ADVERTISEMENT

ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ನಾವೇ ಮಚ್ಚಿನಿಂದ ಕೊಚ್ಚಿ ಹಾಕುತ್ತೇವೆ: ಮುತಾಲಿಕ್‌

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2022, 9:39 IST
Last Updated 12 ಮಾರ್ಚ್ 2022, 9:39 IST
ಪ್ರಮೋದ್‌ ಮುತಾಲಿಕ್‌
ಪ್ರಮೋದ್‌ ಮುತಾಲಿಕ್‌   

ಹುಬ್ಬಳ್ಳಿ: ಹಿಂದೂ ಯವತಿಯನ್ನು ಮದುವೆಯಾಗಿ ಮಚ್ಚಿನಿಂದ ಹಲ್ಲೆ ಮಾಡಿರುವ ಆಕೆಯ ಪತಿ ಇಜಾಜ್ ಶಿರೂರು ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜೈಲಿನಿಂದ ಹೊರಬಂದ ಬಳಿಕ ನಾವೇ ಆತನನ್ನು ಕೊಚ್ಚಿ ಹಾಕುತ್ತೇವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಆಕ್ರೋಶ ಹೊರಹಾಕಿದರು.

ಗದುಗಿನ ಅಪೂರ್ವ ಪುರಾಣಿಕ ಎಂಬುವವರನ್ನು ಹುಬ್ಬಳ್ಳಿಯ ಕೌಲಬಜಾರ್ ನಿವಾಸಿ ಇಜಾಜ್ ಶಿರೂರು ಎಂಬ ಮುಸ್ಲಿಂ ಯುವಕ ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ 2018ರಲ್ಲಿ ಮದುವೆಯಾಗಿದ್ದರು. ಮೂರು ದಿನಗಳ ಹಿಂದೆ ಪತ್ನಿ ಮೇಲೆ 28 ಬಾರಿ ಮಚ್ಚಿನಿಂದ ಹಲ್ಲೆ ಮಾಡಿದ್ದರು. ಅಪೂರ್ವ ಈಗ ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಮೋದ್‌ ಮುತಾಲಿಕ್ ‘ಮುಸ್ಲಿಂ ಯುವಕರ ಪ್ರೇಮದಲ್ಲಿ ಬೀಳುವ ಮೊದಲು ಹಿಂದೂ ಯುವತಿಯರು ಸಾಕಷ್ಟು ಯೋಚಿಸಬೇಕು. ಈಗ ಅಪೂರ್ವಗೆ ಆದ ಪರಿಸ್ಥಿತಿ ನೆನಪಿಸಿಕೊಳ್ಳಬೇಕು. ಆರೋಪಿಯನ್ನು ಪೊಲೀಸರು 24 ಗಂಟೆಯಲ್ಲಿ ಬಂಧಿಸಿದ್ದು ಶ್ಲಾಘನೀಯ. ಆರೋಪಿ ವಿರುದ್ಧ ಕಠಿಣ ಪ್ರಕರಣ ದಾಖಲಿಸಬೇಕು. ಚಿಲ್ಲರೆ ಪ್ರಕರಣ ದಾಖಲಿಸಿದರೆ ಜೈಲಿನಿಂದ ಹೊರಬಂದ ಮೇಲೆ ನಾವೇ ಕೊಚ್ಚಿ ಹಾಕುತ್ತೇವೆ’ ಎಂದರು.

ADVERTISEMENT

ಲವ್ ಜಿಹಾದ್ ಹೆಸರಲ್ಲಿ ಹಿಂದೂ ಯುವತಿಯರ ಮೇಲೆ ದೌರ್ಜನ್ಯವಾಗದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಶ್ರೀರಾಮ ಸೇನೆಯಿಂದ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.