ಕುಂದಗೋಳ: ಸಂಗೀತ ಕಾಶಿ ಎಂದೇ ಪ್ರಸಿದ್ಧಗೊಂಡಿದ್ದ ಕುಂದಗೋಳಕ್ಕೆ ಈ ಹೆಸರು ತಂದವರು ಸವಾಯಿ ಗಂಧರ್ವರು. ಅವರ ನೆನಪಿಗಾಗಿ ಇಲ್ಲಿ ನಿರ್ಮಾಣಗೊಂಡ ಸವಾಯಿ ಗಂಧರ್ವ ಸ್ಮಾರಕ ಭವನವು ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ವಿದುಷಿ ಗಂಗೂಬಾಯಿ ಹಾನಗಲ್, ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ ಪರಿಶ್ರಮದಿಂದ 2012ರಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ನಿರ್ಮಿತಿ ಕೇಂದ್ರದ ಮೂಲಕ ಭವನ ನಿರ್ಮಾಣವಾಯಿತು. ನಂತರ ದಿನಗಳಲ್ಲಿ ಅಹೋರಾತ್ರಿ ಸಂಗೀತೋತ್ಸವ ಇಲ್ಲಿಯೇ ಪ್ರಾರಂಭವಾಯಿತು. ಇದೀಗ ಭವನದ ಚಾವಣಿ ಮಳೆಗೆ ಸೋರುತ್ತಿದೆ, ತಗ್ಗು ಪ್ರದೇಶದಲ್ಲಿರುವ ಭವನದ ಸುತ್ತಲೂ ನೀರು ತುಂಬಿ ಕಪ್ಪೆ, ಅನೇಕ ಜಂತುಗಳ ತಾಣವಾಗಿದೆ. ಸಂಗೀತ ಭವನದಲ್ಲಿ ಕರ್ಕಶ ಶಬ್ದ ಕೇಳುವಂತಾಗಿದೆ.
ನಿರ್ಮಿತಿ ಕೇಂದ್ರದಿಂದ ಪಟ್ಟಣ ಪಂಚಾಯಿತಿ ಸುಪರ್ದಿಗೆ ಬಂದ ಭವನಕ್ಕೆ ನಿರ್ವಹಣೆಗೆ ಅನುದಾನವಿಲ್ಲ. ಈಗ ಪ್ರತಿ ವರ್ಷ ಸಂಗೀತ ಕಾರ್ಯಕ್ರಮ ಆಯೋಜನೆಗೆ ಹರಸಾಹಸ ಪಡುವ ಸ್ಥಿತಿ ಉಂಟಾಗಿದೆ. ಸಂಗೀತ ಕಾರ್ಯಕ್ರಮ ನಡೆಸುವ ವಿಶ್ವಸ್ಥ ಸಂಸ್ಥೆಯವರು ಹಾಗೂ ಪಟ್ಟಣ ಪಂಚಾಯಿತಿ ಯವರು ಅಸ್ವಸ್ಥರಾಗುವಂತಾಗಿದೆ.
ಭವನದ ಕಡೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ರಾಜ್ಯ ಸರ್ಕಾರ ಗಮನ ಹರಿಸಿ ಸಂಗೀತ ಕಾಶಿಗೆ ಗೌರವ ಸಿಗಲಿ ಎಂಬುದು ಸಂಗೀತಾಸಕ್ತರ ಹಂಬಲ.
ಭವನದಲ್ಲಿ 73ನೇ ಅಹೋರಾತ್ರಿ ಸಂಗೀತ ಕಾರ್ಯಕ್ರಮ ಸೆ.15 ಹಾಗೂ 16ರಂದು ಹಮ್ಮಿಕೊಂಡಿದ್ದು, ಗುರುವರ್ಯರ ಆಶೀರ್ವಾದದಿಂದ ಕಾರ್ಯಕ್ರಮ ನಡೆಯುತ್ತದೆ’.ಅರವಿಂದ ಕಟಗಿ, ವಿಶ್ವಸ್ಥ ಸಂಸ್ಥೆ ಅಧ್ಯಕ್ಷ
ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನಿಡಿದ ಕುಂದಗೋಳದ ಭವನ ನಿರ್ಲಕ್ಷ್ಯಕ್ಕೆ ಒಳಗಾಗಬಾರದು. ಅಲ್ಲದೆ ಸಂಗೀತ ಪಾಠಶಾಲೆ ಪ್ರಾರಂಭವಾಗಬೇಕು. ಸಂಬಂಧಿಸಿದವರು ಗಮನ ಹರಿಸಲಿ.ಮಂಜುನಾಥ ರಾಯಭಾಗಿ, ಸಂಗೀತ ಪ್ರೇಮಿ
ಸಂಸದ ಪ್ರಲ್ಹಾದ ಜೋಶಿ ಅವರು ದುರಸ್ತಿಗೆ ರಾಜ್ಯ ಸರ್ಕಾರಕ್ಕೆ ಅಂದಾಜು ₹1 ಕೋಟಿಯ ಪ್ರಸ್ತಾವ ಕಳುಹಿಸಿದ್ದಾರೆ. ನಾವು ಈಗ ಪಟ್ಟಣ ಪಂಚಾಯಿತಿ ಇಂದ ಕಾರ್ಯಕ್ರಮಕ್ಕೆ ಬೇಕಾದ ವ್ಯವಸ್ಥೆ ಮಾಡಿದ್ದೇವೆ.ಚಂದ್ರಕಾಂತ ಕುಲಕರ್ಣಿ, ಕುಂದಗೋಳ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.