
ಹುಬ್ಬಳ್ಳಿ: ‘1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕುರಿತು ವಿ.ಡಿ. ಸಾವರ್ಕರ್ ಬರೆದ ಪುಸ್ತಕವೇ ಹಲವಾರು ಹೋರಾಟಗಾರರಿಗೆ ಪ್ರೇರಣೆ ನೀಡಿತು. ದೇಶಕ್ಕೆ ಸ್ವಾತಂತ್ರ್ಯ ಸಿಗಲು ಇದೇ ಮೂಲ ಕಾರಣ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಮೂರುಸಾವಿರ ಮಠದ ಮೈದಾನದಲ್ಲಿ ವಿ.ಡಿ. ಸಾವರ್ಕರ್ ಪುಣ್ಯತಿಥಿ ಅಂಗವಾಗಿ ಹಿಂದೂ ಶಕ್ತಿ ಸೇನಾ ವತಿಯಿಂದ ಗುರುವಾರ ಆಯೋಜಿಸಿದ್ದ ಹಿಂದೂ ಬಂಧು ಸಮಾವೇಶದಲ್ಲಿ ಮಾತನಾಡಿದರು.
‘ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಿಜವಾದ ಹೋರಾಟಗಾರರನ್ನು ನಮಗೆ ಪರಿಚಯಿಸಿಲ್ಲ. ಪಠ್ಯದಲ್ಲಿ ಮೊಘಲರ ಇತಿಹಾಸವನ್ನಷ್ಟೇ ಕಲಿಸಲಾಯಿತು. ಗಾಂಧಿ ಹಾಗೂ ನೆಹರೂ ಸ್ವಾತಂತ್ರ್ಯ ಕೊಡಿಸಿದರೆಂದು ಹೇಳಲಾಯಿತು. ನಿಜವಾದ ಸತ್ಯ ಈಗ ಗೊತ್ತಾಗುತ್ತಿದೆ’ ಎಂದರು.
‘ಗಾಂಧಿ ವಂಶದವರು ಸಾವರ್ಕರ್ ಅವರನ್ನು ಅಂಜುಬುರಕು ಎಂಬುದಾಗಿ ಹೀಯಾಳಿಸುತ್ತಾರೆ. ಸಾವರ್ಕರ್ ಕುಟುಂಬದವರು ಸಹ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡರು. ಸಾವರ್ಕರ್ ತಮ್ಮ ಇಡೀ ಜೀವನವನ್ನು ಜೈಲಿನಲ್ಲಿ ಅತ್ಯಂತ ಕಷ್ಟದಿಂದ ಕಳೆದರು. ಆದರೆ, ಗಾಂಧಿ, ನೆಹರೂ ಅವರಿದ್ದ ಜೈಲಿನಲ್ಲಿ ಸಕಲ ಸೌಲಭ್ಯ ಕಲ್ಪಿಸಲಾಗುತ್ತಿತ್ತು’ ಎಂದು ತಿಳಿಸಿದರು.
‘ಪ್ರಧಾನಿಯಾದ ಬಳಿಕ ನೆಹರೂ, ದೆಹಲಿಯ ರಸ್ತೆಗಳಿಗೆ ಮೊಘಲ್ ದೊರೆಗಳ ಹೆಸರಿಟ್ಟರು. ದೇಶಕ್ಕೆ ಅಮೋಘ ಕೊಡುಗೆ ನೀಡಿದ ಅಂಬೇಡ್ಕರ್ ಅವರಿಗೆ ಭಾರತರತ್ನ ಕೊಡದೆ, ತಾವೇ ಪಡೆದರು. ಜೈಲಿನಲ್ಲಿದ್ದಾಗ ನೆಹರು ಸಹ ತಪ್ಪೊಪ್ಪಿಗೆ ಬರೆದಿದ್ದರು’ ಎಂದರು.
ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಹಿಂದೂ ಶಕ್ತಿ ಸೇನಾದ ರಾಜ್ಯ ಘಟಕದ ಅಧ್ಯಕ್ಷ ಈರಣ್ಣ ಶಿರಗುಪ್ಪಿ ಮಾತನಾಡಿದರು.
ಈ ಸಂದರ್ಭದಲ್ಲಿ ಹಿಂದೂ ಶಕ್ತಿ ಸೇನಾ ಹಾಗೂ ವೆಬ್‌ಸೈಟ್ ಉದ್ಘಾಟಿಸಲಾಯಿತು. ಕುಂದಗೋಳ ತಾಲ್ಲೂಕಿನ ಯಲಿವಾಳ ಗ್ರಾಮದ ವೀರರಾಣಿ ಕಿತ್ತೂರು ಚನ್ಮಮ್ಮ ಸೇವಾ ಸಂಘದ ಮಕ್ಕಳು ಮಲ್ಲಕಂಬ ಹಾಗೂ ಧರ್ಮ ಚೇತನ ಸಂಸ್ಥೆಯ ಮಕ್ಕಳು ಕತ್ತಿ ವರಸೆ ಪ್ರದರ್ಶಿಸಿದರು.
ದೇಶ ಇದ್ದರೆ ನಾವು. ಧರ್ಮದ ರಕ್ಷಣೆ ಎಲ್ಲರ ಕರ್ತವ್ಯ. ಧರ್ಮವನ್ನು ಉಳಿಸಿ ಬೆಳೆಸಿದಾಗ ಸನಾತನ ಪರಂಪರೆಯ ವೈಭವ ಮರುಕಳಿಸುತ್ತದೆ- ಅಭಿನವ ಬಸವಣ್ಣಜ್ಜ, ಕಲ್ಯಾಣಪುರಮಠ ಕುಂದಗೋಳ
‘2028ರ ಚುನಾವಣೆಯಲ್ಲಿ ಭಗವಾಧ್ವಜ ಹಾರಿಸಿ’
‘ಮತ ರಾಜಕಾರಣದ ಕಾರಣ ಮುಸ್ಲಿಮರ ಓಲೈಕೆಗಾಗಿ ಕಾಂಗ್ರೆಸ್ ಆ ಸಮುದಾಯಕ್ಕೆ ಹೆಚ್ಚಿನ ಅನುದಾನ ನೀಡುತ್ತಿದೆ. ಈ ಮೂಲಕ ಹಿಂದೂಗಳನ್ನು ದುರ್ಬಲರನ್ನಾಗಿ ಮಾಡಲಾಗುತ್ತಿದೆ. ಇದಕ್ಕೆಲ್ಲ ಹಿಂದೂಗಳು ಹೆದರಬಾರದು. ಮಹನೀಯರ ಧೈರ್ಯ ನಮ್ಮಲ್ಲಿರಬೇಕು. ಆರ್ಥಿಕವಾಗಿ ಸಬಲರಾಗಬೇಕು. ಆತ್ಮರಕ್ಷಣೆಯೊಂದಿಗೆ ರಾಷ್ಟ್ರ ಹಾಗೂ ಧರ್ಮ ರಕ್ಷಣೆ ಅವಶ್ಯ’ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
‘ಹಿಂದೂಗಳಿಗೆ ಸುರಕ್ಷತೆ ಇಲ್ಲವಾಗಿದ್ದು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. 2028ರ ವಿಧಾನಸಭಾ ಚುನಾವಣೆಯಲ್ಲಿ ಭಗವಾಧ್ವಜ ಹಾರಿಸಬೇಕು. ನಾಟಕವಾಡುವ ರಾಜಕಾರಣಿಗಳನ್ನು ನಂಬದೆ ಹಿಂದುತ್ವದ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು’ ಎಂದು ಕರೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.