗಳು ಪ್ರದರ್ಶನದಲ್ಲಿದ್ದವು. ಕೆಲವು ಮೂರ್ತ, ಕೆಲವು ಅಮೂರ್ತ ಕಲಾಕೃತಿಗಳಾಗಿದ್ದರೆ ಕೆಲವರು ಸಾಂಪ್ರದಾಯಿಕತೆ ಒತ್ತು ನೀಡಿದ್ದರು. ಹೆಚ್ಚಿನ ಕಲಾಕೃತಿಗಳು ಮುಖವಾಡಗಳನ್ನು ಬಿಂಬಿಸಿದವು. ಪ್ರಕೃತಿ, ದೇವರು, ರಾಷ್ಟ್ರನಾಯಕರ ಕೃತಿಗಳೂ ಇದ್ದವು.

ಹೇಮಲತಾ ಎನ್‌.ಎಸ್‌ ಅವರ ಕಲಾಕೃತಿ

ಇಷ್ಟು ವರ್ಷ ತಮ್ಮ ಕಲಾಕೃತಿಗಳು ಪ್ರದರ್ಶನ ಕಂಡಿಲ್ಲ ಎಂಬ ಕಲಾವಿದೆಯರ ಕೊರಗನ್ನು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಕಲಾವಿದೆಯರ ಚಿತ್ರಕಲಾ ಪ್ರದರ್ಶನ ನೀಗಿಸಿತು ಎಂಬ ಸಮಾಧಾನ ಅಲ್ಲಿದ್ದ ಕಲಾವಿದೆಯರದಾಯಿತು. ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದೆ ಗಾಯತ್ರಿ ಮ.ದೇಸಾಯಿ ಅವರಿಗೆ ಹಿರಿಯ ಕಲಾವಿದರಾದ ವಿ.ಟಿ. ಕಾಳೆ,ಆರ್‌.ಬಿ.ಗರಗ ಸರ್ವವರ್ಣಾತ್ಮಿಕೆ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಪೂಜಾ ಹೂಗಾರ ಅವರ ಮುಖವಾಡ ಕಲಾಕೃತಿ

ಈ ಕಲಾ ಪ್ರದರ್ಶನ ಸೋಮವಾರವೂ (ಮಾರ್ಚ್‌7) ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ ನಡೆಯಲಿದೆ.

ಕವಿತಾ ಎಂ. ಅವರ ಕಲಾಕೃತಿ
ಬೀನಾ ಭೋಸಲೆ ಅವರ ಕಲಾಕೃತಿ
ಮಲ್ಲಮ್ಮ ದಳವಾಯಿ ಅವರ ಕಲಾಕೃತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.