
ರಾಜು ಕಾಗೆ (ಭರಮಗೌಡ ಕಾಗೆ)
ಹಾವೇರಿ: ‘ಉತ್ತರ ಕರ್ನಾಟಕಕ್ಕೆ ಸಾಕಷ್ಟು ಅನ್ಯಾಯವಾಗುತ್ತಿದ್ದು, ನಮಗೆ ಪ್ರತ್ಯೇಕ ರಾಜ್ಯ ಬೇಕು. ಕಿತ್ತೂರು ಕರ್ನಾಟಕ ಹೆಸರಿನಲ್ಲಿ ರಾಜ್ಯವಾಗಲಿ’ ಎಂದು ಶಾಸಕ ಭರಮಗೌಡ (ರಾಜು) ಕಾಗೆ ಒತ್ತಾಯಿಸಿದರು.
ಜಿಲ್ಲೆಯ ಶಿಗ್ಗಾವಿಯಲ್ಲಿ ಶುಕ್ರವಾರ ನಡೆದ ನೂತನ ಡಿಪೊ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಉತ್ತರ ಕರ್ನಾಟಕದ ಅಭಿವೃದ್ಧಿಗೆ ₹ 5,000 ಕೋಟಿ ಕೊಡಬೇಕು. ಇಲ್ಲದಿದ್ದರೆ, ಪ್ರತ್ಯೇಕ ರಾಜ್ಯ ಮಾಡಬೇಕು. ಇದು ಸರ್ಕಾರದ ನಿರ್ಧಾರವಲ್ಲ. ನನ್ನ ವೈಯುಕ್ತಿಕ ಅಭಿಪ್ರಾಯ’ ಎಂದರು.
‘ಬೆಳಗಾವಿ ಜಿಲ್ಲೆಯಲ್ಲಿ 5 ಹೊಸ ತಾಲ್ಲೂಕು ಘೋಷಣೆ ಆಗಿವೆ. ಆದರೆ, ಇದುವರೆಗೂ ಮೂಲ ಸೌಕರ್ಯಗಳಿಲ್ಲ. ಸರ್ಕಾರಿ ಕಚೇರಿಗಳನ್ನು ನಿರ್ಮಾಣ ಮಾಡಿಲ್ಲ. ನಾನು ಐದು ಬಾರಿ ಶಾಸಕನಾಗಿದ್ದೇನೆ. ಜನರಿಂದ ಆರಿಸಿ ಬಂದ ನಾನು, ಜನರ ಋಣ ತೀರಿಸಬೇಕು. ಉತ್ತರ ಕರ್ನಾಟಕ ಆಗಬೇಕೆಂದು ಈಗ ನಾನೊಬ್ಬನೇ ಧ್ವನಿ ಎತ್ತುತ್ತಿದ್ದೇನೆ. ಮುಂದೆ ಒಬ್ಬೊಬ್ಬರೇ ಧ್ವನಿ ಎತ್ತುತ್ತಾರೆ. ಎಷ್ಟು ಜನರು ಬೆಂಬಲ ನೀಡುತ್ತಾರೆ ಎಂಬುದನ್ನು ನೋಡುತ್ತೇನೆ. ಎಲ್ಲರನ್ನೂ ಕರೆದುಕೊಂಡು ಹೋರಾಟ ಆರಂಭಿಸುತ್ತೇನೆ. ಪ್ರತ್ಯೇಕ ರಾಜ್ಯವಾದರೆ ಖಂಡಿತ ಅಭಿವೃದ್ಧಿಯಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.