
ಹುಬ್ಬಳ್ಳಿ: ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ರಾಜ್ಯ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ. ಎಲ್. ಮೂರ್ತಿ ಅವರು ಗುರುವಾರ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.
ನಗರದ ವಿವೇಕಾನಂದ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಂದ ಘಟನೆಯ ಮಾಹಿತಿ ಪಡೆದ ಅವರು, ಧೈರ್ಯ ತುಂಬಿ ಸೂಕ್ತ ನೆರವಿನ ಭರವಸೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಘಟನೆ ನಡೆದಾಗಿನಿಂದ ಜಿಲ್ಲಾಡಳಿತದೊಂದಿಗೆ ಸಂಪರ್ಕದಲ್ಲಿದ್ದು, ಸಂಪೂರ್ಣ ಮಾಹಿತಿ ಪಡೆಯಲಾಗಿದೆ. ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳಾದರೂ ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿದೆ. ಸಂಸ್ಕಾರ ಮತ್ತು ಸಂಸ್ಕೃತಿ ನೆಲಕಚ್ಚಿದೆ. ಇದು ಸಮಾಜಕ್ಕೆ ಮಾರಕ’ ಎಂದರು.
‘ತಂದೆಯೇ ಮಗಳನ್ನು ಕೊಲೆ ಮಾಡಿರುವುದು ತೀವ್ರ ಆಘಾತ ಉಂಟು ಮಾಡಿದೆ. ಯುವಕ ಹಾಗೂ ಯುವತಿ ಮನೆಯವರೊಂದಿಗೆ ಸಮಾಲೋಚನೆ ನಡೆಸಿದ್ದರೂ, ಅಮಾನವೀಯ ಕೃತ್ಯ ಎಸಗಿದ್ದಾರೆ. ಸಂತ್ರಸ್ತರು ಇನ್ನೂ ಭಯಭೀತರಾಗಿದ್ದಾರೆ. ಎಲ್ಲಿಯೂ ಇಂತಹ ಘಟನೆ ಮರುಕಳಿಸದಂತೆ ಕ್ರಮ ವಹಿಸಲು ಸರ್ಕಾರದ ಗಮನ ಸೆಳೆಯುವೆ’ ಎಂದು ಹೇಳಿದರು.
‘ತಾಲ್ಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯವರು ಸರಿಯಾಗಿ ಸ್ಪಂದಿಸದ ಕುರಿತು ಆರೋಪ ಕೇಳಿ ಬಂದಿದೆ. ಜಿಲ್ಲಾಧಿಕಾರಿಯವರು ಸಮಗ್ರ ವರದಿ ನೀಡಿದ್ದಾರೆ. ಇದನ್ನೆಲ್ಲ ಆಧರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಜನರಲ್ಲಿ ಜಾಗೃತಿ ಮೂಡಿಸಲು ಪೊಲೀಸ್, ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ಆಡಳಿತದಿಂದ ಕಾರ್ಯಕ್ರಮ ರೂಪಿಸಲು ತಾಕೀತು ಮಾಡುವೆ’ ಎಂದರು.
ಗ್ರಾಮಕ್ಕೆ ಭೇಟಿ: ಇನಾಂ ವೀರಾಪುರ ಗ್ರಾಮಕ್ಕೆ ಭೇಟಿ ನೀಡಿದ ಎಲ್. ಮೂರ್ತಿ ಅವರು, ದಲಿತ ಕುಟುಂಬಗಳು ವಾಸಿಸುವ ಓಣಿ ಹಾಗೂ ದೌರ್ಜನ್ಯಕ್ಕೆ ಒಳಗಾದ ವಿವೇಕಾನಂದ ಅವರ ಮನೆ, ದೌರ್ಜನ್ಯ ಮತ್ತು ಕೊಲೆ ನಡೆದ ಸ್ಥಳ ಪರಿಶೀಲಿಸಿದರು. ಸ್ಥಳೀಯ ನಿವಾಸಿಗಳು, ಪೊಲೀಸ್ ಅಧಿಕಾರಿಗಳಿಂದ ಮತ್ತು ದಲಿತ ಸಂಘಟನೆಗಳ ಪ್ರಮುಖರಿಂದ ಮಾಹಿತಿ ಪಡೆದರು.
ಆಯೋಗದ ಸದಸ್ಯ ಸುನೀಲ ಉಕ್ಕಲಿ, ಕಾರ್ಯದರ್ಶಿ ಎಚ್.ಎಸ್. ಶಿವರಾಮು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಡಿಸಿಪಿ ಮಹಾನಿಂಗ ನಂದಗಾವಿ, ಡಿವೈಎಸ್‌ಪಿ ವಿನೋದ ಮುಕ್ತೆದಾರ, ಎಸಿಪಿ ಶಿವಪ್ರಕಾಶ ನಾಯ್ಕ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಶುಭ ಪಿ., ಗ್ರಾಮೀಣ ತಹಶೀಲ್ದಾರ್ ಜಿ.ಆರ್. ಮಜ್ಜಗಿ ಇದ್ದರು.
‘ಅನಾಗರಿಕತೆಯ ಪರಾಕಾಷ್ಠೆ’
‘ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಕೃತ್ಯ. 21ನೇ ಶತಮಾನದಲ್ಲೂ ಅಂತರ್ಜಾತಿ ವಿವಾಹದ ಕಾರಣಕ್ಕೆ ಮಗಳನ್ನೇ ಕೊಲೆ ಮಾಡಿರುವುದು ಅನಾಗರಿಕತೆ ಅಮಾನವೀಯತೆಯ ಪರಾಕಾಷ್ಠೆಯಾಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಸಂತ್ರಸ್ತರನ್ನು ಗುರುವಾರ ಭೇಟಿಯಾದ ಬಳಿಕ ಮಾತನಾಡಿದ ಅವರು ‘ಘಟನೆ ನಡೆದಾಗ ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತ ತಕ್ಷಣ ಸ್ಪಂದಿಸಬೇಕಿತ್ತು. ಈ ಕುರಿತು ಜಿಲ್ಲಾಡಳಿತ ಹಾಗೂ ಇಲಾಖೆ ಸಚಿವರೊಂದಿಗೆ ಮಾತನಾಡುತ್ತೇನೆ’ ಎಂದರು. ಶಾಸಕರಾದ ಮಹೇಶ ಟೆಂಗಿನಕಾಯಿ ಅರವಿಂದ ಬೆಲ್ಲದ ಬಿಜೆಪಿ ಹಾಗೂ ದಲಿತ ಸಂಘಟನೆಗಳ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.