
ಹುಬ್ಬಳ್ಳಿ: ‘ಉತ್ತರ ಕರ್ನಾಟಕ ಭಾಗದ ಕೃಷಿ ಉತ್ಪನ್ನಗಳು ಹಾಗೂ ಸಿರಿಧಾನ್ಯಗಳ ರಫ್ತು ಕೈಗೊಳ್ಳಲು ವಿಪುಲ ಅವಕಾಶಗಳಿವೆ’ ಎಂದು ಬೆಂಗಳೂರಿನ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ (ವಿಟಿಪಿಸಿ) ಜಂಟಿ ನಿರ್ದೇಶಕ ಬಾಬು ನಾಗೇಶ ತಿಳಿಸಿದರು.
ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ (ಕೆಸಿಸಿಐ) ವಿಟಿಪಿಸಿ, ಕೃಷಿ ಇಲಾಖೆ ಸಹಯೋಗದಲ್ಲಿ ಕರ್ನಾಟಕ ರೈತ ಸಮೃದ್ಧಿ ಯೋಜನೆ ನೆರವಿನೊಂದಿಗೆ ಆಯೋಜಿಸಿರುವ ಆರು ದಿನಗಳ ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
‘ತರಬೇತಿಯ ನಂತರ ರಫ್ತು ಕೈಗೊಳ್ಳಲು ವಿಟಿಪಿಸಿ ಬೆಂಗಾವಲಾಗಿ ನಿಲ್ಲಲಿದೆ’ ಎಂದ ಅವರು, ರಫ್ತುದಾರರಾಗಲು ಇರುವ ಅವಕಾಶಗಳನ್ನು ವಿವರಿಸಿದರು.
ಧಾರವಾಡದ ವಿಟಿಪಿಸಿ ಉಪ ನಿರ್ದೇಶಕ ಟಿ.ಎಸ್. ಮಲ್ಲಿಕಾರ್ಜುನ, ‘ಶಿಬಿರದಲ್ಲಿ ರಫ್ತು ವ್ಯಾಪಾರದ ಜ್ಞಾನ ಪಡೆದು ರಫ್ತುದಾರರಾಬೇಕು’ ಎಂದು ಕೋರಿದರು.
30 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಕೆಸಿಸಿಐ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಿದ್ದೇಶ್ವರ ಕಮ್ಮಾರ, ಸಹಾಯಕ ಕಾರ್ಯದರ್ಶಿ ನಂದೀಶ ಅಣ್ಣಿಗೇರಿ, ಗೌರವ ಕಾರ್ಯದರ್ಶಿ ಉದಯ ರೇವಣಕರ ಇದ್ದರು.
ಸುಸ್ಥಿರ ಕೃಷಿ ಅಳವಡಿಸಿಕೊಂಡು ವೈವಿಧ್ಯಮಯ ಬೆಳೆ ಉತ್ಪಾದಿಸುವ ಜೊತೆಗೆ ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಿ ಮೌಲ್ಯವರ್ಧನೆ ಕೈಗೊಂಡು ರಫ್ತು ಮಾಡಿದರೆ ಹೆಚ್ಚಿನ ಲಾಭ ಗಳಿಸಲು ಸಾಧ್ಯಮಂಜುನಾಥ ಅಂತರವಳ್ಳಿ ಕೃಷಿ ಇಲಾಖೆ ಜಂಟಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.