
ಹುಬ್ಬಳ್ಳಿ: ‘ಇಲ್ಲಿನ ಸಿದ್ಧಾರೂಢ ಮಠದಲ್ಲಿ ಫೆ.10ರಿಂದ 18ರವರೆಗೆ ಶಿವರಾತ್ರಿ ಉತ್ಸವ ನಡೆಯಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ’ ಎಂದು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿಯ ಚೇರ್‌ಮನ್ ಚನ್ನವೀರ ಮುಂಗರವಾಡಿ ಹೇಳಿದರು.
ಮಠದ ಸಭಾಗೃಹದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಫೆ.10ರಿಂದ 15ರವರೆಗೆ ನಿತ್ಯ ರಾತ್ರಿ 8ರಿಂದ ಸಂಗೀತೋತ್ಸವ ನಡೆಯಲಿದೆ. ಫೆ.15ರಂದು ಶ್ರೀಗಳವರ ಪಾಲಕಿ ವಾದ್ಯ ಮೇಳಗಳೊಂದಿಗೆ ನಗರದಲ್ಲಿ ಸಂಚರಿಸಿ, ರಾತ್ರಿ ಮಠಕ್ಕೆ ಬಂದ ನಂತರ ಅಹೋರಾತ್ರಿ ಜಾಗರಣೆ ನಡೆಯಲಿದೆ’ ಎಂದರು.
‘ಫೆ.16ರಂದು ಸಂಜೆ 5.30ಕ್ಕೆ ರಥೋತ್ಸವ ನಡೆಯಲಿದೆ. ಕಮಿಟಿಯ ಮುಖ್ಯ ಆಡಳಿತಾಧಿಕಾರಿ ಹಾಗೂ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಚಾಲನೆ ನೀಡುವರು. ಫೆ.18ರಂದು ಸಂಜೆ 6ಕ್ಕೆ ಕೌದಿ ಪೂಜೆ. ನಂತರ ಉತ್ಸವ ಮುಗಿಯಲಿದೆ’ ಎಂದು ತಿಳಿಸಿದರು.
‘ಫೆ.15ರಂದು ಜಾಗರಣೆ. ರಾತ್ರಿ 12ಕ್ಕೆ ಅನಿಗೋಳದ ರಾಮಲಿಂಗೇಶ್ವರ ನಾಟ್ಯಸಂಘದವರು ಸಿದ್ಧಾರೂಢರ ಮಹಾತ್ಮೆ ಕುರಿತ ‘ಶ್ರೀಮನ್ ನಿಜಗುಣ ಶಿವಯೋಗಿಗಳು’ ಎಂಬ ನಾಟಕ ಪ್ರದರ್ಶಿಸುವರು’ ಎಂದರು.
‘ಇಲ್ಲಿನ ವೀರಭದ್ರೇಶ್ವರ ಭಕ್ತ ಮಂಡಳಿಯವರು ಫೆ.15 ಹಾಗೂ 16ರಂದು ಭಕ್ತರಿಗೆ ಉಪಾಹಾರ ಹಾಗೂ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿಸುವರು. ನಗರದ ಕೆಲ ಆಟೊ ಚಾಲಕರು ಜಾತ್ರೆಗೆ ಬರುವ ಪ್ರಯಾಣಿಕರಿಗೆ ಫೆ.15 ಹಾಗೂ 16ರಂದು ಉಚಿತ ಸೇವೆ ನೀಡಲಿದ್ದಾರೆ ಎಂದು ತಿಳಿಸಿದರು.
‘ಅಂಬೇಡ್ಕರ್ ಗ್ರೌಂಡ್, ಹೆಗ್ಗೇರಿ, ಶಿವಪುತ್ರ ಸ್ವಾಮಿಯವರ ಮಠದ ಹತ್ತಿರ (ಗಾರವಾಡ ಜಾಗ) ಹಾಗೂ ಯಾತ್ರಿ ನಿವಾಸದ ಕೆರೆಯ ಪಕ್ಕದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ’ ಎಂದರು.
ಫೆ.17ಕ್ಕೆ ಆರೂಢ ಜ್ಯೋತಿ: ‘ಶಿವರಾತ್ರಿ ಅಮಾವಾಸ್ಯೆ ಅಂಗವಾಗಿ ಫೆ.17ರಂದು ಪುಷ್ಕರಣಿಯಲ್ಲಿ ‘ಆರೂಢ ಜ್ಯೋತಿ’ ನಡೆಯಲಿದೆ. ಉತ್ಸವದಲ್ಲಿ 7ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
175 ಸಿಸಿಟಿವಿ ಕ್ಯಾಮೆರಾ: ಭಕ್ತರ ಸುರಕ್ಷತೆ ಹಾಗೂ ಅನುಕೂಲಕ್ಕಾಗಿ 175 ಕಡೆ ಸಿಸಿಟಿವಿ ಕ್ಯಾಮೆರಾ ಹಾಗೂ ಎಲ್‌ಇಡಿ ಪರದೆಗಳನ್ನೂ ಅಳವಡಿಸಲಾಗುವುದು. ಕುಡಿಯುವ ನೀರಿನ ವ್ಯವಸ್ಥೆ ಹಾಗೂ 25ಕ್ಕೂ ಹೆಚ್ಚು ಮೊಬೈಲ್ ಶೌಚಾಲಯದ ವ್ಯವಸ್ಥೆ ಮಾಡಲಾಗುವುದು‘
‘ಸಿದ್ಧಾರೂಢರ ಜೀವನ ಕುರಿತು ಸಿನಿಮಾ ತೆರೆಯಲು ಮುಂದಾಗಿದ್ದು, ಗಿರೀಶ್ ಕಾಸರವಳ್ಳಿ ನಿರ್ದೇಶನಕ್ಕೆ ಒಪ್ಪಿದ್ದಾರೆ. ಸ್ವರ್ಣಾ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್.ಪ್ರಸಾದ ನಿರ್ಮಿಸಲಿದ್ದಾರೆ. ಕನ್ನಡ, ಹಿಂದಿ, ಮರಾಠಿ ಹಾಗೂ ತೆಲುಗು ಭಾಷೆಯಲ್ಲಿ ಚಿತ್ರ ತೆರೆ ಕಾಣಲಿದೆ‘ ಎಂದು ಹೇಳಿದರು.
ಜಾತ್ರೆಗೆ ಲಕ್ಷಾಂತರ ಜನ ಬರುವುದರಿಂದ ಹಿರಿಯರಿಗೆ ಗರ್ಭಿಣಿಯರಿಗೆ ಅಂಗವಿಕಲರಿಗೆ ಹಾಗೂ ಚಿಕ್ಕ ಮಕ್ಕಳಿಗೆ ನೇರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆಚನ್ನವೀರ ಮುಂಗರವಾಡಿ ಚೇರ್‌ಮನ್ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿ
ಫೆ.15ರಂದು ಭಕ್ತರಿಗೆ ಬೆಳಿಗ್ಗೆ 1ಲಕ್ಷ ಸೆಟ್ ದೋಸೆ 11ಕ್ವಿಂಟಲ್ ಗುಲಾಬ್ ಜಾಮೂನು. 40 ಸಾವಿರ ಚಿಕ್ಕು ಹಣ್ಣು ವಿತರಿಸಲಾಗುವುದು. 16ರಂದು ಬೆಳಿಗ್ಗೆ ಉಪ್ಪಿಟ್ಟು ಮಧ್ಯಾಹ್ನ ಗೋಧಿ ಹುಗ್ಗಿ ಅನ್ನ ಸಾರು ನೀಡಲಾಗುತ್ತದೆಬಸವರಾಜ ಕಲ್ಯಾಣಶೆಟ್ಟರ ಮಠದ ಧರ್ಮದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.