ADVERTISEMENT

ಮುಸ್ಲಿಂ ವಿರೋಧಿ ಹೇಳಿಕೆ: ಶಾಸಕ ಸ್ಥಾನದಿಂದ ಬಂಡಿಸಿದ್ದೇಗೌಡ ವಜಾಗೊಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 13:42 IST
Last Updated 25 ಜೂನ್ 2025, 13:42 IST
ಹುಬ್ಬಳ್ಳಿಯ ತಹಶೀಲ್ದಾರ್ ಕಚೇರಿ ಎದುರು ಬುಧವಾರ ಸೋಶಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾ ಸಮಿತಿಯ ಪ್ರಮುಖರು ಪ್ರತಿಭಟನೆ ನಡೆಸಿದರು
ಹುಬ್ಬಳ್ಳಿಯ ತಹಶೀಲ್ದಾರ್ ಕಚೇರಿ ಎದುರು ಬುಧವಾರ ಸೋಶಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾ ಸಮಿತಿಯ ಪ್ರಮುಖರು ಪ್ರತಿಭಟನೆ ನಡೆಸಿದರು   

ಹುಬ್ಬಳ್ಳಿ: ‘ಮುಸ್ಲಿಂ ವಿರೋಧಿ ಹೇಳಿಕೆ ನೀಡಿರುವ ಶ್ರೀರಂಗಪಟ್ಟಣದ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು‘ ಎಂದು ಆಗ್ರಹಿಸಿ ಬುಧವಾರ ಸೋಶಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. 

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಸಲೀಂ ಹಳ್ಯಾಳ ಅವರು, ’ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು, ‘ಮುಸ್ಲಿಮರಿಗೆ ಸರ್ಕಾರಿ ಜಮೀನು ಮಂಜೂರು ಮಾಡಿದರೆ ನೇಣಿಗೆ ಹಾಕಲಾಗುವುದು’ ಎಂದು ಅಧಿಕಾರಿಗಳಿಗೆ ಬೆದರಿಕೆ ಹಾಕುವ ಮೂಲಕ ಅವರೊಳಗಿನ ಮುಸ್ಲಿಂ ದ್ವೇಷವನ್ನು ಹೊರ ಹಾಕಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಮುಸ್ಲಿಂ ಸಮುದಾಯದವರ ಮತ ಪಡೆದು ಆಯ್ಕೆಯಾದ ಕಾಂಗ್ರೆಸ್‌ ಪಕ್ಷದ ಕೆಲ ನಾಯಕರು, ಅವರ ವಿರುದ್ಧವೇ ಮಾತನಾಡುತ್ತಿರುವುದು ಖಂಡನೀಯ. ಕೋಮು ದ್ವೇಷದ ಮನಸ್ಥಿತಿಯನ್ನು ಹೊಂದಿರುವ ಇಂತಹ ಶಾಸಕರನ್ನು ವಜಾ ಮಾಡಬೇಕು. ನಿರ್ಲಕ್ಷಿಸಿದರೆ, ಮುಂಬರುವ ದಿನಗಳಲ್ಲಿ ತೀವ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು. 

ADVERTISEMENT

‘ಮುಸ್ಲಿಮರ ವಿರುದ್ಧ ಅವರು ದ್ವೇಷ ಕಾರುವ ಮೂಲಕ ಜವಾಬ್ದಾರಿಯುತ ಶಾಸಕ ಸ್ಥಾನಕ್ಕೆ ಚ್ಯುತಿ ತಂದಿದ್ದಾರೆ. ಮೊದಲು ಶಾಸಕರನ್ನು ಪಕ್ಷದಿಂದ ಹೊರಹಾಕಬೇಕು. ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿ ಅವರು ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. 

ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಜಹೀರ್ ಜಮಖಂಡಿ, ಪ್ರಮುಖರಾದ ಅಬ್ದುಲ್ ಜಬ್ಬಾರ್, ಜಿಲಾನಿ ಅರಳಿಕಟ್ಟಿ, ಮಲೀಕ ಹೋರಕೇರಿ, ಸಾದಿಕ್ ಕಲಬುರಗಿ, ಹಮಿದ ಬಂಗಾಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.