ADVERTISEMENT

ಸಮಾಜ ಸೇವೆಯಿಂದ ಆತ್ಮಸಂತೃ‌ಪ್ತಿ: ವೀಣಾ ರಾಮಕೃಷ್ಣ

ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದ ದತ್ತಿ ಸಮರ್ಪಣಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 4:59 IST
Last Updated 8 ಆಗಸ್ಟ್ 2022, 4:59 IST
ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ರಂಗರೇಖಾ ಕಲಾ ಬಳಗದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್‌ಗೆ ದತ್ತಿ ಸಮರ್ಪಣಾ ಕಾರ್ಯಕ್ರಮವನ್ನು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗರಾಜ ಅಂಗಡಿ ಹಾಗೂ ಗಣ್ಯರು ಉದ್ಘಾಟಿಸಿದರು
ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ರಂಗರೇಖಾ ಕಲಾ ಬಳಗದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್‌ಗೆ ದತ್ತಿ ಸಮರ್ಪಣಾ ಕಾರ್ಯಕ್ರಮವನ್ನು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗರಾಜ ಅಂಗಡಿ ಹಾಗೂ ಗಣ್ಯರು ಉದ್ಘಾಟಿಸಿದರು   

ಹುಬ್ಬಳ್ಳಿ: ‘ಧಾರಾಕಾರ ಮಳೆಗೆ ಮನೆ ಕುಸಿದು ಬೀದಿಯಲ್ಲಿ ನಿಂತಾಗ, ಅನ್ನ ಮತ್ತು ಶಿಕ್ಷಣ ನೀಡಿ ಸಲುಹಿದವರು ವೀಣಾ ರಾಮಕೃಷ್ಣ ಅಠವಲೆ. ಅವರ ನೆರವನ್ನು ನಾನು ಈ ಜನ್ಮದಲ್ಲಿ ಮರೆಯುವುದಿಲ್ಲ, ಅವರು ಗುರುವಾಗಿ ಅಷ್ಟೇ ಅಲ್ಲ ಅಮ್ಮನಂತೆ ನಮ್ಮನ್ನು ಸಲುಹಿದರು..ಅವರು ಅನಾಥರ ಮಾಯಿಯೇ ಸರಿ’..

ಇಂತಹ ಭಾವನಾತ್ಮಕ ಮಾತುಗಳಿಗೆ ಸಾಕ್ಷಿಯಾಗಿದ್ದು, ರಂಗಭೂಮಿ ಕಲಾವಿದೆ ವೀಣಾ ರಾಮಕೃಷ್ಣ ಅಠವಲೆ ಅವರ ಜನ್ಮದಿನದ ಅಂಗವಾಗಿ ಇಲ್ಲಿನ ಸವಾಯಿ ಗಂಧರ್ವ ಸಭಾಂಗಣದಲ್ಲಿ ರಂಗರೇಖಾ ಕಲಾ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್‌ಗೆ ದತ್ತಿ ಸಮರ್ಪಣಾ ಕಾರ್ಯಕ್ರಮ.

ಈ ಮಾತುಗಳನ್ನು ಕೇಳುತ್ತಿದ್ದ ಪ್ರೇಕ್ಷಕರು ಈ ಅನುಭವಗಳು ತಮ್ಮದೇ ಎನ್ನುವಂತೆ ಭಾವುಕರಾದರು. ಅಠವಲೆ ಅವರ ಶಿಷ್ಯರು ದುಃಖವನ್ನು ತಡೆದುಕೊಳ್ಳುತ್ತಲೇ ಅನುಭವ ಹಂಚಿಕೊಂಡರು. ವೀಣಾ ಅವರ ಕಣ್ಣಾಲಿಗಳೂ ಒದ್ದೆಯಾಗಿದ್ದವು.

ADVERTISEMENT

ವೀಣಾ ರಾಮಕೃಷ್ಣ ಅಠವಲೆ ಮಾತನಾಡಿ, ‘ಆಸರೆ ಬಯಸಿ ಬಂದ ಮಕ್ಕಳಿಗೆ ನಮ್ಮ ಮಕ್ಕಳ ಜತೆಯೇ ಅಡುಗೆ ಮಾಡುತ್ತಿದ್ದೆ. ಅವರ ವಿದ್ಯಾಭ್ಯಾಸ ಗಮನಿಸುತ್ತಿದ್ದೆ. ನೀವಿಷ್ಟು ಮಾಡುವಾಗ ನ‌ಮ್ಮ ಸೇವೆಯೂ ಇರಲಿ ಎಂದು ಹಲವರು ನೆರವು, ಸಹಕಾರ ನೀಡಿದ್ದಾರೆ’ ಎಂದರು.

‘ನನ್ನ ಇಬ್ಬರು ಹೆಣ್ಣು ಮಕ್ಕಳು, ಪತಿ ಸಮಾಜ ಸೇವೆಗೆ ಪ್ರೋತ್ಸಾಹಿಸಿದ್ದಾರೆ. ಕುಟುಂಬದ ನೆರವು ಇಲ್ಲದೆ ಇಷ್ಟೆಲ್ಲ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲರೂ ನನಗೆ ಮಕ್ಕಳ ಸಮಾನ. ಸಮಾಜ ಸೇವೆ ಮಾಡುವುದರಲ್ಲಿ ಆತ್ಮಸಂತೃಪ್ತಿ ಸಿಗುತ್ತದೆ’ ಎಂದು ಹೇಳಿದರು.

ಆಕಾಶವಾಣಿ ಉದ್ಘೋಷಕ ಶಶಿಧರ ನರೇಂದ್ರ ಮಾತನಾಡಿ, ‘ವೀಣಾ ಅಠವಲೆ ಅವರು ಸಮಾಜ ಸೇವೆ ಮಾಡುತ್ತಾ ರಂಗ ಚಟುವಟಿಕೆಗಳಿಗೆ ಪೂರಕವಾದ ಕೆಲಸಗಳನ್ನು ಮಾಡುತ್ತಿದ್ದಾರೆ’ ಎಂದರು.

ಬಯಲಾಟ ನಾಟಕ ಅಕಾಡೆಮಿ ಅಧ್ಯಕ್ಷ ಅಜಿತ ಬಸಾಪುರ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಹಲವು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಮಾರ್ಗದರ್ಶನದಿಂದ ನಾವೆಲ್ಲ ಬದುಕು ಕಟ್ಟಿಕೊಂಡಿದ್ದೇವೆ ಎಂದು ಹೇಳಿದರು.

ಧಾರವಾಡ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಲಿಂಗರಾಜ ಅಂಗಡಿ ಮಾತನಾಡಿದರು. ಸಂತ ಶಿಶುನಾಳ ಶರೀಫ ನಾಟಕ ಪ್ರದರ್ಶನ ನಡೆಯಿತು. ರಂಗರೇಖಾ ಕಲಾ ಬಳಗದ ಅಧ್ಯಕ್ಷ ಬಸವರಾಜ ಚಕ್ರಸಾಲಿ ಅವರುವೀಣಾ ರಾಮಕೃಷ್ಣ ಅಠವಲೆ ಅವರ ಹೆಸರಿನಲ್ಲಿ ದತ್ತಿ ಕಾರ್ಯಕ್ರಮ ನಡೆಸಲು ₹25 ಸಾವಿರ ಮೊತ್ತದ ಚೆಕ್‌ ಅನ್ನು ಲಿಂಗರಾಜ ಅಂಗಡಿ ಅವರಿಗೆ ಹಸ್ತಾಂತರಿಸಿದರು.

ಪತ್ರಕರ್ತ ಗಣಪತಿ ಗಂಗೊಳ್ಳಿ, ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ತಜ್ಞ ಸದಸ್ಯ ಶಶಿಧರ ನರೇಂದ್ರ, ಕೆ.ಎಸ್‌. ಕೌಜಲಗಿ,ದಯಾನಂದ ಚವ್ಹಾಣ, ಶಾಂತಣ್ಣ ಕಡಿವಾಲ, ರಾಮಕೃಷ್ಣ ಅಠವಲೆ, ಗುರುಸಿದ್ಧಪ್ಪ ಬಡಿಗೇರ,ಸುಭಾಷ ನರೇಂದ್ರ, ಜಿಗಳೂರು ಶಾಲೆಯ ಮುಖ್ಯಶಿಕ್ಷಕಿ ಮೇನಕಾ ಮಠದ, ವಿರುಪಾಕ್ಷ ಕಟ್ಟಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.