ಹುಬ್ಬಳ್ಳಿ: ವೇಗವಾಗಿ ಬೆಳೆಯುತ್ತಿರುವ ಹುಬ್ಬಳ್ಳಿ ನಗರದಲ್ಲಿ ವಾಹನಗಳ ಸಂಖ್ಯೆಯೂ ದಿನೇದಿನೆ ಹೆಚ್ಚುತ್ತಲೇ ಇದೆ. ವಾಹನ ದಟ್ಟಣೆಯನ್ನು ನಿಯಂತ್ರಿಸಿ ಸಂಚಾರ ಸುಗಮಗೊಳಿಸಲು ಟ್ರಾಫಿಕ್ ಸಿಗ್ನಲ್ ದೀಪಗಳ ಸಮರ್ಪಕ ನಿರ್ವಹಣೆ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ವಾರ್ಷಿಕ ಲಕ್ಷಾಂತರ ರೂಪಾಯಿ ವ್ಯಯಿಸಿದರೂ ಸಂಚಾರ ವ್ಯವಸ್ಥೆ ಸುಗಮಗೊಳಿಸುವಲ್ಲಿ ಸಿಗ್ನಲ್ ವ್ಯವಸ್ಥೆ ಸಂಪೂರ್ಣ ಯಶಸ್ವಿಯಾಗಿಲ್ಲ.
ಹುಬ್ಬಳ್ಳಿ–ಧಾರವಾಡ ನಡುವೆ ಬಿಆರ್‌ಟಿಎಸ್ ಸಂಚಾರ ಆರಂಭವಾದ ನಂತರ ಈ ಮಾರ್ಗದಲ್ಲಿ ಅಳವಡಿಸಲಾದ ಸಿಗ್ನಲ್ ದೀಪಗಳು ಒಂದು ಹಂತಕ್ಕೆ ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ. ಉಳಿದಂತೆ ಹುಬ್ಬಳ್ಳಿ ನಗರದಲ್ಲಿ ವಾಹನ ದಟ್ಟಣೆ ಇರುವ ಪ್ರಮುಖ ವೃತ್ತಗಳಲ್ಲಿ ಅಳವಡಿಸಿರುವ ಹೆಚ್ಚಿನ ಸಿಗ್ನಲ್ ದೀಪಗಳು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿಲ್ಲ. ಇದರಿಂದ ಸಂಚಾರ ದಟ್ಟಣೆ ಹೆಚ್ಚಿ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ.
ನಗರದ ಕೇಶ್ವಾಪುರ ಸರ್ವೋದಯ ವೃತ್ತ, ರಮೇಶ ಭವನ ವೃತ್ತದಲ್ಲಿ ಇದ್ದ ಸಿಗ್ನಲ್ ದೀಪಗಳನ್ನು ಸೋಲಾಪುರ ರಸ್ತೆ ವಿಸ್ತರಣೆ ವೇಳೆ ತೆರವು ಮಾಡಲಾಗಿತ್ತು. ರಸ್ತೆ ಕಾಮಗಾರಿ ಮುಗಿದ ಬಳಿಕ ಮತ್ತೆ ದೀಪಗಳನ್ನು ಅಳವಡಿಸಲಾಗಿದ್ದರೂ ಅವುಗಳು ಕೆಲಸ ಮಾತ್ರ ಮಾಡುತ್ತಿಲ್ಲ. ಇಲ್ಲಿ ಆದಷ್ಟು ಬೇಗ ಸಿಗ್ನಲ್ ಸರಿಪಡಿಸಿದರೆ ಸಂಚಾರ ಸುಗಮವಾಗಿ ಜನರಿಗೆ ಅನುಕೂಲವಾಗಲಿದೆ ಎಂಬುದು ಈ ಭಾಗದಲ್ಲಿ ನಿತ್ಯ ಸಂಚರಿಸುವ ಅನಂತರಾಜ್ ಎಂಬುವವರ ಒತ್ತಾಯ. ಆದರೆ, ರಸ್ತೆ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ, ಆದ್ದರಿಂದ ಸಿಗ್ನಲ್ ಮರುಸ್ಥಾಪಿಸಿದರೆ ಸಮಸ್ಯೆ ಆಗುತ್ತದೆ ಎಂದು ಸಂಚಾರ ನಿಯಂತ್ರಣ ವಿಭಾಗದ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.
ರೈಲ್ವೆ ನಿಲ್ದಾಣದಿಂದ ಸ್ಟೇಷನ್ ರಸ್ತೆಗೆ ಸಂಪರ್ಕಿಸುವಲ್ಲಿ ಸಿಗ್ನಲ್ ಇದ್ದರೂ ಅದು ಕಾರ್ಯನಿರ್ವಹಿಸುತ್ತಿಲ್ಲ. ಬಸ್, ಆಟೊ ಮತ್ತಿತರ ಖಾಸಗಿ ವಾಹನಗಳು ನಿರಂತರವಾಗಿ ರೈಲ್ವೆ ನಿಲ್ದಾಣದಿಂದ ಬರುತ್ತಲೇ ಇರುತ್ತವೆ. ಅಲ್ಲದೆ, ಸಿಬಿಟಿ ಕಡೆಗೆ ಹೋಗುವ ಮತ್ತು ಅತ್ತಲಿಂದ ಬರುವ ವಾಹನಗಳ ದಟ್ಟಣೆಯೂ ಹೆಚ್ಚೇ ಇರುತ್ತದೆ. ಆದರೆ ಇವುಗಳನ್ನು ನಿಯಂತ್ರಿಸುವ ಸಮರ್ಪಕ ಸಿಗ್ನಲ್ ವ್ಯವಸ್ಥೆ ಇಲ್ಲ.
ಇನ್ನು, ಲ್ಯಾಮಿಂಗ್ಟನ್ ರಸ್ತೆಯಲ್ಲಿ ಕಾರ್ಪೊರೇಷನ್ ಎದುರು, ಅಂಬೇಡ್ಕರ್ ವೃತ್ತ, ಬೆಂಗಳೂರು ರಸ್ತೆಗೆ ಹೋಗುವ ಬಂಕಾಪುರ ರಸ್ತೆ, ಡಾಕಪ್ಪನ ವೃತ್ತ, ಭಾರತ್ ಮಿಲ್, ಹೊಸೂರು ವೃತ್ತ, ಗೋಕುಲ ರಸ್ತೆಯ ಗ್ರಾಮೀಣ ಬಸ್ ಡಿಪೊ ಬಳಿ ಇರುವ ಸಿಗ್ನಲ್ ಕಾರ್ಯಾಚರಣೆ ಸರಿ ಇದೆಯಾದರೂ ಕೆಲವು ಸಂದರ್ಭದಲ್ಲಿ ಕಾರ್ಯನಿರ್ವಹಿಸುವುದಿಲ್ಲ.
ರಸ್ತೆ ವಿಸ್ತರಣೆ ವೇಳೆ ತೆಗೆದಿರುವ ಇಂಡಿ ಪಂಪ್, ಸಿದ್ಧಾರೂಢ ಮಠದ ರಸ್ತೆಗೆ ಇದ್ದ ಸಿಗ್ನಲ್‌ಗಳನ್ನು ರಸ್ತೆ ಕಾಮಗಾರಿ ಮುಗಿದ ಬಳಿಕ ಮತ್ತೆ ಅಳವಡಿಸಿಲ್ಲ. ಗೋಕುಲ ರಸ್ತೆಯಿಂದ ಅಕ್ಷಯ ಪಾರ್ಕ್ ಕಡೆ ಸಂಪರ್ಕಿಸುವ ಸ್ಥಳದಲ್ಲಿ ಇರುವ ಸಿಗ್ನಲ್ ಅವೈಜ್ಞಾನಿಕವಾಗಿದೆ ಎಂಬ ಆರೋಪವೂ ಇದೆ.
ಬಿಆರ್‌ಟಿಎಸ್ ಮಾರ್ಗದಲ್ಲಿ ತೀರಾ ಅಗತ್ಯವಿಲ್ಲದ ಕೆಲವು ಕಡೆಗಳಲ್ಲಿ ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ. ಎಡಕ್ಕೆ ಸಂಚರಿಸಬೇಕಿರುವವರು ಸರಾಗವಾಗಿ ಸಾಗುವ ಅವಕಾಶವಿದ್ದರೂ ಕೆಂಪು ದೀಪ ಬರುವ ಕಾರಣ ನಿಂತು, ಸಮಯ ವ್ಯರ್ಥ ಮಾಡಬೇಕಾಗುತ್ತದೆ.
‘ಸಿಗ್ನಲ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ಸಂಚಾರ ಅಸ್ತವ್ಯಸ್ತವಾಗುತ್ತದೆ. ದಟ್ಟಣೆ ಹೆಚ್ಚುತ್ತದೆ. ವಾಹನಗಳು ಬೇಕಾಬಿಟ್ಟಿ ಓಡಾಡುತ್ತಾರೆ. ಇದರಿಂದ ನಮಗೆ ಸಮಸ್ಯೆ ಆಗುತ್ತದೆ. ಸಿಗ್ನಲ್ ಸರಿ ಇದ್ದಾಗಲೂ ಕೆಲವರು ಅದನ್ನು ಲೆಕ್ಕಿಸುವುದಿಲ್ಲ. ಸಿಗ್ನಲ್ ಸರಿ ಮಾಡುವುದು ಮಾತ್ರವೇ ಅಲ್ಲ, ಜನರು ತಮ್ಮ ಮನಸ್ಥಿತಿಯನ್ನೂ ಬದಲಾಯಿಸಿಕೊಳ್ಳಬೇಕು’ ಎಂದು ನಗರದ ನಿವಾಸಿ ಅರ್ಪಿತಾ ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದರು.
‘ಹೆಚ್ಚಿನ ಅಧಿಕಾರಿಗಳಿಗೆ ನಗರಕ್ಕೆ ಏನಾದರೂ ಒಳ್ಳೆಯದು ಮಾಡಬೇಕು ಎಂಬ ಆಸಕ್ತಿಯೇ ಇಲ್ಲ. ಸ್ವತಃ ನಾನೇ ಅಧಿಕಾರಿಯನ್ನು ಸ್ಥಳಕ್ಕೆ ಕರೆದೊಯ್ದು ಸಮಸ್ಯೆ ವಿವರಿಸಿ, ಪರಿಹಾರ ತಿಳಿಸಿದರೂ ಅದನ್ನು ಅನುಷ್ಠಾನಕ್ಕೆ ತರುವ ಮನಸ್ಥಿತಿ ಅವರಲ್ಲಿ ಇಲ್ಲ. ನಗರದಲ್ಲಿ ನಿರ್ಮಾಣ ಆಗುತ್ತಿರುವ ಪ್ಲೈ ಓವರ್ ಕಾಮಗಾರಿ ಪೂರ್ಣಗೊಂಡ ಬಳಿಕ ಸರಿಪಡಿಸಲಾಗುವುದು ಎಂದು ಉತ್ತರ ಕೊಡುತ್ತಾರೆ. ಪ್ಲೈ ಓವರ್ ಕಾಮಗಾರಿ ಮುಗಿಯಲು ಇನ್ನೂ ಎರಡು ವರ್ಷವಾದರೂ ಬೇಕು. ಆಗ ಈ ಸಮಸ್ಯೆ ಇರಲಿಕ್ಕಿಲ್ಲ, ಸಮಸ್ಯೆ ಇರುವುದು ಈಗ. ಈಗಲೇ ಪರಿಹಾರ ಮಾಡಬೇಕಲ್ಲವೇ’ ಎಂದು ಅನಂತರಾಜ್ ಅವರು ಬೇಸರ ವ್ಯಕ್ತಪಡಿಸುತ್ತಾರೆ.
ಪ್ಲೈ ಓವರ್ ರಸ್ತೆ ನಿರ್ಮಾಣ ಕಾರಣದಿಂದ ಸಿಗ್ನಲ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ವಾರ್ಷಿಕ ನಿರ್ವಹಣಾ ಗುತ್ತಿಗೆಯೂ ನವೀಕರಣ ಆಗದೇ ಇರುವುದರಿಂದ ಸಮಸ್ಯೆ ಆಗಿದೆರವೀಶ್ ಸಿ.ಆರ್. ಡಿಸಿಪಿ ಸಂಚಾರ ವಿಭಾಗ
ನವೀಕರಣ ಆಗದ ಎಎಂಸಿ
‘ಪ್ಲೈ ಓವರ್ ಕಾಮಗಾರಿ ಚಾಲ್ತಿಯಲ್ಲಿರುವುದರಿಂದ ಬಹುತೇಕ ಟ್ರಾಫಿಕ್ ಸಿಗ್ನಲ್‌ಗಳನ್ನು ತೆರವು ಮಾಡಲಾಗಿದೆ. ಸದ್ಯ ನಾಲ್ಕು ಸಿಗ್ನಲ್‌ಗಳು ಮಾತ್ರವೇ ಕಾರ್ಯನಿರ್ವಹಿಸುತ್ತಿವೆ. ಪ್ಲೈ ಓವರ್ ಕಾಮಗಾರಿ ಪೂರ್ಣ ಆಗುವವರೆಗೂ ಬೇರೆ ಯಾವ ಸಿಗ್ನಲ್‌ಗಳನ್ನೂ ಆರಂಭಿಸಲು ಅವಕಾಶವಿಲ್ಲ. ಕಾರ್ಯನಿರ್ವಹಿಸುತ್ತಿರುವ ಸಿಗ್ನಲ್‌ಗಳಿಗೆ ಮಾತ್ರ ವಾರ್ಷಿಕ ನಿರ್ವಹಣಾ ಗುತ್ತಿಗೆ (ಎಎಂಸಿ) ನೀಡಲಾಗುತ್ತಿದೆ’ ಎಂದು ಸಂಚಾರ ವಿಭಾಗದ ಸಹಾಯಕ ಆಯುಕ್ತ ವಿನೋದ ಮುಕ್ತೇದಾರ ತಿಳಿಸಿದರು. ‘ಪ್ಲೈ ಓವರ್ ಕೋರ್ಟ್ ವೃತ್ತದಿಂದ ಮುಂದೆಯೂ ಬರಲಿದೆಯೇ ಎಂಬ ಗೊಂದಲ ಇದೆ. ಆದ್ದರಿಂದ ಕೇಶ್ವಾಪುರದ ಸರ್ವೋದಯ ವೃತ್ತ ರಮೇಶ ಭವನ ವೃತ್ತದಲ್ಲಿ ಸಿಗ್ನಲ್ ಕಾರ್ಯಾಚರಣೆ ಆರಂಭಿಸಲು ವಿಳಂಬವಾಗುತ್ತಿದೆ’ ಎಂದು ಅವರು ಮಾಹಿತಿ ನಿಡಿದರು.
ಸಿಗ್ನಲ್ ನಿಷ್ಕ್ರಿಯ; ಸಂಚಾರ ತಾಪತ್ರಯ
-ಬಿ.ಜೆ.ಧನ್ಯಪ್ರಸಾದ್
ಧಾರವಾಡ: ನಗರದ ಕೆಲವೆಡೆ ಟ್ರಾಫಿಕ್ ಸಿಗ್ನಲ್ ದೀಪಗಳು ಇದ್ದೂ ಇಲ್ಲದಂತಾಗಿವೆ ಕೆಲವೆಡೆ ಹಳದಿ ದೀಪ ಮಾತ್ರ ‘ಬ್ಲಿಂಕ್’ ಆಗುತ್ತಿರುತ್ತದೆ. ಈ ಭಾಗಗಳಲ್ಲಿ ಸಂಚಾರ ತಾಪತ್ರಯವಾಗಿದೆ. ಕೋರ್ಟ್ ವೃತ್ತ ಬಿಆರ್‌ಟಿಎಸ್ ನಿಲ್ಧಾಣ (ಪಾಲಿಕೆ ಕಚೇರಿ ಮುಂಭಾಗ) ಟೋಲ್ ನಾಕಾ ಪ್ರದೇಶದಲ್ಲಿನ ಹಳದಿ ದೀಪ ಮಾತ್ರ ಬ್ಲಿಂಕ್ ಆಗುತ್ತವೆ. ಇನ್ನು ಕೆಸಿಡಿ ವೃತ್ತ ಹಳಿಯಾಳ ನಾಕಾ ವೃತ್ತ ಜಿ.ಆರ್. ನಲವಡಿ ವೃತ್ತ (ಡಿ.ಸಿ ಕಚೇರಿ ಸಮೀಪ) ಪ್ರದೇಶಗಳಲ್ಲಿನ ಸಿಗ್ನಲ್ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ. ಅವಳಿನಗರ ಸಂಪರ್ಕ ಮಾರ್ಗದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚು ಇರುತ್ತದೆ. ಪಾದಚಾರಿಗಳು ಕೋರ್ಟ್ ವೃತ್ತ ಟೋಲ್ ನಾಕಾ ಮತ್ತು ಕೆಲವೆಡೆ ರಸ್ತೆಯ ಒಂದು ಬದಿಯಿಂದ ಮತ್ತೊಂದು ಕಡೆಗೆ ವಾಹನಗಳ ನಡುವೆಯ ದಾಟಬೇಕಾದ ಸ್ಥಿತಿ ಇದೆ. ಬಿಆರ್‌ಟಿಎಸ್ ನಿಲ್ದಾಣ ಪ್ರದೇಶ ಸುತ್ತಲಿನ ಪ್ರದೇಶದಲ್ಲಿ ಜನಜಂಗುಳಿ ವಾಹನ ದಟ್ಟಣೆ ಹೆಚ್ಚು ಇರುತ್ತದೆ. ಇಲ್ಲಿ ಅಳವಡಿಸಿರುವ ಸಿಗ್ನಲ್ ವ್ಯವಸ್ಥೆ ‘ಬ್ಲಾಂಕ್’ (ಹಳದಿ ದೀಪ ಮಾತ್ರ ಮಿನುಗುವ) ಸ್ಥಿತಿ) ಆಗಿದೆ. ‘ಕೋರ್ಟ್ ವೃತ್ತದಲ್ಲಿ ವಾಹನಗಳ ದಟ್ಟಣೆ ಹೆಚ್ಚು. ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ದಾಟುವುದಕ್ಕೆ ಹರಸಾಹಸಪಡಬೇಕಾದ ಸ್ಥಿತಿ ಇದೆ’ ಎಂದು ವಿದ್ಯಾರ್ಥಿನಿ ಪೂರ್ಣಿಮಾ ಮಾಳಗಿಮನಿ ತಿಳಿಸಿದರು. ಈಗ ನಗರ ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿರುವುದರಿಂದ ಪಾಲಿಕೆ ಹಿಂಭಾಗದ ರಸ್ತೆಯಿಂದ ನಗರ ಸಾರಿಗೆಯ ಹಲವು ಬಸ್‌ಗಳು ಸಂಚರಿಸುತ್ತವೆ. ಪಾಲಿಕೆ ಮುಂಭಾಗದ ರಸ್ತೆಯಲ್ಲಿ ಕಲವೊಮ್ಮೆ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ‘ಬಿಆರ್‌ಟಿಎಸ್ ನಿಲ್ದಾಣ ಬಳಿಯ ಟ್ರಾಫಿಕ್ ಸಿಗ್ನಲ್ ಲೈಟ್ ಕಾರ್ಯನಿರ್ವಹಿಸುವಂತೆ ವ್ಯವಸ್ಥೆ ಮಾಡಬೇಕು. ಪಾಲಿಕೆ ಮುಂಭಾಗದಲ್ಲಿ ಬಹಳಷ್ಟು ಬಾರಿ ಬಸ್‌ಗಳು ಸಾಲುಗಟ್ಟಿ ನಿಂತಿರುತ್ತವೆ. ಬಸ್‌ಗಳ ಸಾಲಿನ ನಡುವೆ ಆಟೊ ರಿಕ್ಷಾ ಚಲಾಯಿಸುವುದು ಸವಾಲಾಗಿದೆ’ ಎಂದು ರಿಕ್ಷಾ ಚಾಲಕ ಭೀಮಪ್ಪ ನಿಡಗುಂದಿ ಸಂಕಷ್ಟ ತೋಡಿಕೊಂಡರು. ಜಿ.ಆರ್. ನಲವಡಿ ವೃತ್ತ ಕೆಸಿಡಿ ವೃತ್ತ ಹಳಿಯಾಳ ನಾಕಾ ವೃತ್ತದಲ್ಲಿನ ಅಳವಡಿಸಿರುವ ಸಿಗ್ನಲ್ ದೀಪಗಳ ಕಂಬಗಳ ತುಕ್ಕುಹಿಡಿಯುತ್ತಿವೆ. ದೀಪಗಳು ಹಾಳಾಗಿವೆ. ‘ಅವಳಿನಗರದ ಮಾರ್ಗದಲ್ಲಿ ವಾಹನ ಸಂಚಾರ ಹೆಚ್ಚು ಇದೆ. ಕೆಲವೆಡೆ ಸಿಗ್ನಲ್ ದೀಪಗಳು ಹಾಳಾಗಿವೆ. ಮೇಲಧಿಕಾರಿಗಳಿಗೆ ತಿಳಿಸಲಾಗಿದೆ’ ಎಂದು ಸಂಚಾರ ಪೊಲೀಸರೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.