
ನವಲಗುಂದ: ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡುವ ಗ್ರಾಮ ಸಭೆಗೆ ಗ್ರಾಮ ಪಂಚಾಯಿತಿ ಸದಸ್ಯರು ಬಾರದಿರುವುದಕ್ಕೆ ಶಾನವಾಡ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಹಾಳಕುಸುಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾನವಾಡ ಗ್ರಾಮದಲ್ಲಿ ಮಂಗಳವಾರ ವಾರ್ಡ್ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಒಬ್ಬ ಸದಸ್ಯ ಮಾತ್ರ ಮಾತ್ರ ಹಾಜರಿದ್ದರು.
ಉಳಿದ ಸದಸ್ಯರು ಏಕೆ ಬಂದಿಲ್ಲ ಎಂದು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಪ್ರಶ್ನಿಸಿದರು. ಅಲ್ಲದೆ, ಇನ್ನಿತರ ಸದಸ್ಯರು ಬಾರದೆ ಸಭೆ ನಡೆಸಬಾರದು ಎಂದು ಪಟ್ಟು ಹಿಡಿದರು.
‘ಗ್ರಾಮ ಪಂಚಾಯಿತಿ ಸದಸ್ಯರಿಗೆ ಅವರ ಅಧಿಕಾರ ವ್ಯಾಪ್ತಿ, ಕರ್ತವ್ಯಗಳ ಬಗ್ಗೆ ತರಬೇತಿ ನೀಡಿದರೂ ಸಭೆಗೆ ಹಾಜರಾಗದೆ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ಅವರ ಬೇಜವಾಬ್ದಾರಿಯಿಂದಾಗಿ ಗ್ರಾಮದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ’ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಎಫ್.ಗೋಣಾಗರ್ ಮಾತನಾಡಿ, ‘ಸಭೆಗೆ ಬರುವಂತೆ ಎಲ್ಲ ಸದಸ್ಯರಿಗೂ ನೋಟಿಸ್ ನೀಡಲಾಗಿದೆ. ಅಲ್ಲದೆ, ಕರೆ ಮಾಡಿ ತಿಳಿಸಲಾಗಿದೆ. ಆದರೂ ಬಂದಿಲ್ಲ. ಗ್ರಾಮಸ್ಥರು ಬೇಡಿಕೆಯಂತೆ ಅಧ್ಯಕ್ಷರೊಂದಿಗೆ ಚರ್ಚಿಸಿ ಮತ್ತೊಮ್ಮೆ ಸಭೆ ಕರೆಯಲಾಗುವುದು’ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ರವಿ ಗೊಬ್ಬರಗುಂಪಿ, ಮಲ್ಲಿಕಾರ್ಜುನ ಅಂಗಡಿ, ಶರೀಫ ಶಿವಯೋಗಿ ವೀರಪ್ಪನವರ, ಬಸವರಾಜ್ ಮೇಟಿ, ಚನ್ನಬಸಪ್ಪ ನವಲಗುಂದ, ಭೀಮಪ್ಪ ಕನಕನವರ, ಶೇಖರಪ್ಪ ಮರಕುಂಬಿ, ಗ್ವಾಲಪ್ಪ ತಳವಾರ, ಮೋನಯ್ಯ ಹಿರೇಮಠ, ಬಸಯ್ಯ ಹಿರೇಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.