ADVERTISEMENT

ಬೆಳಗಾವಿಯಲ್ಲಿ ಅಧಿವೇಶನ: ಸಿಎಂಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪತ್ರ

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 9:13 IST
Last Updated 29 ಜೂನ್ 2021, 9:13 IST
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ   

ಹುಬ್ಬಳ್ಳಿ: ‘ಈ ಸಲದ ಮಳೆಗಾಲದ ಅಧಿವೇಶನವನ್ನು ಜುಲೈ ತಿಂಗಳಿನಲ್ಲಿ ಬೆಳಗಾವಿಯಲ್ಲೇ ನಡೆಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇನೆ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2018ರ ಬಳಿಕ ಬೆಳಗಾವಿಯಲ್ಲಿ ಅಧಿವೇಶನ ನಡೆದಿಲ್ಲ. ಹಾಗಾಗಿ, ಅಲ್ಲೇ ನಡೆಸುವಂತೆ ಬರೆದ ಪತ್ರಕ್ಕೆ ಮುಖ್ಯಮಂತ್ರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸಂಪುಟದಲ್ಲೂ ಈ ವಿಷಯ ಚರ್ಚೆಯಾಗಿಲ್ಲ. ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರೂ ಬೆಳಗಾವಿಯಲ್ಲೇ ಅಧಿವೇಶನ ಕರೆಯಲು ವ್ಯವಸ್ಥೆ ಮಾಡಿ ಎಂದಿದ್ದಾರೆ’ ಎಂದು ತಿಳಿಸಿದರು.

ಮಾರ್ಗಸೂಚಿ ರೂಪಿಸಿ: ‘ಲಾಕ್‌ಡೌನ್ ಮತ್ತು ಕೋವಿಡ್ ಕಾರಣದಿಂದಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಶುಲ್ಕ ಸಂಗ್ರಹ ಕುರಿತು ಸಂಸ್ಥೆಗಳು ಹಾಗೂ ಪೋಷಕರ ಮಧ್ಯೆ ಗೊಂದಲ ಸೃಷ್ಟಿಯಾಗಿದೆ. ಇದನ್ನು ನಿವಾರಿಸಲು ಅಧಿಕಾರಿಗಳು ಶಿಕ್ಷಣ ಸಂಸ್ಥೆಗಳನ್ನು ಅವುಗಳ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಎ, ಬಿ, ಸಿ ಹಾಗೂ ಡಿ ಎಂದು ವರ್ಗೀಕರಿಸಬೇಕು. ಯಾರಿಗೂ ಹೊರೆಯಾಗದಂತೆ ಶುಲ್ಕ ಪಾವತಿಗೆ ಮಾರ್ಗಸೂಚಿ ರೂಪಿಸಬೇಕು. ಈ ಕುರಿತು, ಸಚಿವರಿಗೆ ಪತ್ರ ಕೂಡ ಬರೆದಿದ್ದೇನೆ’ ಎಂದರು.

ADVERTISEMENT

‘ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿರುವ ಶಿಕ್ಷಣ ಸಂಸ್ಥೆಗಳು ಲಕ್ಷಗಟ್ಟಲೆ ಹಾಗೂ ಜಿಲ್ಲಾ ಮಟ್ಟದಲ್ಲಿರುವವು ಶೇ 50ರಷ್ಟು ಶುಲ್ಕ ಪಡೆಯುತ್ತವೆ. ಶೇ 30ರಷ್ಟು ಪಡೆಯುವ ತಾಲ್ಲೂಕು ಮಟ್ಟದಲ್ಲಿರುವ ಸಂಸ್ಥೆಗಳು ತೀರಾ ಕೆಳಮಟ್ಟದಲ್ಲಿವೆ. ಇಲ್ಲಿರುವ ಸಿಬ್ಬಂದಿ ಅತ್ಯಂತ ಕಡಿಮೆ ಸಂಬಳಕ್ಕೆ ದುಡಿಯುತ್ತಾರೆ. ಶುಲ್ಕವನ್ನೇ ಪಡೆಯದಿದ್ದರೆ ಈ ಸಂಸ್ಥೆಗಳು ಶೋಚನೀಯ ಸ್ಥಿತಿ ತಲುಪಲಿವೆ. ಹಾಗಾಗಿ, ಯಾರಿಗೂ ಹೊರೆಯಾಗದಂತೆ ಅಧಿಕಾರಿಗಳು ಶುಲ್ಕಕ್ಕೆ ಸಂಬಂಧಿಸಿದ ಮಾರ್ಗಸೂಚಿಯನ್ನು ರೂಪಿಸಿ, ಗೊಂದಲ ನಿವಾರಿಸಬೇಕು’ ಎಂದು ಸಲಹೆ ನೀಡಿದರು.

***
ನನ್ನನ್ನೂ ಒಳಗೊಂಡಂತೆ ರಾಜಕಾರಣಿಗಳು ಹಾಗೂ ಅಧಿಕಾರಿಗಳೇ ಶೇ 80ರಷ್ಟು ದೊಡ್ಡ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಅಂತಹವರು ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಿ

– ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸಭಾಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.